ADVERTISEMENT

ಕೆ.ಪಿ.ಬಚ್ಚೇಗೌಡರಿಗೆ ಕಾಂಗ್ರೆಸ್‌ ಗಾಳ?

ಜನತಂತ್ರದ ಹಬ್ಬ ಲೋಕಸಭಾ ಚುನಾವಣೆ - 2024

ಡಿ.ಎಂ.ಕುರ್ಕೆ ಪ್ರಶಾಂತ
Published 11 ಅಕ್ಟೋಬರ್ 2023, 6:44 IST
Last Updated 11 ಅಕ್ಟೋಬರ್ 2023, 6:44 IST
<div class="paragraphs"><p>ಕೆ.ಪಿ.ಬಚ್ಚೇಗೌಡ</p></div>

ಕೆ.ಪಿ.ಬಚ್ಚೇಗೌಡ

   

ಚಿಕ್ಕಬಳ್ಳಾಪುರ: ಮಾಜಿ ಶಾಸಕ ಹಾಗೂ ಜೆಡಿಎಸ್‌ ಮುಖಂಡರಾದ ಕೆ.ಪಿ.ಬಚ್ಚೇಗೌಡ ಅವರನ್ನು ಕಾಂಗ್ರೆಸ್‌ಗೆ ಕರೆ ತರಲು ಸ್ಥಳೀಯ ‘ಕೈ’ ನಾಯಕರು  ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಬಚ್ಚೇಗೌಡ ಜೊತೆ ಮಾತುಕತೆಯನ್ನು ಸಹ ನಡೆಸಿದ್ದಾರೆ.

ಬಚ್ಚೇಗೌಡ ಅವರನ್ನು ಕರೆ ತರಲು ಪ್ರಯತ್ನಿಸುತ್ತಿರುವವರಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರಿಂದ ಅಂತರ ಕಾಯ್ದುಕೊಂಡ ಮುಖಂಡರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ADVERTISEMENT

ಗಾಂಧಿ ಜಯಂತಿ ದಿನ ಚಿಕ್ಕಬಳ್ಳಾ ಪುರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬಚ್ಚೇಗೌಡ ನೇತೃತ್ವದಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿಯೂ ಕೆಲವು ಮುಖಂಡರು, ‘ಕಾಂಗ್ರೆಸ್ ಸೇರೋಣ’ ಎಂದಿದ್ದಾರೆ.

ಬಚ್ಚೇಗೌಡರನ್ನು ಕಾಂಗ್ರೆಸ್‌ಗೆ ಕರೆ ತರುವ ಪ್ರಯತ್ನದ ಬಗ್ಗೆ ಕಾಂಗ್ರೆಸ್‌ ಪಕ್ಷದ ಪ್ರಮುಖ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಸುಳಿವು ನೀಡಿದ್ದಾರೆ.

2008ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಕೆ.ಪಿ.ಬಚ್ಚೇಗೌಡ ಕ್ಷೇತ್ರದಲ್ಲಿ ತಮ್ಮದೇ ಆದ ಸಂಪರ್ಕ ಜಾಲ ಮತ್ತು ಬೆಂಬಲಿಗರನ್ನು ಹೊಂದಿ ದ್ದಾರೆ. ಶಾಸಕರಾಗಿದ್ದ ಅವಧಿಯಲ್ಲಿ ಪ್ರಾಮಾಣಿಕವಾಗಿ ಇದ್ದರು. ಸರಳ ವ್ಯಕ್ತಿ ಎನ್ನುವ ಚಹರೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. 2013, 2018 ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದಾರೆ.

2023ರ ವಿಧಾನಸಭೆ ಚುನಾ ವಣೆಯ ಸಮಯದಲ್ಲಿ ಕ್ಷೇತ್ರದಲ್ಲಿ 60 ದಿನ ಪಾದಯಾತ್ರೆ ಸಹ ನಡೆಸಿದ್ದರು. ಈ ಚುನಾವಣೆಯಲ್ಲಿ ಆರ್ಥಿಕವಾಗಿ ಬಲ ತುಂಬುವುದಾಗಿ ವರಿಷ್ಠರು ಭರವಸೆ ಸಹ ನೀಡಿದ್ದರು. ಆದರೆ ಚುನಾವಣೆಯ ಅಂತಿಮ ಸಮಯದಲ್ಲಿ ವರಿಷ್ಠರು ಸಂಪನ್ಮೂಲ ಒದಗಿಸದ ಕಾರಣ ಕೊನೆ ಕ್ಷಣದಲ್ಲಿ ಜೆಡಿಎಸ್‌ ಮತಗಳು ಚದುರಿ ದವು. ಗೌಡರು 11 ಸಾವಿರ ಮತ ಪಡೆದರು.

ಮೈತ್ರಿಗೆ ಮನಸ್ಸಿಲ್ಲ:

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ವಿರುದ್ಧ ಬಚ್ಚೇಗೌಡ ರಾಜ ಕಾರಣ ಮಾಡಿಕೊಂಡು ಬಂದಿದ್ದಾರೆ. ಈಗ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಖಚಿತವಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿಗೆ ದೊರೆಯುವ ಸಾಧ್ಯತೆ ಇದೆ. ಡಾ.ಕೆ.ಸುಧಾಕರ್ ಅಭ್ಯರ್ಥಿ ಆಗಬಹುದು ಎನ್ನುವ ಸುದ್ದಿ ಪ್ರಬಲವಾಗಿದೆ. ಈ ಮೈತ್ರಿ ಕೆ.ಪಿ.ಬಚ್ಚೇಗೌಡರಿಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ಗೌಡರು ತೆಗೆದು ಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಮುಖಂಡರು ತಿಳಿಸಿದ್ದಾರೆ.

ಈ ಎಲ್ಲ ಕಾರಣದಿಂದ ಬಚ್ಚೇಗೌಡ ನಡೆಯ ಬಗ್ಗೆ ಕುತೂಹಲ ಮೂಡಿದೆ. ಗೌಡರು ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎನ್ನುವ ಮಾತುಗಳು ಚಿಕ್ಕಬಳ್ಳಾಪುರದಲ್ಲಿ ಕೇಳಿ ಬರುತ್ತಿವೆ. 

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬಚ್ಚೇಗೌಡರ ತಂದೆ ಕೆ.ಬಿ.ಪಿಳ್ಳಪ್ಪ ಅವರದ್ದು ದೊಡ್ಡ ಹೆಸರು. ಜನತಾದಳದಿಂದ ಪಿಳ್ಳಪ್ಪ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮೊದಲ ಅಧ್ಯಕ್ಷರೂ ಆಗಿದ್ದ ಅವರು ಒಕ್ಕಲಿಗ ಸಮಾಜದ ಮೇಲೆ ಪ್ರಬಲ ಹಿಡಿತ ಹೊಂದಿದ್ದರು. 1975ರಿಂದಲೂ ಈ ಕುಟುಂಬ ದೇವೇಗೌಡರ ಆಪ್ತ ವಲಯದಲ್ಲಿದೆ.

‘ಕೈ ನಾಯಕರು ಸಂಪರ್ಕಿಸಿರುವುದು ನಿಜ’

‘ಕಾಂಗ್ರೆಸ್‌ ಪಕ್ಷಕ್ಕೆ ಕರೆಯುತ್ತಿರುವುದು ನಿಜ. 1975ರಿಂದಲೂ ನಾವು ಒಂದೇ ಪಕ್ಷದಲ್ಲಿ ಇದ್ದೇವೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೀರ್ಘವಾಗಿ ಆಲೋಚಿಸಬೇಕು. ಆದ್ದರಿಂದ ಸಮಯ ಕೇಳಿದ್ದೇನೆ. ದೇವೇಗೌಡರು ಮತ್ತು ನಮ್ಮ ಕುಟುಂಬದ್ದು ಹಳೆ ಸಂಬಂಧ. ಇಂದಿಗೂ ಆ ಸಂಬಂಧ ಚೆನ್ನಾಗಿದೆ’ ಎಂದು ಕೆ.ಪಿ.ಬಚ್ಚೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಕಾರಣದಲ್ಲಿ ಒಳ್ಳೆಯದೂ ಆಗುತ್ತದೆ. ಕೆಟ್ಟದ್ದೂ ಆಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಆದರೆ ಸ್ಥಳೀಯವಾಗಿ ನಮ್ಮ ಕಾರ್ಯಕರ್ತರ ಪರಿಸ್ಥಿತಿ ಏನು ಎನ್ನುವುದು ಮುಖ್ಯ. ಆತುರವಾಗಿ ತೀರ್ಮಾನ ಕೈಗೊಳ್ಳುವ ಪ್ರಮೇಯವೇನಿಲ್ಲ’ ಎಂದರು.

‘ಇತ್ತೀಚೆಗೆ ದೇವೇಗೌಡರನ್ನು ಭೇಟಿ ಮಾಡಿದ್ದೆ. ಮೈತ್ರಿಗೆ ಸಂಬಂಧಿಸಿದಂತೆ ನಮ್ಮ ಸಮಸ್ಯೆ ಹೇಳಿದೆ. ಸ್ಥಳೀಯವಾಗಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ. ಆತುರ ಪಡಬೇಡಿ. ನಾನು ಇದ್ದೇನೆ  ಎಂದು ದೇವೇಗೌಡರು ಹೇಳಿದರು. ಆದರೆ ಅವರು ಅಲ್ಲಿ ಇದ್ದು ಸ್ಥಳೀಯವಾಗಿ ಏನು ಮಾಡಲು ಸಾಧ್ಯ’ ಎಂದು ಬಚ್ಚೇಗೌಡ ಕೇಳಿದರು.

ಶಾಸಕರ ವಿರೋಧಿ ಬಣ ಸಕ್ರಿಯ

ವಿಧಾನಸಭೆ ಚುನಾವಣೆ ಫಲಿತಾಂಶದ ತರುವಾಯ ಬಚ್ಚೇಗೌಡರನ್ನು ಕಾಂಗ್ರೆಸ್‌ಗೆ ಕರೆ ತರಬೇಕು ಎನ್ನುವ ಮಾತು ಕೇಳಿ ಬಂದಿದ್ದವು.

‘ಒಟ್ಟಾಗಿದ್ದೇವೆ’ ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಮುಖಂಡರು ಎಷ್ಟೇ ಸಮಜಾಯಿಷಿ ನೀಡಿದರೂ, ‘ಭಿನ್ನಾಭಿಪ್ರಾಯ ಇರುವುದು ಸತ್ಯ’ ಎಂದು ಪಕ್ಷದ ಕೆಲವು ಮುಖಂಡರು ಆಂತರಿಕವಾಗಿ ಹೇಳಿಕೊಂಡಿದ್ದಾರೆ.

ಶಾಸಕರ ಬೆಂಬಲಿಗರು ಮತ್ತು ಶಾಸಕರಿಂದ ಅಂತರ ಕಾಯ್ದುಕೊಂಡ ಮುಖಂಡರು ಎನ್ನುವ ಬಣಗಳು ಕಾಂಗ್ರೆಸ್‌ನಲ್ಲಿ ಇವೆ. ಕೆಲವು ಮುಖಂಡರು ಶಾಸಕರ ಜೊತೆಯಲ್ಲಿಯೇ ಇದ್ದರೂ ಆಂತರಿಕವಾಗಿ ಶಾಸಕ ಪ್ರದೀಪ್ ಈಶ್ವರ್ ಅವರ ನಡೆಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಬೇಸರ ವ್ಯಕ್ತಪಡಿಸುತ್ತಿರುವ ಮತ್ತು ಅಂತರ ಕಾಯ್ದುಕೊಂಡಿರುವ ಮುಖಂಡರು ಬಚ್ಚೇಗೌಡರನ್ನು ಕಾಂಗ್ರೆಸ್‌ಗೆ ಕರೆ ತರುವ ದಿಕ್ಕಿನಲ್ಲಿ ಹೆಚ್ಚು ಮುತುವರ್ಜಿ ವಹಿಸಿದ್ದಾರೆ ಎನ್ನುತ್ತವೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.