ಚಿಕ್ಕಬಳ್ಳಾಪುರ: ‘ರಾಮ ಮಂದಿರ ಜನರ ಭಕ್ತಿಯ ಪ್ರತಿರೂಪ. ಅದನ್ನು ಅಪೂರ್ಣ ಎನ್ನಲು ಸಾಧ್ಯವಿಲ್ಲ’ ಎಂದು ಈಶಾ ಯೋಗ ಕೇಂದ್ರದ ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.
ತಾಲ್ಲೂಕಿನ ಆವಲಗುರ್ಕಿಯ ಈಶಾ ಯೋಗಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯ ಎನ್ನುವುದು ಎಂದಿಗೂ ಅಪೂರ್ಣವಲ್ಲ. ದೇವಾಲಯದಲ್ಲಿ ನಿರಂತರವಾಗಿ ಒಂದಿಲ್ಲಾ ಒಂದು ಅಭಿವೃದ್ಧಿ ಕೆಲಸವನ್ನು ಭಕ್ತರು ಮಾಡುತ್ತಿರುತ್ತಾರೆ. ಇದು ಭಕ್ತನ ಪ್ರವೃತ್ತಿ ಎಂದು ಸಮರ್ಥಿಸಿಕೊಂಡರು.
ರಾಮ ಮಂದಿರ ಮೂರು ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿದೆ. ಈಗ ಮೊದಲ ಅಂತಸ್ತು ಪೂರ್ಣವಾಗಿದ್ದು ಉದ್ಘಾಟನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಅಂತಸ್ತುಗಳು ಪೂರ್ಣವಾದಾಗಲೂ ಕಾರ್ಯಕ್ರಮ ನಡೆಯಲಿವೆ ಎಂದರು.
9.33 ಕೋಟಿ ಸಸಿ: ಕಾವೇರಿ ಕೂಗು ಅಭಿಯಾನದಲ್ಲಿ ರೈತರು 9.33 ಕೋಟಿ ಸಸಿ ನೆಟ್ಟಿದ್ದಾರೆ. ಇದಕ್ಕೆ ಇಸ್ರೊ ಸಹಕಾರದಲ್ಲಿ ಜಿಯೊ ಟ್ಯಾಗ್ ಮಾಡಲಾಗಿದೆ. ಯಾವ ಸಸಿ ಎಷ್ಟು ಬೆಳೆಯುತ್ತಿದೆ ಎನ್ನುವ ಮಾಹಿತಿಯನ್ನು ಇಸ್ರೊ ನೀಡುತ್ತಿದೆ ಎಂದರು.
‘ಕಾವೇರಿ ನಡೆದು ಬಂದರೆ ನಮಗೆ ಸಂಪತ್ತು. ಓಡಿ ಬಂದರೆ ಪ್ರವಾಹ’ ಎನ್ನುವ ಗಾದೆ ತಮಿಳಿನಲ್ಲಿದೆ. ಆ ಪ್ರಕಾರ ಬಿದ್ದ ನೀರು ಭೂಮಿಯಲ್ಲಿ ಇಂಗಿ ಮೆದುವಾಗಿ ಹರಿಯಬೇಕು. ಆದರೆ ಗಿಡ, ಮರಗಳೇ ಇಲ್ಲದ ಕಾರಣ ಭೂಮಿಯಲ್ಲಿ ನೀರು ಇಂಗುತ್ತಿಲ್ಲ. ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಜಗಳ ನಡೆಯುತ್ತಲೇ ಇದೆ. ಆದರೆ ಕಾವೇರಿಯಲ್ಲಿ ನೀರು ಏಕೆ ಇಲ್ಲ ಎನ್ನುವ ಬಗ್ಗೆ ಆಲೋಚಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.