ಚೇಳೂರು: ಪ್ರತಿ ಮನೆಗೆ ನಲ್ಲಿ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಗ್ರಾಮೀಣ ಭಾಗದ ರಸ್ತೆಗಳು ಬಾಯ್ತೆರೆದುಕೊಂಡಿವೆ.
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ, ಚರಂಡಿಗಳು ಹಾಳಾಗಿವೆ. ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈರಪ್ಪನಹಳ್ಳಿ ಗ್ರಾಮದಲ್ಲಿ ಮುಖ್ಯ ರಸ್ತೆ ಅಗೆದು ತಿಂಗಳಾನುಗಟ್ಟಲೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಈ ಕುಗ್ರಾಮದಲ್ಲಿ ಜನ, ವಾಹನ ಸಂಚಾರಕ್ಕೆ ತೊಡಕಾಗಿದೆ. ಕೂಡಲೇ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಷ್ಯವೊ, ಅಧಿಕಾರಿಗಳ ಬೇಜವಾಬ್ದಾರಿಯಿಂದಲೊ ಮನೆಗಳ ಮುಂದೆ ಗುಂಡಿ ಬಿದ್ದಿದ್ದು, ಸಣ್ಣ ಮಕ್ಕಳನ್ನು ಮನೆಯಿಂದ ಹೊರ ಬಿಡಲಾಗದ ಸ್ಥಿತಿ ಇದೆ ಎಂದು ಆರೋಪಿಸಿದ್ದಾರೆ.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳನ್ನು ಗುತ್ತಿಗೆದಾರರು ಬೇಕಾದವರಿಗೆ ಹಂಚಿಕೆ ಮಾಡಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಇಚ್ಛೆ ಬಂದಂತೆ ರಸ್ತೆ ಅಗೆದು ಗುಂಡಿಗಳನ್ನು ಮುಚ್ಚದೆ, ಅಪೂರ್ಣ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆಲವೆಡೆ ಗ್ರಾಮದ ಉದ್ದಗಲಕ್ಕೂ ರಸ್ತೆ ಅಗೆದಿದ್ದಾರೆ. ಒಂದೆರಡು ಅಡಿ ಗುಂಡಿ ತೋಡಿ ಹಾಗೆಯೇ ಬಿಟ್ಟ ಪರಿಣಾಮ ಕಾಂಕ್ರಿಟ್ ರಸ್ತೆಗಳ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿವೆ. ಸಾರ್ವಜನಿಕರ ಓಡಾಡಕ್ಕೆ ಕಷ್ಟವಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ರಸ್ತೆಗಳಿಗೆ ಹಾನಿಯಾಗುತ್ತಿದೆ. ಕಾಮಗಾರಿ ವಿಳಂಬದ ಜತೆಗೆ ಕಾಮಗಾರಿಗಳಿಗೆ ಬಳಸುತ್ತಿರುವ ಸಾಮಗ್ರಿಯೂ ಕಳಪೆಯಿಂದ ಕೂಡಿವೆ ಎಂಬ ದೂರು ಕೇಳಿಬಂದಿದೆ.
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಗ್ರಾಮೀಣ ಭಾಗದ ಸಿ.ಸಿ ರಸ್ತೆಗಳು ಹಾಳಾಗಿವೆ. ವರ್ಷದ ಹಿಂದೆ ಅಗೆದ ರಸ್ತೆಗಳನ್ನು ಹಾಗೆಯೇ ಬಿಟ್ಟಿದ್ದು ಓಡಾಡಲು ಕಷ್ಟವಾಗಿದೆ. ಮನೆಗಳ ಬಳಿ ಮೊಣಕಾಲುದ್ದದ ಗುಂಡಿ ತೆಗೆದಿದ್ದಾರೆ. ವೃದ್ಧರು ಮಕ್ಕಳು ಓಡಾಡುವುದು ಕಷ್ಟವಾಗಿದೆ.
- ಪಿ.ಎನ್.ಆಂಜನೇಯ ರೆಡ್ಡಿ ಬೈರಪ್ಪನಹಳ್ಳಿ
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇನ್ನು ಜಲ ಜೀವನ್ ಮಿಷನ್ ಕಾಮಗಾರಿ ಸ್ಥಗಿತಗೊಳ್ಳುತ್ತದೆ. ಇನ್ನೂ ಹಲವು ದಿನ ಸಮಸ್ಯೆ ಅನುಭವಿಸುವುದು ಅನಿವಾರ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಮಧನಗೋಪಾಲ ರೆಡ್ಡಿ ಬೈರಪ್ಪನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.