ADVERTISEMENT

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ: ಜೆಡಿಎಸ್–ಕಾಂಗ್ರೆಸ್‌ ನಡುವೆಯೇ ಪೈಪೋಟಿ

‘ಕೈ’ ಪಾಳಯದ ಒಡಕು ಜೆಡಿಎಸ್‌ಗೆ ಲಾಭವಾಗುವುದೇ?

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 4:00 IST
Last Updated 25 ಜನವರಿ 2023, 4:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಹಿನ್ನೋಟವನ್ನು ಅವಲೋಕಿಸಿದರೆ ರೇಷ್ಮೆನಾಡಿನ ಈ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹಣಾಹಣಿಯ ಕ್ಷೇತ್ರ ಎನ್ನುವುದು ಸ್ಪಷ್ಟವಾಗುತ್ತದೆ. ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿ ಇದೆ.

ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿಯೂ ಬಿಜೆಪಿ ಮತಗಳಿಕೆ ಐದು ಸಾವಿರ ದಾಟಿಲ್ಲ. ಈ ಬಾರಿಯೂ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಸ್ಪರ್ಧೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಮೂರು ಪಕ್ಷಗಳು ಸಾಮಾನ್ಯವಾಗಿ ಕಣಕ್ಕಿಳಿಸುವುದು ಸಹ ಇದೇ ಸಮುದಾಯದ ಅಭ್ಯರ್ಥಿಗಳನ್ನು. ಮುಸ್ಲಿಮರು, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಮತದಾರರು ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ಶಕ್ತರಾಗಿದ್ದಾರೆ.

2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಎನ್. ರವಿಕುಮಾರ್ ಅವರೇ ಕಣಕ್ಕೆ ಇಳಿಯುವರು. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್ ವಿಚಾರ ಇನ್ನೂ ಅಂತಿಮವಾಗಿಲ್ಲ. ಶಿಡ್ಲಘಟ್ಟ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಹೊಂದಿರುವ ಹಿರಿಯ ಶಾಸಕ ವಿ. ಮುನಿಯಪ್ಪ ಅವರಿಗೆ ‘ಹಿರಿತನ’ದ ಟಿಕೆಟ್ ದೊರೆಕಿಸಿಕೊಡುತ್ತದೆಯೇ ಅಥವಾ ತಪ್ಪಿಸುತ್ತದೆಯೇ ಎನ್ನುವುದು ಚರ್ಚೆಗೆ ಕಾರಣವಾಗಿದೆ.

ADVERTISEMENT

ಶಿಡ್ಲಘಟ್ಟ ಕ್ಷೇತ್ರದಲ್ಲಿ 1983ರಲ್ಲಿ ಮೊದಲ ಬಾರಿಗೆ ಶಾಸಕರಾದ ವಿ. ಮುನಿಯಪ್ಪ ಕಾಂಗ್ರೆಸ್ ಮೇಲೆ ಹಿಡಿತ ಹೊಂದಿದ್ದಾರೆ. ಅವರು ಇಲ್ಲಿಂದ ಆರು ಬಾರಿ ಶಾಸಕರಾಗಿದ್ದಾರೆ. ಈಗ ಎಡಿಬಿ ಟ್ರಸ್ಟ್‌ನ ರಾಜೀವ್ ಗೌಡ, ಅಂಜನಪ್ಪ ಪುಟ್ಟು ಮತ್ತಿತರರು ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಬಣಗಳು ಸಹ ಇವೆ. ಈ ಬಣ ರಾಜಕಾರಣ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಳೇಟು ನೀಡುತ್ತದೆಯೇ? ಜೆಡಿಎಸ್‌ಗೆ ಅನುಕೂಲವಾಗುತ್ತದೆಯೇ ಎನ್ನುವ ಚರ್ಚೆಗಳಿವೆ.

2018ರ ಚುನಾವಣೆಯಲ್ಲಿ ಪಕ್ಷೇತರರಾಗಿದ್ದ ಆಂಜಿನಪ್ಪ ಪುಟ್ಟು (10,986) ಮತ್ತು ಎಂ.ರಾಜಣ್ಣ (8,593) ಈ ಬಾರಿ ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. 2018ರ ಚುನಾವಣೆಯಲ್ಲಿ ರವಿಕುಮಾರ್ ಮತ್ತು ಎಂ. ರಾಜಣ್ಣ ನಡುವಿನ ಪೈಪೋಟಿಯು ಹಲವು ಗೊಂದಲಗಳನ್ನು ಸೃಷ್ಟಿಸಿತ್ತು. ಕೊನೆಯ ಕ್ಷಣದಲ್ಲಿ ಬಿ.ಎನ್. ರವಿಕುಮಾರ್ ಟಿಕೆಟ್ ಪಡೆದಿದ್ದರು. ಎಂ. ರಾಜಣ್ಣ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಈಗ ಅವರು ಬಿಜೆಪಿಯಲ್ಲಿ ಇದ್ದಾರೆ.

ರಾಜೀವ್ ಗೌಡ ಮತ್ತು ಅಂಜನಪ್ಪ ಪುಟ್ಟು ಸಮಾಜ ಸೇವಕರಾಗಿ ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಟ ಸಹ ನಡೆಸಿದ್ದಾರೆ. ಕಾಂಗ್ರೆಸ್ ವರಿಷ್ಠರು ಟಿಕೆಟ್ ವಿಚಾರದಲ್ಲಿ ಮುನಿಯಪ್ಪ ಅವರ ಮಾತು ಕೇಳಿಯೇ ಮುಂದುವರಿಯುತ್ತಾರೆ ಎನ್ನಲಾಗುತ್ತಿದೆ.

ಕಳೆದ ಲೋಕ ಸಭೆ ಚುನಾವಣೆಯಲ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತಗಳು ಬಿದ್ದಿದ್ದವು. ಆ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಬಗ್ಗೆ ಕೊಂಚ ಕುತೂಹಲವಿದೆ. ಸ್ಥಳೀಯ ಬಿಜೆಪಿ ಮುಖಂಡರು ತಮ್ಮ ಪಕ್ಷದ ವರಿಷ್ಠರಿಗೆ ಸ್ಥಳೀಯ ವ್ಯಕ್ತಿ ಅಂದರೆ ಮಾಜಿ ಶಾಸಕ ಎಂ. ರಾಜಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಕೋರಿದ್ದಾರೆ. ಆದರೆ ಇತ್ತೀಚೆಗಷ್ಟೇ ಚಿಂತಾಮಣಿ ತಾಲ್ಲೂಕಿನ ಸೀಕಲ್ ಗ್ರಾಮದ ಉದ್ಯಮಿ ರಾಮಚಂದ್ರೇಗೌಡ ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯಲು ತೆರೆ ಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ.

ಜೆಡಿಎಸ್‌ನ ಶಾಸಕ ಜಿ.ಟಿ. ದೇವೇಗೌಡ ಅವರ ಸಂಬಂಧಿಯೂ ಆಗಿರುವ ಸೀಕಲ್ ರಾಮಚಂದ್ರೇಗೌಡ ಅವರು ಸ್ಪರ್ಧಿಸುವಂತೆ ಶಿಡ್ಲಘಟ್ಟ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ. ನಂದೀಶ್ ಕರೆ ತಂದಿದ್ದಾರೆ ಎನ್ನುವ ಮಾತುಗಳಿವೆ. ಅಂತಿಮವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಶಿಡ್ಲಘಟ್ಟ ಕ್ಷೇತ್ರದಲ್ಲಿ ಸ್ಪರ್ಧೆ ಎನ್ನುತ್ತಾರೆ ಕ್ಷೇತ್ರದ ರಾಜಕೀಯ ನಾಡಿಮಿಡಿತ ಬಲ್ಲವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.