ADVERTISEMENT

ಚಿಕ್ಕಬಳ್ಳಾಪುರ| 2018ರ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸಿತ್ತು ಉಪನ್ಯಾಸಕನ ಪ್ರಚಾರ

2018ರ ಚುನಾವಣೆ ವೇಳೆ ಪ್ರದೀಪ್ ಈಶ್ವರ್ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 9:59 IST
Last Updated 17 ಮಾರ್ಚ್ 2023, 9:59 IST
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಆವರಣದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಉಪನ್ಯಾಸಕ ಪ್ರದೀಪ್ ಈಶ್ವರ್ ಅವರ ಬಳಿ ನೆರೆದಿದ್ದ ಪೊಲೀಸ್ ಸಿಬ್ಬಂದಿ (ಸಂಗ್ರಹ ಚಿತ್ರ)
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಆವರಣದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಉಪನ್ಯಾಸಕ ಪ್ರದೀಪ್ ಈಶ್ವರ್ ಅವರ ಬಳಿ ನೆರೆದಿದ್ದ ಪೊಲೀಸ್ ಸಿಬ್ಬಂದಿ (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: 20ಕ್ಕೂ ಹೆಚ್ಚು ಪ್ರಕರಣ ದಾಖಲು, ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ, ಬಂಧನ, ರೋಷಾವೇಷದ ಮಾತುಗಳು, ‘ಸನ್ಮಾನ್ಯ ಶಾಸಕರೇ...’ ಎಂದು ಡಾ.ಕೆ.ಸುಧಾಕರ್ ವಿರುದ್ಧ ಸರಣಿ ವಿಡಿಯೊಗಳು...ಇದು 2018ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರದೀಪ್ ಈಶ್ವರ್ ಮಾಡಿದ ಸದ್ದುಗಳಿವು.

ಅಂದು ಚಿಕ್ಕಬಳ್ಳಾಪುರ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ ಪ್ರದೀಪ್ ಈಶ್ವರ್, ಈಗ ಪರಿಶ್ರಮ ನೀಟ್ ಅಕಾಡೆಮಿ ಮುಖ್ಯಸ್ಥ. 2018ರಚುನಾವಣೆಯಲ್ಲಿ ಅವರ ‘ಅಬ್ಬರ’ 2023ರ ಚುನಾವಣೆಯ ಹೊಸ್ತಿಲಿನಲ್ಲಿ ಚರ್ಚೆ ಆಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮುದಾಯದ 28 ಸಾವಿರಕ್ಕೂ ಹೆಚ್ಚು ಮತಗಳಿವೆ. ಪ್ರದೀಪ್ ಸಹ ಇದೇ ಸಮುದಾಯದವರು.

2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡಿದ ಹೆಸರುಗಳಲ್ಲಿ ಪ್ರದೀಪ್ ಈಶ್ವರ್ ಪ್ರಮುಖ ಎಂದರೆ ಖಂಡಿತ ಅತಿಶಯವಲ್ಲ. ಶಾಸಕ ಡಾ.ಕೆ.ಸುಧಾಕರ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಎತ್ತಿದ್ದ ಪ್ರಶ್ನೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದವು. ಬಿಡು ಬೀಸಾಗಿ ಸುಧಾಕರ್ ವಿರುದ್ಧ ಟೀಕೆಗಳ ಮಳೆಗರೆಯುತ್ತಿದ್ದರು.

ADVERTISEMENT

ಈ ಚುನಾವಣೆ ಆರಂಭವಾಗಿ ಪೂರ್ಣವಾಗುವ ವೇಳೆ ಅವರ ಮೇಲೆ ದಲಿತರ ಮೇಲೆ ದೌರ್ಜನ್ಯ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಅನುಮತಿ ಪಡೆಯದೆ ಚುನಾವಣಾ ಪ್ರಚಾರ ನಡೆಸಿದ್ದು...ಹೀಗೆ ಸಾಲು ಸಾಲಾಗಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ಪಕ್ಷೇತರ ಅಭ್ಯರ್ಥಿ ಆಗಿದ್ದ ಕೆ.ವಿ.ನವೀನ್ ಕಿರಣ್ ಪರವಾಗಿ ಅವರು ಮತಯಾಚಿಸಿದ್ದರು.

2018ರ ಚುನಾವಣೆ ಹೊಸ್ತಿಲಿನಲ್ಲಿ ಜನವರಿ 27ರಿಂದ ಫೆಬ್ರುವರಿ 7ರವರೆಗೆ ಪ್ರದೀಪ್‌ ಅವರು ಶಾಸಕರಿಗೆ ಎಂಟು ಪ್ರಶ್ನೆಗಳನ್ನು ಮುಂದಿಟ್ಟು ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಬಗ್ಗೆ ನಗರಸಭೆ ಸದಸ್ಯರೊಬ್ಬರು ಕೊಟ್ಟ ದೂರಿನ ಮೇರೆಗೆ ಫೆ. 6ರಂದು ಪ್ರದೀಪ್ ಅವರನ್ನು ಪೊಲೀಸರು ಬಂಧಿಸಿದ್ದರು.

ಬಂಧನಕ್ಕೆ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗಿತ್ತು. ಜಾಮೀನಿನ ಮೇಲೆ ಹೊರಬಂದ ಪ್ರದೀಪ್ ಅವರನ್ನು ಪಟಾಕಿ ಸಿಡಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಹ ಮಾಡಲಾಗಿತ್ತು. ಪೊಲೀಸ್ ಠಾಣೆ ಎದುರು ಪ್ರದೀಪ್ ಪ್ರತಿಭಟನೆಗೆ ಮುಂದಾದ ಸಮಯದಲ್ಲಿ ಪೊಲೀಸ್ ಇಲಾಖೆಯ ಸುಮಾರು 50 ಸಿಬ್ಬಂದಿಯನ್ನು ಕಾವಲಿಗೆ ನಿಯೋಜನೆ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು.

ಹೀಗೆ ಆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಟ್ರೆಂಡಿಂಗ್ ಎನಿಸಿದ್ದ ವ್ಯಕ್ತಿ ಈಗ ರಾಜಕೀಯವಾಗಿ ಮೌನವಾಗಿದ್ದಾರೆ. ಅವರು ಈ ಬಾರಿ ಡಾ.ಕೆ.ಸುಧಾಕರ್ ಪರವೊ ವಿರುದ್ಧವೊ ಅಥವಾ ತಟಸ್ಥವೊ ಎನ್ನುವ ಚರ್ಚೆಗಳೂ ನಡೆದಿವೆ.

2018ರ ಚುನಾವಣೆ ತರುವಾಯ ಚಿಕ್ಕಬಳ್ಳಾಪುರದಿಂದ ದೂರವಾದ ಅವರು ಈಗ ಪರಿಶ್ರಮ ನೀಟ್ ಅಕಾಡೆಮಿ ಸ್ಥಾಪಿಸಿದ್ದಾರೆ. ಕೆಲವು ವರ್ಷಗಳಿಂದ ಚಿಕ್ಕಬಳ್ಳಾಪುರದಿಂದ ದೂರವಿದ್ದ ಅವರು ಕಳೆದ ವರ್ಷ ಚಿಕ್ಕಬಳ್ಳಾಪುರದಲ್ಲಿ ಅದ್ದೂರಿಯಾಗಿ ತಾತಯ್ಯ ಜಯಂತಿ ಸಹ ನಡೆಸಿದ್ದರು. ಈ ಬಾರಿಯೂ ಬಲಿಜ ಸಮುದಾಯದಿಂದ ನಡೆದ ಕೈವಾರ ತಾತಯ್ಯ ಜಯಂತಿಯಲ್ಲಿ ಭಾಗಿ ಆಗಿದ್ದರು. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮುದಾಯದ 3 ಸಾವಿರ ವಿದ್ಯಾರ್ಥಿಗಳಿಗೆ ತಲಾ ₹ 5 ಸಾವಿರ ವಿದ್ಯಾರ್ಥಿ ವೇತನ ಸಹ ನೀಡಿದ್ದಾರೆ.

ಪ್ರದೀಪ್ ಕ್ಷೇತ್ರದ ರಾಜಕೀಯದಲ್ಲಿ ಇದಿದ್ದರೆ ಮತ್ತಷ್ಟು ರಂಗು ಇರುತ್ತಿತ್ತು ಎಂದು ಮುಖಂಡರು ನುಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.