ಶಿಡ್ಲಘಟ್ಟ: ಸ್ವಾತಂತ್ರ್ಯ ನಂತರದಿಂದ 2018ರವರೆಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 15 ಚುನಾವಣೆಗಳು ನಡೆದಿವೆ. 11 ಬಾರಿ ಕಾಂಗ್ರೆಸ್, ಒಂದು ಬಾರಿ ಜನತಾ ಪಕ್ಷ, ಜಾತ್ಯತೀತ ಜನತಾದಳ (ಜೆಡಿಎಸ್) ಎರಡು ಸಲ ಗೆದ್ದಿದ್ದರೆ, ಒಮ್ಮೆ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಹೀಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಹಿನ್ನೋಟವನ್ನು ಗಮನಿಸಿದರೆ ಕಾಂಗ್ರೆಸ್ ಇಲ್ಲಿ ಹೆಚ್ಚು ಬಾರಿ ಗೆಲುವು ದಾಖಲಿಸಿದೆ.
ಈವರೆಗೆ ಒಟ್ಟು ಏಳು ಮಂದಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ವಿ. ಮುನಿಯಪ್ಪ ಕಾಂಗ್ರೆಸ್‌ನಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗಲೂ ಅವರೇ ಶಾಸಕರು. ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಶಾಸಕರಾದ ದಾಖಲೆ ಮುನಿಯಪ್ಪ ಅವರ ಹೆಸರಿನಲ್ಲಿ ಇದೆ.
ಎಸ್. ಮುನಿಶಾಮಪ್ಪ ಇಂದಿರಾ ಕಾಂಗ್ರೆಸ್, ಜನತಾ ಪಕ್ಷ ಮತ್ತು ಜೆಡಿಎಸ್ ಅನ್ನು ಪ್ರತಿನಿಧಿಸಿ ಮೂರು ಬಾರಿ ಶಾಸಕರಾಗಿದ್ದರು. ಜೆ. ವೆಂಕಟಪ್ಪ ಒಮ್ಮೆ ಪಕ್ಷೇತರರಾಗಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಎಸ್. ಮುನಿಶಾಮಪ್ಪ ಅವರ ಅಳಿಯ ಎಂ.ರಾಜಣ್ಣ ಕೂಡ ಇದೇ ಕ್ಷೇತ್ರದಿಂದ ಒಮ್ಮೆ ವಿಧಾನಸಭೆ ಪ್ರವೇಶಿಸಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಸಿದ್ದ ಮಳ್ಳೂರು ಜಿ. ಪಾಪಣ್ಣ 1952ರ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಮೊದಲ ಶಾಸಕರಾಗಿದ್ದಾರೆ. ಆಗ ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಎರಡೂ ಸೇರಿ ಒಂದೇ ಕ್ಷೇತ್ರ ಎಂದು ಪರಿಗಣಿಸಲಾಗಿತ್ತು. 1957ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಾತವಾರ ವೆಂಕಟ್ಟಪ್ಪ ಅವರು ವಿಜೇತರಾದರು. ಇವರು ಶಿಡ್ಲಘಟ್ಟ ಪ್ರತ್ಯೇಕ ಕ್ಷೇತ್ರವಾದ ಬಳಿಕ ವಿಧಾನಸಭೆಗೆ ಆಯ್ಕೆಯಾದ ಮೊದಲಿಗರು.
1962ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾದಲಿ ಆವಲರೆಡ್ಡಿ, 1967ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಭಕ್ತರಹಳ್ಳಿ ವೆಂಕಟರಾಯಪ್ಪ ಗೆಲವು ಸಾಧಿಸಿದರು. ಪಕ್ಷೇತರರಾಗಿ ಗೆಲುವು ಕಂಡಿದ್ದ ಜಾತವಾರ ವೆಂಕಟಪ್ಪ ಅವರು 1972ರಲ್ಲಿ ಕಾಂಗ್ರೆಸ್ ಸೇರಿ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
1978ರಲ್ಲಿ ಇಂದಿರಾ ಕಾಂಗ್ರೆಸ್ ಪ್ರತಿನಿಧಿಸಿದ್ದ ಎಸ್. ಮುನಿಶಾಮಪ್ಪ, 1983ರಲ್ಲಿ ಕಾಂಗ್ರೆಸ್‌ನಿಂದ ವಿ. ಮುನಿಯಪ್ಪ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ, ಜನತಾ ಪಕ್ಷದ ರಾಮಕೃಷ್ಣ ಹೆಗಡೆ ಮಧ್ಯಂತರ ಚುನಾವಣೆ ಘೋಷಿಸಿದ್ದರಿಂದಾಗಿ 1985ರಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಎಸ್. ಮುನಿಶಾಮಪ್ಪ ಶಾಸಕರಾದರು.
ಮುಂದಿನ ಹದಿನೈದು ವರ್ಷಗಳ ಕಾಲ ಶಿಡ್ಲಘಟ್ಟ ಕ್ಷೇತ್ರದಲ್ಲಿ ನಡೆದದ್ದು ಕಾಂಗ್ರೆಸ್ ಆಡಳಿತ. 1989, 1994 ಮತ್ತು 1999ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ವಿ.ಮುನಿಯಪ್ಪ ಹ್ಯಾಟ್ರಿಕ್ ವಿಜಯ ಸಾಧಿಸಿದರು. ಈ ಸಮಯದಲ್ಲಿ ಮೊದಲ ಎರಡು ಅವಧಿಗಳಲ್ಲಿ ರೇಷ್ಮೆ ಇಲಾಖೆ ಮತ್ತು ಇಂಧನ ಖಾತೆ ಸಚಿವರಾಗಿದ್ದ ಅವರು, 1999ರ ಚುನಾವಣೆಯಲ್ಲಿ ಗೆದ್ದು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ್ದರು. 2004ರ ಚುನಾವಣೆಯಲ್ಲಿ ಸೋಲಿನ ಕಹಿ ಉಂಡರು. ಜೆಡಿಎಸ್‌ನ ಎಸ್. ಮುನಿಶಾಮಪ್ಪ ವಿಜೇತರಾಗಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
2008ರಲ್ಲಿ ಕಾಂಗ್ರೆಸ್‌ನ ವಿ. ಮುನಿಯಪ್ಪ ಜೆಡಿಎಸ್‌ನ ಎಂ. ರಾಜಣ್ಣ ವಿರುದ್ಧ 6,502 ಮತಗಳ ಅಂತರದಿಂದ ಗೆದ್ದು ಐದನೇ ಬಾರಿಗೆ ಶಾಸಕರಾದರು. 2013 ರಲ್ಲಿ ಜೆಡಿಎಸ್‌ನ ಎಂ.ರಾಜಣ್ಣ, ವಿ.ಮುನಿಯಪ್ಪ ವಿರುದ್ಧ 15,479 ಮತಗಳ ಅಂತರದಿಂದ ಗೆದ್ದಿದ್ದಾರೆ.
2018ರ ಮೇ 12ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಮುನಿಯಪ್ಪ 9,709 ಮತಗಳ ಅಂತರದಿಂದ ವಿಜೇತರಾಗಿ ಶಿಡ್ಲಘಟ್ಟ ಕ್ಷೇತ್ರದ ಶಾಸಕರಾಗಿ ಆರನೇ ಬಾರಿಗೆ ಆಯ್ಕೆಯಾದರು. ಈಗ 2023ರ ಚುನಾವಣೆಗೆ ಯಾರು ಗೆಲ್ಲುವರು ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.