ADVERTISEMENT

ಚಿಕ್ಕಬಳ್ಳಾಪುರ | ಕನ್ನಡ ಬೆಳಗಿದ ಶಿಡ್ಲಘಟ್ಟದ ಸಾಹಿತ್ಯ ಕೃತಿಗಳು

ಡಿ.ಜಿ.ಮಲ್ಲಿಕಾರ್ಜುನ
Published 4 ನವೆಂಬರ್ 2024, 6:21 IST
Last Updated 4 ನವೆಂಬರ್ 2024, 6:21 IST
ಶಿಡ್ಲಘಟ್ಟ ತಾಲ್ಲೂಕಿನ ಲೇಖಕರ ಸಾಹಿತ್ಯ ಕೃತಿಗಳು
ಶಿಡ್ಲಘಟ್ಟ ತಾಲ್ಲೂಕಿನ ಲೇಖಕರ ಸಾಹಿತ್ಯ ಕೃತಿಗಳು   

ಶಿಡ್ಲಘಟ್ಟ: ಕನ್ನಡ ನಾಡಿನ ವೈಭವ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಅನನ್ಯ. ಈ ಹೆಮ್ಮೆಯ ಪರಂಪರೆಯನ್ನು ಶಿಡ್ಲಘಟ್ಟ ತಾಲ್ಲೂಕಿನ ಹಲವಾರು ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಪ್ರಚುರಪಡಿಸಿದ್ದಾರೆ.

ತಾಲ್ಲೂಕಿನಲ್ಲಿ ಸಾಹಿತ್ಯ ಅರಳಿದ್ದುದರ ಕುರುಹು ಇತಿಹಾಸದಲ್ಲಿ ಲಭ್ಯವಿದೆ. ತಾಲ್ಲೂಕಿನ ಕುಂದಲಗುರ್ಕಿ ಶಾಸನದಲ್ಲಿ ಹಿಂದೆ ಈ ಪ್ರದೇಶವನ್ನು ಅಗ್ರಹಾರ ರಾಮಸಮುದ್ರವೆಂದು ಕರೆಯಲ್ಪಡುತ್ತಿದ್ದು ಖ್ಯಾತ ವಿದ್ಯಾ ಕೇಂದ್ರವಾಗಿತ್ತೆಂದು ಉಲ್ಲೇಖಿಸಲಾಗಿದೆ. 1830ರಲ್ಲಿ ಶ್ರೀಕೃಷ್ಣ ಭೂಪಾಲಿಯಮು ಎಂಬ ಕೃತಿಯನ್ನು ರಚಿಸಿದ್ದ ಚಂದ್ರಕವಿ ಕುಂದಲಗುರ್ಕಿಯವನು.

ಕವಿ, ಸಾಹಿತಿ, ಇತಿಹಾಸಕಾರ ಶಿಡ್ಲಘಟ್ಟದ ಅಬ್ದುಲ್ ಹಸನ್, ಜವರುಲ್ ಬಾಲಘತ್ (ಛಂದೋಗ್ರಂಥ), ಜವಾಹಿರ್-ಎ-ಉರ್ದು (ವ್ಯಾಕರಣ ಗ್ರಂಥ), ಫಾಜಿ-ಎ-ಅಜಮ್ (ಹೈದರ್ ಕುರಿತಾದ ಚಾರಿತ್ರಿಕ ಗ್ರಂಥ), ರಾಜ್ ನಾಮ(ಮೈಸೂರು ಒಡೆಯರ ಚರಿತ್ರೆ) ಮುಂತಾದ ಕೃತಿ ಬರೆದಿದ್ದಾರೆ.

ADVERTISEMENT

ಶಿಡ್ಲಘಟ್ಟದ ಕೃಷ್ಣರಾಯರು (1850-1910) ವೇಣುಗೋಪಾಲ ಎಂಬ ಅಂಕಿತದಿಂದ ಸುಮಾರು 200 ಕೀರ್ತನೆ ರಚಿಸಿದ್ದಾರೆ. ಗಂಜಿಗುಂಟೆಯ ಜಿ.ಎಸ್.ನರಸಿಂಹಮೂರ್ತಿ ಕೀರ್ತನೆಗಳ ಸಂಗ್ರಹ ಕೀರ್ತನ ತರಂಗಿಣಿಯಲ್ಲಿ ವಿಷ್ಣುಭಕ್ತಿ, ಭಾಗವತಜ್ಞಾನ, ಪಾಂಡಿತ್ಯಗಳನ್ನು ಗುರುತಿಸಬಹುದಾಗಿದೆ.

ಮುತ್ತೂರು ಗ್ರಾಮದ ನರಹರಿ ಶಾಸ್ತ್ರಿ ಹಾಗೂ ಅವರ ಮಗ ಪುರುಷೋತ್ತಮ ಶಾಸ್ತ್ರಿ ಸಂಸ್ಕೃತ ಪಂಡಿತರಾಗಿ ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದರು. ಇವರ ಮಗ ಖ್ಯಾತ ಶಿಕ್ಷಣ ತಜ್ಞ ಎಂ.ಪಿ.ಎಲ್ ಶಾಸ್ತ್ರಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆದಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಎಂ.ಇ.ಎಸ್ ವಿದ್ಯಾ ಸಂಸ್ಥೆಯ ಸ್ಥಾಪನಾ ಕಾರ್ಯದರ್ಶಿಗಳಾಗಿದ್ದರು. ಇವರು ರಚಿಸಿದ ಸುಭಾಷಿತ ಸಂಗ್ರಹ, ಸಂಸ್ಕೃತ ನಾಟಕ ಮತ್ತು ಅನೇಕ ಲೇಖನ ಪ್ರಕಟವಾಗಿದೆ. ಚಾಗೆ ಕೃಷ್ಣಮೂರ್ತಿ ಸಂಶೋಧಕರಾಗಿದ್ದು, ಹಲವಾರು ಸಂಶೋಧನಾತ್ಮಕ ಲೇಖನ ಪ್ರಕಟಿಸಿದ್ದಾರೆ.

ಆನೂರು ಎ.ಎಂ.ಮುನೇಗೌಡರು 60ರ ದಶಕದಲ್ಲಿ ರೇಷ್ಮೆ ಕೈಗಾರಿಕೆ ಎಂಬ ದ್ವೈಮಾಸಿಕ ಪತ್ರಿಕೆ ಹೊರತರುತ್ತಿದ್ದರು. 16 ಪುಟಗಳ ಈ ಪತ್ರಿಕೆಯ ಎಲ್ಲಾ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದುದು ವಿಶೇಷ. ಕೆಲ ಲೇಖನಗಳು ಇಂಗ್ಲಿಷ್‌ನಲ್ಲಿದ್ದರೆ, ಕೆಲ ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ಗ್ರಾಮೋದ್ಧಾರವಾಗುವುದೆಂದು? ಸೇರಿದಂತೆ ಕೆಲವು ಪುಸ್ತಕ ಬರೆದು ಪ್ರಕಟಿಸಿದ್ದರು.

ಜಂಗಮಕೋಟೆಯ ಶ್ರೀನಿವಾಸರಾಯರು ಥಿಯಾಸಫಿಕಲ್ ಸೊಸೈಟಿಯ ಪ್ರಭಾವಕ್ಕೊಳಗಾಗಿ 1908ರಲ್ಲಿ ಕರ್ಮ ಎಂಬ ಕೃತಿ ರಚಿಸಿದ್ದು 1910ರಲ್ಲಿ ಅವರ ಧರ್ಮ ಕೃತಿಯನ್ನು ಮೈಸೂರಿನಿಂದ ಪ್ರಕಟಿಸಲಾಯಿತು. ಜಂಗಮಕೋಟೆಯ ಕೃಷ್ಣಶಾಸ್ತ್ರಿಗಳು ಕೀರ್ತಿಕುಮಾರ (1915), ರಾಮಚಂದ್ರ (1928) ಎಂಬ ಕಾದಂಬರಿ ಬರೆದಿದ್ದಾರೆ.

ಡಾ.ಕೃಷ್ಣಮೂರ್ತಿ ವೆಂಕಟರಾಮ್ ಅವರು ಇಥಿಯೋಪಿಯಾ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಇಟಲಿ ದೇಶಗಳ ವಿದೇಶಾಂಗ ಕಚೇರಿಗಳಲ್ಲಿ ಅಧ್ಯಯನ ಮಾಡಿದ್ದಲ್ಲದೆ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸುಮಾರು 30 ವರ್ಷ ಇಥಿಯೋಪಿಯ, ಉಗಾಂಡ ಹಾಗೂ ಕೆನಡಾ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಇಥಿಯೋಪಿಯ ಹಾಗೂ ಬ್ರಿಟಿಷ್ ದೇಶಗಳ ಸಂಬಂಧ ಕುರಿತು, ಜಗದ್ಗುರು ಚಂದ್ರಶೇಖರ ಸ್ವಾಮೀಜಿ ಬಗ್ಗೆ ಪುಸ್ತಕಗಳನ್ನು ಹಾಗೂ ಪರಿವರ್ತನೆ ಎಂಬ ಕಾದಂಬರಿ ಬರೆದಿದ್ದಾರೆ.

ಶಿಡ್ಲಘಟ್ಟದಲ್ಲಿ ನಡೆದ ಮೊದಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಚ್.ವಿ.ರಾಮಚಂದ್ರರಾವ್ ಕಬೀರನ ವಚನಗಳು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಇನ್ಫೋಸಿಸ್ ಎನ್.ಆರ್.ನಾರಾಯಣ ಮೂರ್ತಿ ಇಂಗ್ಲಿಷ್‌ನಲ್ಲಿ ಕೃತಿ ರಚಿಸಿದ್ದಾರೆ. ಕನ್ನಡದ ಮೊಟ್ಟ ಮೊದಲ ಸಿನಿಮಾ ನಿರ್ದೇಶಕಿ ಪ್ರೇಮಾ ಕಾರಂತ್ ಅವರು ತಮ್ಮ ಆತ್ಮಕಥನ ಸೋಲಿಸಬೇಡ ಗೆಲಿಸಯ್ಯ ಬರೆದಿದ್ದಾರೆ. ಮೇಲೂರು ಎಂ.ಆರ್.ಪ್ರಭಾಕರ್ ಅವರು ತಮ್ಮ ಹಸ್ತಾಕ್ಷರದಲ್ಲಿ ಅಂಚೆ ಜಾನಪದ ಪುಸ್ತಕ ರಚಿಸಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ.

ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ.ಡಿ.ಜಿ ಅವರ ಅರೆಕ್ಷಣದ ಅದೃಷ್ಟ, ಕ್ಲಿಕ್ ಚಿತ್ರ ಲೇಖನಗಳ ಸಂಗ್ರಹ, ಚಿಟ್ಟೆಗಳು, ಭೂತಾನ್  ನಳನಳಿಸುವ ಪ್ರಶಾಂತತೆಯ ನಾಡಿನಲ್ಲಿ (ಪ್ರವಾಸ ಕಥನ), ನಮ್ಮ ಶಿಡ್ಲಘಟ್ಟ- ತಾಲ್ಲೂಕಿನ ಸಮಗ್ರ ಪರಿಚಯ (ಚಿತ್ರ ಸಹಿತ), ರಸ್ಕಿನ್ ಬಾಂಡ್ ಕತೆಗಳು (ಅನುವಾದ), ಯೋರ್ದಾನ್ ಪಿರೆಮಸ್ (ಜೋರ್ಡಾನ್ - ಈಜಿಪ್ಟ್ ಪ್ರವಾಸಕಥನ), ರಸ್ಕಿನ್ ಬಾಂಡ್ ಮಕ್ಕಳ ಮಿನಿ ಬಸ್ಸು, ಚೌಕಟ್ಟು ಪಾಡು ಮತ್ತು ಹಾರೈಸಿ ತೆರೆದ ಕಣ್ಣ ಕೋರೈಸೋ ನೂರು (ಕಥನ ಚಿತ್ರಗಳು) ಬಣ್ಣ ಕೃತಿಗಳು ಹೊರಬಂದಿವೆ.

ಮೇಲೂರಿನ ರಾಜೀವಗೌಡ ಅವರ ಸಂಖ್ಯಾಲೋಕದಲ್ಲಿ ಅಲೆದಾಟ ಮತ್ತು ಪಾಬ್ಲೊ ನೆರೂಡ ಕೃತಿಗಳು, ಈಧರೆ ತಿರುಮಲ ಪ್ರಕಾಶ್ ಅವರ ಕವನ ಸಂಕಲನ ಕತ್ತಲೆಗೊಂದು ಹೊಳೆವ ಮಿಂಚು ಪ್ರಕಟವಾಗಿವೆ. ಜನಪದ ತಜ್ಞ ಡಾ.ಶ್ರೀನಿವಾಸಯ್ಯ ಅವರ ಜನಪದ ಲೇಖನಗಳ ಸಂಗ್ರಹ ತಣಿಗೆ ಕೃತಿಯಾಗಿದೆ. ಡಿ.ಜಿ.ಮಲ್ಲಿಕಾರ್ಜುನ ಅವರು ಕನ್ನಡದಲ್ಲಿ ಬರೆದಿರುವ, ಭೂತಾನ್ ಪ್ರವಾಸಕಥನವನ್ನು ಅವರ ಪತ್ನಿ ಸೌಮ್ಯ ಅವರು ಭೂತಾನ್- ಆನ್ ದಿ ವಿಂಗ್ಸ್ ಆಫ್ ದಿ ಪೀಸ್ಫುಲ್ ಡ್ರಾಗನ್ ಎಂದು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಮೂಲದ ಇತಿಹಾಸಜ್ಞ ಮತ್ತು ಸಸ್ಯಶಾಸ್ತ್ರಜ್ಞ ಸಂತೆ ನಾರಾಯಣ ಸ್ವಾಮಿ ಅವರ ಜಹನಾರಾ (ಮೊಗಲ್‌ ಬಾದಶಹ ಬೇಗಮಳ ದುರಂತ ಜೀವನದ ಕತೆ) ಆಂಗ್ಲದಿಂದ ಅನುವಾದವಾದ ಕೃತಿಯಾಗಿದೆ.

ಶಿಡ್ಲಘಟ್ಟದ ಟಿ.ವೇಣುಗೋಪಾಲ್ ಅಮರ ಮಧುರ ಪ್ರೇಮ ಎಂಬ ಕಾದಂಬರಿ ರಚಿಸಿದ್ದಾರೆ. ಶಿಕ್ಷಕ ಎಸ್.ಕಲಾಧರ್ ಸಂಪಾದಿಸಿರುವ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬರಹಗಳ ಸಂಕಲನ ಶಾಮಂತಿ ಎಂಟು ವರ್ಷ ಸತತವಾಗಿ ಹೊರತಂದಿರುವುದು ಭವಿಷ್ಯದ ಸಾಹಿತ್ಯ ಬೆಳವಣಿಗೆಯ ದಿಕ್ಸೂಚಿಯಂತಿದೆ.

ಡಿ.ಎ.ಲಕ್ಷ್ಮಿನಾಥ ಹಲವು ಕವನ ಸಂಕಲನ, ಮಕ್ಕಳ ಕಥೆಗಳ ಪುಸ್ತಕ ಹೊರತಂದಿದ್ದರೆ, ಪಿಟೀಲು ವಿದ್ವಾನ್ ಜಿ.ಎನ್.ಶಾಮಸುಂದರ್ ಅವರು ಶಾಮಗಾನ ಎಂಬ ಕವನಸಂಕಲ, ಮುಕ್ತಕ ಮಂದಾರ ಎಂಬ ಮುಕ್ತಕಗಳ ಸಂಕಲನ ಹೊರಬಂದಿವೆ. ಸುಂಡ್ರಹಳ್ಳಿ ಶ್ರೀನಿವಾಸ್ ಕೆಲವು ವ್ಯಕ್ತಿತ್ವ ವಿಕಸನ ಪುಸ್ತಕ ಬರೆದಿದ್ದಾರೆ.

ತಾಲ್ಲೂಕಿನ ಯಣ್ಣೂರು ಮೂಲದ ನಾಗವೇಣಿ ಹೊಸಕೋಟೆ ವರ್ತುಲ ಕಾದಂಬರಿ ಬರೆದಿದ್ದಾರೆ. ತಮ್ಮ ಗ್ರಾಮ ಮತ್ತು ಗ್ರಾಮ ದೇವತೆಯ ಕುರಿತಾಗಿ ತಾಲ್ಲೂಕಿನ ಇರಗಪ್ಪನಹಳ್ಳಿಯ ದಿಗವಿಂಟಿ ಗರಿಗಿರೆಡ್ಡಿ ಇರಗಪ್ಪನಹಳ್ಳಿ ಶ್ರೀಗೆರಿಗಮ್ಮ ದೇವಿ ಆರಾಧನೆ ಎಂಬ ಪುಸ್ತಕ ಹಾಗೂ ಮೇಲೂರಿನ ಎನ್.ಶಿವಕುಮಾರ್ ಅವರು ಮೇಲೂರು ಶ್ರೀಗಂಗಾದೇವಿ ಅಮ್ಮನವರ ಚರಿತ್ರೆ ಮತ್ತು ಮಹಾತ್ಮೆ ಎಂಬ ಪುಸ್ತಕ ಹೊರತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.