ಚಿಕ್ಕಬಳ್ಳಾಪುರ: ಏಳೆಂಟು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ರಸ್ತೆಗಳಲ್ಲಿ ಸಾಮಾನ್ಯನಂತೆ ಓಡಾಡುತ್ತಿದ್ದ, ವಾಸಿಸುತ್ತಿದ್ದ ಕೊಠಡಿ ಬಾಡಿಗೆ ಕಟ್ಟಲು ಹಣವಿಲ್ಲದ ಹುಡುಗ ಈಗ ಚಿಕ್ಕಬಳ್ಳಾಪುರದ ಶಾಸಕ!
ಪ್ರಭಾವಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸೋಲಿಸುವ ಮೂಲಕ ರಾಜ್ಯದ ಗಮನ ಸೆಳೆದಿರುವ 38 ವರ್ಷದ ಪ್ರದೀಪ್ ಈಶ್ವರ್ ಅವರ ಬದುಕು ಅನೇಕ ರೋಚಕ ತಿರುವುಗಳ ಸಿನಿಮಾ ಕತೆಯಂತಿದೆ.
ತಾಲ್ಲೂಕಿನ ಪೆರೇಸಂದ್ರ ಗ್ರಾಮದ ಪ್ರದೀಪ್ ಅವರು ಚಿಕ್ಕ ವಯಸ್ಸಿನಲ್ಲಿಯೇ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ ನತದೃಷ್ಟ. ಈ ಅನಾಥ ಹುಡುಗನ ವಿದ್ಯಾಭ್ಯಾಸಕ್ಕೆ ಆಶ್ರಯ ನೀಡಿದ್ದು ತುಮಕೂರಿನ ಸಿದ್ಧಗಂಗಾ ಮಠ.
ಪಿಯು ಶಿಕ್ಷಣದ ನಂತರ ಪ್ರದೀಪ್ ಬದುಕು ಕಟ್ಟಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದು ಚಿಕ್ಕಬಳ್ಳಾಪುರವನ್ನು. ಮಕ್ಕಳಿಗೆ ಮನೆ ಪಾಠ ಹೇಳಿಕೊಡುತ್ತಿದ್ದ ಅವರು ಕೆಲ ಸಮಯ ಕಾಲೇಜುಗಳಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದರು. ಈ ವೇಳೆ ಸ್ಥಳೀಯ ಖಾಸಗಿ ವಾಹಿನಿಯೊಂದರಲ್ಲಿ ‘ಲೈಫ್ ಈಸ್ ಬ್ಯೂಟಿಫುಲ್’ ಹೆಸರಿನ ಕಾರ್ಯಕ್ರಮ ನಡೆಸಿಕೊಟ್ಟರು. ತನ್ನ ಸ್ವಂತ ಬದುಕು ಸುಂದರವಾಗಿಲ್ಲದಿದ್ದರೂ ಮತ್ತೊಬ್ಬರಿಗೆ ಸ್ಫೂರ್ತಿ ತುಂಬುವ, ಅವರ ಬದುಕು ಹಸನಗೊಳಿಸುವ ಕಾರ್ಯಕ್ರಮ ಅದಾಗಿತ್ತು.
ಬಡತನ, ಅವಮಾನ, ಮೂದಲಿಕೆ ಮಾತುಗಳನ್ನು ಅನುಭವಿಸಿದವರು. ಪ್ರದೀಪ್ ಈ ಮಟ್ಟಕ್ಕೆ ಬೆಳೆಯಲು ಕಾರಣ ಅವರಲ್ಲಿರುವ ಧೈರ್ಯ ಮತ್ತು ವಾಕ್ ಚಾತುರ್ಯ.
2018ರ ವಿಧಾನಸಭೆ ಚುನಾವಣೆ ಅವರ ಬದುಕಿಗೆ ತಿರುವು ನೀಡಿತು. ಪಕ್ಷೇತರ ಅಭ್ಯರ್ಥಿ ಕೆ.ವಿ.ನವೀನ್ ಕಿರಣ್ ಪರವಾಗಿ ಸ್ಟಾರ್ ಪ್ರಚಾರಕ ಎನಿಸಿದರು. ಡಾ.ಕೆ.ಸುಧಾಕರ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಎತ್ತಿದ್ದ ಪ್ರಶ್ನೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಯಿತು.
ಈ ಚುನಾವಣೆ ಮುಗಿಯುವ ವೇಳೆ ಅವರ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ದಾಖಲಾದವು. ದೈಹಿಕ ಹಲ್ಲೆ ನಡೆದವು. ಪೊಲೀಸ್ ಠಾಣೆಯ ಎದುರು ಪ್ರದೀಪ್ ಪ್ರತಿಭಟನೆಗೆ ಮುಂದಾದ ಸಮಯದಲ್ಲಿ ಪೊಲೀಸ್ ಇಲಾಖೆಯ ಸುಮಾರು 50 ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಪ್ರದೀಪ್ ಜಾಮೀನಿನ ಮೇಲೆ ಹೊರ ಬಂದಾಗ ಅವರನ್ನು ಪಟಾಕಿ ಸಿಡಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಹ ಮಾಡಲಾಗಿತ್ತು.
ಚುನಾವಣೆಯಲ್ಲಿ ಡಾ.ಕೆ. ಸುಧಾಕರ್ ಗೆಲುತ್ತಿದ್ದಂತೆ ಪ್ರದೀಪ್ ಚಿಕ್ಕಬಳ್ಳಾಪುರ ತೊರೆದರು. ಕೆಲ ಸಮಯ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿದ್ದರು.
ಹೊರ ರಾಜ್ಯ ಸುತ್ತಿ ಮತ್ತೆ ಬೆಂಗಳೂರಿಗೆ ಬಂದ ಅವರಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲವಿತ್ತು. ಆಗ ಹುಟ್ಟಿಕೊಂಡಿದ್ದೇ ‘ಪರಿಶ್ರಮ ನೀಟ್ ಅಕಾಡೆಮಿ’. 2018ರ ಚುನಾವಣೆಯಲ್ಲಿ ಪ್ರದೀಪ್ ಅವರ ಧೈರ್ಯ ನೋಡಿದ್ದ ಕಾಂಗ್ರೆಸ್ ನಾಯಕರು ಅರ್ಜಿ ಸಲ್ಲಿಸದಿದ್ದರೂ ಪ್ರದೀಪ್ ಅವರನ್ನು ಕರೆದು ಟಿಕೆಟ್ ನೀಡಿದರು. ಅಹಿಂದ ಜಾತಿ ಲೆಕ್ಕಾಚಾರ, ಡಾ.ಕೆ. ಸುಧಾಕರ್ ವಿರುದ್ಧದ ಆಡಳಿತ ವಿರೋಧಿ ಅಲೆ ಪ್ರದೀಪ್ ಅವರನ್ನು ಗೆಲುವಿನ ದಡ ಮುಟ್ಟಿಸಿತು.
ಚಿಕ್ಕಬಳ್ಳಾಪುರದ ಬೀದಿಗಳಲ್ಲಿ ಬದುಕು ಕಟ್ಟಿಕೊಳ್ಳಲು ಅಲೆದಾಡುತ್ತಿದ್ದ ಹುಡುಗನನ್ನು ಇಂದು ಅದೇ ರಸ್ತೆಗಳಲ್ಲಿ ‘ನಮ್ಮ ಶಾಸಕ’ ಎಂದು ಜನರು ಹೊತ್ತು ಮೆರೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.