ADVERTISEMENT

ಕಿಚ್ಚು ಹಚ್ಚಿದ ಜಲಿಯನ್ ‌ವಾಲಾಬಾಗ್

ಎ.ಎಸ್.ಜಗನ್ನಾಥ್
Published 12 ಮಾರ್ಚ್ 2021, 2:40 IST
Last Updated 12 ಮಾರ್ಚ್ 2021, 2:40 IST
ವಿದುರಾಶ್ವತ್ಥದಲ್ಲಿನ ವೀರಸೌಧ
ವಿದುರಾಶ್ವತ್ಥದಲ್ಲಿನ ವೀರಸೌಧ   

ಗೌರಿಬಿದನೂರು: ದೇಶದ ಎರಡನೇ ಜಲಿಯನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದ ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆಯುತ್ತಿದೆ. ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಪ್ರಕರಣವು ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲೇ ಅಚ್ಚಳಿಯದೇ ಉಳಿಯುವ ಘಟನೆ. ಹಳೆ ಮೈಸೂರು ‌ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಲು ವಿದುರಾಶ್ವತ್ಥದಲ್ಲಿ ನಡೆದ ಗೋಲಿಬಾರ್ ಕೂಡ ಸ್ಫೂರ್ತಿ.

ಅಂದಿನ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ ನದಿ ದಂಡೆಯಲ್ಲಿರುವ ವಿದುರಾಶ್ವತ್ಥದ ವಿದುರ ನಾರಾಯಣಸ್ವಾಮಿ ದೇಗುಲದಿಂದ ಹೆಸರು ಪಡೆದ ಈ ಊರು ಹತ್ಯಾಕಾಂಡದ ನಂತರ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರ ‌ಬಿಂದು ಎಂದು ಖ್ಯಾತಿ ಪಡೆದಿದೆ.

ಮಳೆಗಾಲದಲ್ಲಿ ‌ಮಾತ್ರ ಹರಿಯುವ ನದಿಯ ಬದಿಯಲ್ಲಿರುವ ವಿದುರಾಶ್ವತ್ಥದಲ್ಲಿ ಸುಮಾರು 77 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡ ಇಂದಿನ ತಲೆಮಾರಿನ ಮನದಾಳದಲ್ಲಿ ಅಚ್ಚಳಿಯದೆ ನೆಲೆನಿಂತಿದೆ. ಅಂದು ಭಾರತೀಯರ ಮೇಲೆ ನಡೆದಿದ್ದ ಅಮಾನವೀಯ ಹಿಂಸಾಕಾಂಡ ಅದರಲ್ಲಿ ಅಸುನೀಗಿರುವ ಯೋಧರನ್ನು ಕುರಿತು ಲಾವಣಿಗಳನ್ನು ಜನಪದರು ಈಗಲೂ ಹಾಡುತ್ತಾರೆ.

ADVERTISEMENT

ಅಂದು ನಡೆದಿದ್ದೇನು?: 1938ರ ಏಪ್ರಿಲ್ 24ರಂದು ಘಟಿಸಿದ ಹತ್ಯಾಕಾಂಡದ ಬಗ್ಗೆ ಅನೇಕ ಇತಿಹಾಸಕಾರರು ಬರೆದಿದ್ದಾರೆ. ಅಂದು ತಾಲ್ಲೂಕು ‌ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಏರ್ಪಾಟಾಗಿತ್ತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರಧ್ವಜಗಳೊಡನೆ ಗೌರಿಬಿದನೂರು ನಗರದಿಂದ ವಿದುರಾಶ್ವತ್ಥಕ್ಕೆ ಮೆರವಣಿಗೆ ಮೂಲಕ ಬಂದಿದ್ದರು. ಬೆಳಿಗ್ಗೆ 10 ಗಂಟೆ ವೇಳೆಗೆ ವಿದುರನಾರಾಯಣಸ್ವಾಮಿ ದೇವಾಲಯದ ಬಳಿಗೆ ಮೆರವಣಿಗೆ ಬಂದು 10-15 ಸಾವಿರ ಸಾರ್ವಜನಿಕರು, ಭಕ್ತರು ಆವರಣದಲ್ಲಿ ಜಮಾವಣೆಯಾಗಿದ್ದರು. ದೇವಾಲಯದ ಹಿಂಬದಿಯಲ್ಲಿದ್ದ ವಿಶಾಲವಾದ ಮರಗಳ ತೋಪಿನಲ್ಲಿ ಜನಸಮೂಹ ಪ್ರವೇಶಿಸಿ ಸಭೆಯಲ್ಲಿ ಭಾಗವಹಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಟಿ.ರಾಮಾಚಾರ್ ಈ ಸಭೆಗೆ ಆಹ್ವಾನಿತರಾಗಿದ್ದು, ಮೆರವಣಿಗೆಯ ನಾಯಕತ್ವ ವಹಿಸಿದ್ದರು.

ಸಾರ್ವಜನಿಕ ಸಭೆಯಾಗಿ ಪರಿವರ್ತಿತವಾದ ಅಂದಿನ ಕಾಂಗ್ರೆಸ್ ಪಕ್ಷದ ಸಭೆ ಆರಂಭವಾಗುವ ಮುನ್ನವೇ ಶಸ್ತ್ರಸಜ್ಜಿತ ಬ್ರಿಟಿಷ್ ಪೊಲೀಸರು ವೇದಿಕೆಯ ಸುತ್ತ ಆವರಿಸಿದರು. ಈ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಸಭೆ ನಡೆಸಲು ನಾಯಕರು ಮುಂದಾದರು. ಆದರೆ ಸಭೆಗೆ ಅವಕಾಶ ನೀಡಬಾರದು ಎಂಬ ತೀರ್ಮಾನವನ್ನು ಆಗಿನ ಅಮಲ್ದಾರ್ ರಾಜಶೇಖರ್ ಒಡೆಯರ್ ಜಾರಿಗೊಳಿಸಲು ಮುಂದಾದರು. ಆದರೂ ಜನ ಸಭೆಯಿಂದ ಕದಲಲಿಲ್ಲ. ರಾಷ್ಟ್ರದ ಧ್ವಜಗಳನ್ನು ಕೈಯಲ್ಲಿ ಹಿಡಿದಿದ್ದ ಸೂರಣ್ಣ, ನಾರಾಯಣಸ್ವಾಮಿ, ಡಿ.ಪಾಳ್ಯದ ಶ್ರೀನಿವಾಸರಾವ್ ಅವರನ್ನು ಪೊಲೀಸರು ‌ಬಂಧಿಸಿದರು. ನಂತರ ಭಾಷಣಕ್ಕಾಗಿ ವೇದಿಕೆ ಏರಿದ ಹಿಂದೂಪುರದ ಕಲ್ಲೂರು ಸುಬ್ಬಾರಾವ್ ರವರನ್ನು ದಸ್ತಗಿರಿ ಮಾಡಲಾಯಿತು. ಸಭೆ ನಡೆಸದಂತೆ ಪೊಲೀಸರು ನಡೆಸಿದ ಕೂಗಾಟಗಳಿಂದ ಜನರು ಸ್ವಲ್ಪವೂ ವಿಚಲಿತರಾಗಲಿಲ್ಲ.

ಆ 20 ನಿಮಿಷಗಳು: ಬೇಸಿಗೆಯ ಬಿಸಿಲಿನಿಂದ ಜನರ ತಲೆ ಮತ್ತು ಕಾಲುಗಳು ಸುಡುತ್ತಿದ್ದವು. ಸಭೆಯಲ್ಲಿ ನೆರೆದಿದ್ದವರಿಗೆ ತೋಪಿನಲ್ಲಿನ ಮರಗಳು ಬಿಟ್ಟು ಬೇರೆ ಯಾವ ಪ್ರದೇಶಗಳಲ್ಲೂ ನೆರಳು ಇರಲಿಲ್ಲ. ಬದಿಯಲ್ಲೆ ಕಾದ ಮರಳಿನ ಬರಡು ನದಿಯ ಕಾವಿಗೆ ಜನರು ದಣಿವಾಗಿದ್ದಾಗ ಪೊಲೀಸರು ಬೆದರಿಕೆಯ ಜತೆಗೆ ಆಂಗ್ಲರು ತಮ್ಮ ಪ್ರತಾಪ ಆರಂಭಿಸಿದರು. ಇದರಿಂದ ಜನ ತಬ್ಬುಬ್ಬು ಆಗುತ್ತಿದ್ದಂತೆ ಶಿಳ್ಳೆಯ ಶಬ್ದದೊಡನೆ ಪೊಲೀಸರು ಬಂದೂಕುಗಳಿಗೆ ಜೀವ ಬಂತು. ಜಿಲ್ಲಾ ಪೊಲೀಸ್ ‌ವರೀಷ್ಠಾಧಿಕಾರಿ ಖಲೀಲ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಬಸಪ್ಪ ಅವರ ನೇತೃತ್ವದಲ್ಲಿ ಮೀಸಲು ಪೊಲೀಸ್ ಪಡೆ ಲಾಠಿ ಪೆಟ್ಟು ತಿಂದು ಸುಸ್ತಾಗಿದ್ದ ಜನರ ಮೇಲೆ ಗುಂಡಿನ ಸುರಿಮಳೆಯನ್ನೇ ಹರಿಸಿತು. ಸುಮಾರು 20 ನಿಮಿಷಗಳ ಕಾಲ ನಿರಂತರವಾಗಿ ಬಂದೂಕುಗಳು ಸದ್ದು ಮಾಡಿದವು. ಅಂದಾಜು 92 ಸುತ್ತಿನ ಗುಂಡು ಹಾರಿಸಲಾಯಿತು. ಮದ್ದುಗುಂಡುಗಳು ಮುಗಿದಿದ್ದರಿಂದ ಹತ್ಯಾಕಾಂಡ 20 ನಿಮಿಷಗಳಲ್ಲಿ ಅಂತ್ಯವಾಯಿತು. ಮತ್ತೆ ಮದ್ದು ಗುಂಡುಗಳನ್ನು ತರಲು ಹೊರಟ ವಾಹನವನ್ನು ಜನರು ಅಡ್ಡಗಟ್ಟಿ ನಿಲ್ಲಿಸಿದರು. ಇದರಿಂದ ಇನ್ನಷ್ಟು ಹೆಣಗಳು ಹುರುಳಲು‌ ಅವಕಾಶವಾಗಲಿಲ್ಲ.

ರಕ್ತದ ಓಕುಳಿಗೆ ಕಾರಣರಾದ ಪೊಲೀಸರು ಬಿದ್ದ ಹೆಣಗಳನ್ನು ಎತ್ತಲು ಅವಕಾಶ ನೀಡಲಿಲ್ಲ. ನೋವಿನಿಂದ ಚೀರಾಡುತ್ತಿರುವವರನ್ನು ನೋಡುವವರಿರಲಿಲ್ಲ. ಇಡೀ ಪ್ರದೇಶ ಅಕ್ಷರಶಃ ಸ್ಮಶಾನವಾಗಿ ಮಾರ್ಪಾಡಾಗಿತ್ತು. ಈ ಅಮಾನುಷ ಹತ್ಯಾಕಾಂಡದಿಂದ ಎಷ್ಟು ಮಂದಿ ಸಾವನ್ನಪ್ಪಿದ್ದರು ಎಂಬುದೂ ನಿಖರವಾಗಿ ತಿಳಿದುಬಂದಿಲ್ಲ. ಸುಮಾರು 32 ಮಂದಿ ಸ್ಥಳದಲ್ಲೆ ಹಸುನೀಗಿದ್ದರು. 148 ಮಂದಿ ತೀವ್ರವಾಗಿ ಗಾಯಗೊಂಡಿದ್ದರು ಎಂಬುದಾಗಿ ಕೆಲವು ವರದಿಗಳು ತಿಳಿಸಿವೆ.

ಹತ್ಯಾಕಾಂಡದ ದಿನವೇ ಬ್ರಿಟಿಷ್ ಸೈನ್ಯ ವಿದುರಾಶ್ವತ್ಥ ಕ್ಷೇತ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ನಂತರ ಪತ್ರಿಕಾ ನಿರ್ಬಂಧ ಜಾರಿಗೆ ಬಂದಿತು. ಸುದ್ದಿ ತಿಳಿದು ಕ್ಷೇತ್ರದತ್ತ ಧಾವಿಸಿದ ಅವಿಭಜಿತ ಕೋಲಾರ ಜಿಲ್ಲೆಯ ಸ್ವಾತಂತ್ರ್ಯ ಸೇನಾನಿ ಮತ್ತು ಗಾಂಧೀವಾದಿ ಕೆ.ಪಟ್ಟಾಭಿರಾಮನ್ ಹಾಗೂ ಇತರರನ್ನು ಪೊಲೀಸರು ಬಂಧಿಸಿದರು.

ಇಡೀ ರಾಷ್ಟ್ರದ ಗಮನ ಸೇಳೆದ ಈ ಹತ್ಯಾಕಾಂಡ ಪ್ರಕರಣದ ಬಗ್ಗೆ ಮಾಹಿತಿ ತಿಳಿಯಲು ಆಗಿನ ಅಖಿಲ ಕಾಂಗ್ರೆಸ್ ಕಾರ್ಯದರ್ಶಿಗಳಾದ ಸರ್ದಾರ್ ವಲ್ಲಬಾಯಿ ಪಟೇಲ್, ಜೆ.ಬಿ.ಕೃಪಲಾನಿ ರವರು ವಿದುರಾಶ್ವತ್ಥಕ್ಕೆ ಬಂದಿದ್ದರು. ಈ ಬಗ್ಗೆ ಹಲವು ಪ್ರತಿಭಟನೆಗಳು ನಡೆದಿದ್ದರಿಂದ ಸರ್ಕಾರವು ಪ್ರಕರಣದ ತನಿಖೆ ನಡೆಸುವ ಸಲುವಾಗಿ ವಿಶೇಷ ಸಮಿತಿಯನ್ನು ‌ರಚಿಸಿತು.

ಮಹಾ ಅಧಿವೇಶನ: ಮೈಸೂರು ಕಾಂಗ್ರೆಸ್ ಈ ದಾರುಣ ಘಟನೆಯ ‌ನಂತರ ಸ್ವಾತಂತ್ರ್ಯ ಚಳವಳಿಯನ್ನು ತೀವ್ರಗೊಳಿಸಿತು. ವಿದುರಾಶ್ವತ್ಥದ ಘಟನೆಯ ಬಳಿನ ಮಹಾತ್ಮ ಗಾಂಧೀಜಿ ಮೈಸೂರು ಕಾಂಗ್ರೆಸ್‌ನೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಿದ್ದರು. ಪ್ರಕರಣ ನಡೆದ ಮುಂದಿನ ವರ್ಷ 1939ರಲ್ಲಿ ಅಖಿಲ ಮೈಸೂರು ಮಹಾ ಅಧಿವೇಶನವನ್ನು ಎಚ್.ಸಿ‌ದಾಸಪ್ಪನವರ ಅಧ್ಯಕ್ಷತೆಯಲ್ಲಿ ವಿದುರಾಶ್ವತ್ಥದಲ್ಲೇ ನಡೆಸಲಾಯಿತು.

ವಿದುರಾಶ್ವತ್ಥದಲ್ಲಿ ಪ್ರಾಣ ತೆತ್ತವರ ಸ್ಮರಣಾರ್ಥ 1973ರ ಅ.2ರಂದು ಹುತಾತ್ಮರ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಇದರ ನೆನಪಿಗಾಗಿ ವಿದುರಾಶ್ವತ್ಥದಲ್ಲಿ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆಯನ್ನು ಆರಂಭಿಸಲಾಗಿದೆ.

ವಿದುರಾಶ್ವತ್ಥದಲ್ಲಿ ನಡೆದ ಹತ್ಯಾಕಾಂಡದ ಘಟನೆಗಳನ್ನು ಮುಚ್ಚಿಡಲು ಅಂದಿನ ಸರ್ಕಾರ ಪ್ರಯತ್ನಿಸಿದ್ದು ಸಹಜ. ಇಲ್ಲಿನ ನರಮೇಧದಲ್ಲಿ ತುಂಬು ಗರ್ಭಿಣಿ ಗಂಗಸಂದ್ರ ಗೌರಮ್ಮ ಸೇರಿ 32 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಇತಿಹಾಸಕಾರರು ಹೇಳಿದ್ದಾರೆ. ಅವರ ಹೆಸರನ್ನು ಸಂಗ್ರಹಿಸುವ ಕಾರ್ಯ ನಡೆಯಬೇಕಿದೆ. ಆದರೆ ಸ್ಮಾರಕದಲ್ಲಿ ಕೇವಲ 8 ಮಂದಿ ಹೆಸರನ್ನು ಮಾತ್ರ ಕೆತ್ತಲಾಗಿದೆ.

ಸ್ವಾತಂತ್ರ್ಯ ಯೋಧರ ಸವಿನೆನಪಿಗಾಗಿ ವಿದುರಾಶ್ವತ್ಥದಲ್ಲಿ ಸರ್ಕಾರ ವೀರಸೌಧ, ಉದ್ಯಾನವನ, ಹುತಾತ್ಮರ ಸ್ಮಾರಕ ಸ್ತೂಪ, ಚಿತ್ರಪಟ ಗ್ಯಾಲರಿ ನಿರ್ಮಾಣ ಮಾಡಿ ವಿದ್ಯಾರ್ಥಿಗಳು ಮತ್ತು ಜನತೆಗೆ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸ್ಪಷ್ಟ ಹಾಗೂ‌ ನಿಖರವಾದ ಮಾಹಿತಿ ನೀಡಲು ಅವಕಾಶ ಕಲ್ಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.