ADVERTISEMENT

ಚಿಕ್ಕಬಳ್ಳಾಪುರ | ಜಿಲ್ಲೆಯ ಅಭಿವೃದ್ಧಿಗೆ ಬಲ ನೀಡದ ಬಜೆಟ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 8:30 IST
Last Updated 8 ಜುಲೈ 2023, 8:30 IST

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನೇನೂ ನೀಡಿಲ್ಲ. ಹಳೇ ಬಾಟಲಿಗೆ ಹೊಸ ಮದ್ಯ ಎನ್ನುವ ರೀತಿಯಲ್ಲಿ ಈ ಹಿಂದೆ ಘೋಷಿಸಿದ ಕೆಲವು ಯೋಜನೆಗಳ ಬಗ್ಗೆಯೇ ಪ್ರಸ್ತಾಪಿಸಿದ್ದಾರೆ.

ನೆರೆಯ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್‌ ರಚನೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಈ ಹಿಂದಿನಿಂದಲೂ ಕೈಗಾರಿಕೀಕರಣದ ವಿಚಾರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೈಗಾರಿಕೀಕರಣದ ಅಭಿವೃದ್ಧಿಯ ಬಗ್ಗೆ ಈ ಬಜೆಟ್‌ ಸಹ ನಿರ್ಲಕ್ಷ್ಯವಹಿಸಿದೆ.

ಪ್ರತಿ ರಾಜ್ಯ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಏನೆಲ್ಲ ದಕ್ಕುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯ್ದು ನೋಡುವ ಜನರಿಗೆ ಆಯ್ಯವ್ಯಯಗಳು ನಿರಾಸೆ ಮೂಡಿಸಿದ್ದೇ ಹೆಚ್ಚು. ಈ ಬಾರಿಯೂ ಜಿಲ್ಲೆಗೆ ಬಜೆಟ್‌ ನ್ಯಾಯವನ್ನೇನು ಕೊಟ್ಟಿಲ್ಲ. ವಿಶೇಷವಾಗಿ ಜಿಲ್ಲೆಗೆ ಕೈಗಾರಿಕೀಕರಣ ವಿಚಾರ ಪ್ರಸ್ತಾಪವೇ ಇಲ್ಲ. ಪ್ರತಿ ಬಜೆಟ್‌ನಲ್ಲಿಯೂ ಕೈಗಾರಿಕೀಕರಣ, ಕೃಷಿ ಸಂಬಂಧಿತ ಉದ್ದಿಮೆಗಳ ಬಗ್ಗೆ ಜಿಲ್ಲೆಯ ಜನರು ನಿರೀಕ್ಷೆಗಳನ್ನು ಹೊಂದುತ್ತಾರೆ. ಆದರೆ ಬಜೆಟ್ ನಿರಾಸೆ ತಂದಿದೆ.

ADVERTISEMENT

ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ ₹ 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣದ ಬಗ್ಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡನೆಯಾದ ಬಜೆಟ್‌ನಲ್ಲಿಯೇ ಪ್ರಸ್ತಾಪವಿತ್ತು. ಈಗ ಮತ್ತೆ ಆ ವಿಷಯವನ್ನೇ ಈ ಬಾರಿಯೂ ‍‍ಪ್ರಸ್ತಾಪಿಸಲಾಗಿದೆ. 

ಚಿಕ್ಕಬಳ್ಳಾಪುರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೈಟೆಕ್ ಹೂ ಮಾರುಕಟ್ಟೆ ನಿರ್ಮಾಣದ ಬಗ್ಗೆ ಕಳೆದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಬಾರಿ ಈ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ ದೊರೆಯುವುದೆ ಎನ್ನುವ ನಿರೀಕ್ಷೆ ಸಹ ಇತ್ತು. ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಕಾಮಗಾರಿಗೆ ಅನುದಾನದ ಬಗ್ಗೆಯೂ ನಿರೀಕ್ಷೆ ಇತ್ತು. ಆದರೆ ಈ ಯಾವ ವಿಚಾರಗಳು ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ. 

ವಿಶೇಷವಾಗಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಮಂಡಿಸಿದ ಬಜೆಟ್‌ನಲ್ಲಿ ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ಯೋಜನೆಯ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಹರಿಸುವುದಾಗಿ ಪ್ರಕಟಿಸಿದ್ದರು. ಸರ್ಕಾರ ಮೂರನೇ ಹಂತದ ಶುದ್ಧೀಕರಣಕ್ಕೆ ಬಜೆಟ್‌ನಲ್ಲಿ ಈ ಬಾರಿ ಅನುದಾನ ಒದಗಿಸುತ್ತದೆಯೇ ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ. 

ಅಭಿವೃದ್ಧಿಗೆ ಪೂರಕವಾಗಲಿವೆಯೇ ಯೋಜನೆಗಳು?: ಬಯಲು ಸೀಮೆಯ 17 ಜಿಲ್ಲೆಗಳಲ್ಲಿ 5 ವರ್ಷಗಳಲ್ಲಿ ₹ 500 ಕೋಟಿ ವೆಚ್ಚದಲ್ಲಿ ಹಸಿರೀಕರಣ, ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಹೊಸ ನೀತಿ ಜಾರಿ, ರೇಷ್ಮೆನೂಲು ಬಿಚ್ಚಾಣಿಕೆದಾರರಿಗೆ ₹ 5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ರಫ್ತು ಉತ್ತೇಜನಕ್ಕೆ ₹ 5 ಕೋಟಿ ನೆರವು–ಎನ್ನುವ ಅಂಶಗಳು ಬಜೆಟ್‌ನಲ್ಲಿ ಇವೆ. ತೋಟಗಾರಿಕೆ ಮತ್ತು ಕೃಷಿ ಪ್ರಮುಖವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಇವು ಪರೋಕ್ಷವಾಗಿ ಯಾವ ರೀತಿ ಅನುಕೂಲವಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ. 

ಬಯಲುಸೀಮೆ ಜನರ ಕತ್ತಲೆಯಲ್ಲಿಟ್ಟ ಬಜೆಟ್

ಬಯಲುಸೀಮೆ ಪ್ರದೇಶದ ಕೆರೆ ಕುಂಟೆ ರಾಜಕಾಲುವೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡದ ದೂರದೃಷ್ಟಿ ಇಲ್ಲದ ಬಜೆಟ್. ಬಯಲುಸೀಮೆ ಜನರನ್ನು ಮತ್ತೊಮ್ಮೆ ಸಿದ್ದರಾಮಯ್ಯ ಕತ್ತಲೆಯಲ್ಲಿ ಇಟ್ಟಿದ್ದಾರೆ. ಶಾಶ್ವತ ನೀರಾವರಿ ಪರಿಕಲ್ಪನೆಯ ಸುಳಿವಿಲ್ಲದ ಅನಾಹುತಕಾರಿ ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳ ತ್ಯಾಜ್ಯ ನೀರನ್ನು ಕಡ್ಡಾಯವಾಗಿ ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡುವ ಬಗ್ಗೆ ಸ್ಪಷ್ಟತೆಯಿಲ್ಲದ ಆಳುವವರ ಪಾಲಿಗೆ ಎಟಿಎಂ ಆಗಿರುವ ಎತ್ತಿನಹೊಳೆ ಯೋಜನೆಗೆ ₹ 3000 ಕೋಟಿ ಕೊಟ್ಟಿರುವ ದೂರದ ಮೇಕೆದಾಟನ್ನು ನೋಡುತ್ತ ಪಕ್ಕದ ಕೃಷ್ಣಾ ನದಿಯ ಪಾಲು ಪಡೆಯಲಾಗದ ಬಜೆಟ್ ಇದಾಗಿದೆ.

ಬೆಂಗಳೂರು ನಗರದ ಕೆರೆಗಳ ಸೌಂದರ್ಯಕ್ಕೆ ₹ 2000 ಕೋಟಿ ಖರ್ಚು ಮಾಡುವ ಸರ್ಕಾರ ಗ್ರಾಮೀಣ ಜನ ಮತ್ತು ಜಾನುವಾರುಗಳ ಜೀವನಾಡಿಗಳಾಗಿರುವ ನಮ್ಮ ಕೆರೆಗಳ ದುರಸ್ತಿಗೆ ಕೇವಲ ₹ 200 ಕೋಟಿ ಮಾತ್ರ ಮೀಸಲಿಡುವ ಜಿಪುಣ ಸರ್ಕಾರ. ನಾವು ಕುಡಿಯುತ್ತಿರುವ ಅಂತರ್ಜಲದಲ್ಲಿ ಅಪಾಯಕಾರಿ ಯುರೇನಿಯಂ ಧಾತು ಪತ್ತೆ ಆಗಿದೆ. ಆದರೆ ಬಯಲುಸೀಮೆ ಕೆರೆ ಕುಂಟೆ ರಾಜಕಾಲುವೆಗಳ ಅಭಿವೃದ್ಧಿಗೆ ಕ್ರಮವಿಲ್ಲ ಎಂದು ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಹೇಳಿದರು

ಬಜೆಟ್‌ನಲ್ಲಿ ಜಿಲ್ಲೆಗೆ ದೊರೆತ್ತಿದ್ದು ಇಷ್ಟು

  • ಶಿಡ್ಲಘಟ್ಟದಲ್ಲಿ ₹ 75 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ

  • ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಭೂಮಿ ಸ್ವಾಧೀನಕ್ಕೆ ಕ್ರಮ

  • ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿ ಯೋಜನೆಗಳ ಎರಡನೇ ಹಂತದದಲ್ಲಿ ₹ 529 ಕೋಟಿ ವೆಚ್ಚದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 296 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನ

  • ರಾಷ್ಟ್ರೀಯ ಸಂರಕ್ಷಿತ ಸ್ಮಾರಕ ನಂದಿಬೆಟ್ಟದ ಭೋಗ ನಂದೀಶ್ವರ ದೇವಸ್ಥಾನ ಬಳಿ ‘3ಡಿ ಪ್ರಾಜೆಕ್ಷನ್ ಮಲ್ಟಿಮೀಡಿಯಾ ಸೌಂಡ್ ಮತ್ತು ಲೈಟ್ ಶೋ ಸೌಲಭ್ಯ

ಸಿಂಥೆಟಿಕ್ ಟ್ರ್ಯಾಕ್‌ಗೆ ಕೂಡಲಿಲ್ಲ ಕಾಲ

ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು ಎಂದು 16 ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. ಹಲವು ಮಂದಿ ಕ್ರೀಡಾ ಸಚಿವರಿಗೆ ಈ ಬಗ್ಗೆ ಮನವಿ ಸಹ ನೀಡಿದ್ದೇವೆ. ಆದರೆ ಈ ಬಾರಿ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವೂ ಇಲ್ಲ. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿದ್ದ ಯುವಜನ ಮೇಳವನ್ನು ಎರಡು ವರ್ಷಗಳಿಂದ ಸ್ಥಗಿತಗೊಳಿಸಿದ್ದಾರೆ. ಬಜೆಟ್‌ನಲ್ಲಿ ಯುವ ಮೇಳೆ ಪುರಾರಂಭದ ಪ್ರಸ್ತಾಪವೂ ಇಲ್ಲ ಎಂದು ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ಅವಳಿ ಜಿಲ್ಲೆಗಳಿಗೆ ಯಾವುದೇ ಯೋಜನೆಗಳಿಲ್ಲ : ಡಾ ಕೆ ಸುಧಾಕರ್

ಚಿಕ್ಕಬಳ್ಳಾಪುರ ಹಾಗೂ ಕೋಲಾರದ ನೀರಿನ ಬವಣೆ ನೀಗಿಸಲು ಎತ್ತಿನಹೊಳೆ ಯೋಜನೆ ಜಾರಿಗೆ ಜನರು ಕಾಯುತ್ತಿದ್ದಾರೆ. ಈ ಯೋಜನೆಯ ಭೂ ಸ್ವಾಧೀನದ ಬಗ್ಗೆ ಹೇಳಿದ್ದಾರೆಯೇ ಹೊರತು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಆದ್ದರಿಂದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಈ ಯೋಜನೆ ಎರಡು ವರ್ಷಗಳಲ್ಲಿ ಅಲ್ಲ ಐದು ವರ್ಷಗಳಲ್ಲೂ ಜಾರಿಯಾಗುವುದು ಅನುಮಾನ ಎಂದು ಮಾಜಿ ಸಚಿವ ಡಾ ಕೆ ಸುಧಾಕರ್ ಹೇಳಿದರು

ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಹಾಗೂ ಹೂ ಬೆಳೆಗಾರರ ಅಭ್ಯುದಯಕ್ಕೆ ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ವಿಶ್ವದರ್ಜೆಯ ಹೂ ಮಾರುಕಟ್ಟೆ ನಿರ್ಮಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು. ₹ 100 ಕೋಟಿ ಮೀಸಲಿಟ್ಟಿತ್ತು. ಇದರ ಜಾರಿ ಬಗ್ಗೆ ಬಜೆಟ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದರು.

ಕೆ.ಸಿ.ವ್ಯಾಲಿ ಹೆಚ್.ಎನ್.ವ್ಯಾಲಿ ಯೋಜನೆಯಡಿ ತೃತೀಯ ಹಂತದ ಶುದ್ಧೀಕರಣ ಕೈಗೊಳಲು ಬಜೆಟ್ ನಲ್ಲಿ ಹಣ ಮೀಸಲಿಟ್ಟಿಲ್ಲ ಇವುಗಳ ಜೊತೆಗೆ ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಕೈಗಾರಿಕಾಭಿವೃದ್ಧಿ ನೀರಾವರಿ ಕೃಷಿ ಸುಧಾರಣೆ ಸೇರಿದಂತೆ ಯಾವುದೇ ಬಗೆಯ ಯೋಜನೆಗಳನ್ನು ಸಿದ್ದರಾಮಯ್ಯನವರು ನೀಡಿಲ್ಲ. ಈ ಭಾಗದ ಜನರು ಕಾಂಗ್ರೆಸ್‌ ನೆಚ್ಚಿಕೊಂಡು ಮತ ನೀಡಿದ್ದು ಅದಕ್ಕೆ ತಕ್ಕಂತೆ ನಿರೀಕ್ಷೆಗಳನ್ನು ನಿಜ ಮಾಡುವ ಒಂದಂಶದ ಕೆಲಸವನ್ನೂ ಸರ್ಕಾರ ಮಾಡಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.