ಶಿಡ್ಲಘಟ್ಟ: ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನಮ್ಮ ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದಲೇ ಭಾಷೆಗೂ ನೆಲದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತವೇ ರಾಜ್ಯೋತ್ಸವ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ಸಲ್ಲಾಪುರಮ್ಮ ದೇವಾಲಯದ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ ಬಿ.ಎನ್.ಸ್ವಾಮಿ, ನಗರಸಭೆ ಆಯುಕ್ತ ಮಂಜುನಾಥ್, ವೆಂಕಟಸ್ವಾಮಿ, ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ನರೇಂದ್ರ ಕುಮಾರ್, ಕನ್ನಡ ಪರ ಹಾಗೂ ರೈತ ಸಂಘಟನೆಯ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.