ADVERTISEMENT

HN ವ್ಯಾಲಿ, KC ವ್ಯಾಲಿ | 3 ಹಂತದ ಶುದ್ಧೀಕರಣಕ್ಕೆ ಆಗ್ರಹ, ರಾಜ್ಯಪಾಲರಿಗೆ ಮನವಿ

ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಕೋರಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 13:42 IST
Last Updated 10 ಫೆಬ್ರುವರಿ 2024, 13:42 IST
ಎಚ್.ಎನ್.ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಬೇಕು‌ ಎಂದು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು
ಎಚ್.ಎನ್.ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಬೇಕು‌ ಎಂದು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು   

ಚಿಕ್ಕಬಳ್ಳಾಪುರ: ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆರೆಗಳಿಗೆ ಎಚ್.ಎನ್.ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಬೇಕು‌. ಈ ಬಗ್ಗೆ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು, ಸಣ್ಣ ನೀರಾವರಿ ಸಚಿವರು ಮತ್ತು ಪರಿಸರ ಸಚಿವರಿಗೆ ನಿರ್ದೇಶನ ನೀಡುವಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ನಿಯೋಗ ಶನಿವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮಳೆಯಾಶ್ರಿತ, ಅಂತರ್ಜಲ ಅತಿಬಳಕೆ ಪ್ರದೇಶಕ್ಕೆ ಸೇರಿವೆ.

ಸ್ವಾತಂತ್ರ್ಯ ಬಂದ ನಂತರ ನದಿ ನಾಲೆಗಳು ಇಲ್ಲದ, ಶಾಶ್ವತ ನೀರಾವರಿ ಸೌಲಭ್ಯಗಳಿಂದ ವಂಚಿತವಾದ ಕಾರಣ ಇಲ್ಲಿನ ರೈತರು ಕುಡಿಯುವ ನೀರು ಮತ್ತು ಕೃಷಿ ಬಳಕೆಗಾಗಿ 1,500 ಅಡಿ ಆಳದ ಕೊಳವೆಬಾವಿ‌ ಕೊರೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದರಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಮಾತ್ರವಲ್ಲದೆ ಆಳದಲ್ಲಿ ಸಿಗುವ ನೀರು ಕುಡಿಯಲು ಮಾತ್ರವಲ್ಲದೆ ಕೃಷಿಗೂ ಅಯೋಗ್ಯವಾಗಿದೆ. ಕುಡಿಯುವ ನೀರಿನ ಕೊಳವೆಬಾವಿಗಳ ನೀರಿನಲ್ಲಿ ಫ್ಲೋರೈಡ್‌ ಮತ್ತು ನೈಟ್ರೇಟ್‌ಗಳ ಜತೆಗೆ, ಯುರೇನಿಯಂ ಮತ್ತು ಆರ್ಸೆನಿಕ್ ಕಣಗಳು ಪತ್ತೆಯಾಗಿರುವುದು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಸಂಶೋಧನೆಯಲ್ಲಿ ದೃಢಪಟ್ಟಿದೆ. ಇದು ಕುಡಿಯುವ ನೀರು ಹಾಗೂ ಕೃಷಿ ಬೆಳೆಗಳನ್ನು ವಿಷಪೂರಿತಗೊಳಿಸುವುದರ ಜತೆಗೆ ಜನರು ಮತ್ತು ಜಾನುವಾರುಗಳನ್ನು ಮಾರಣಾಂತಿಕ ಕಾಯಿಲೆಗಳಿಗೆ ದೂಡುತ್ತಿದೆ.

ADVERTISEMENT

ಬರಪೀಡಿತ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ಇಲ್ಲಿಯವರೆಗೂ ಯಾವುದೇ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಬೆಂಗಳೂರು ನಗರದ ಎರಡು ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಸಿ ಅಂತರ್ಜಲವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ಈ ಮೂರು ಜಿಲ್ಲೆಗಳ ಜನಸಾಮಾನ್ಯರಿಗೆ ಸಂಕಟ ಉಂಟುಮಾಡಿದೆ.

2018ರಲ್ಲಿ ಬೆಂಗಳೂರಿನಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪಂಪ್ ಮಾಡುವ ಮೂಲಕ ಕೆಲವು ಆಯ್ದ ಕೆರೆಗಳನ್ನು ತುಂಬಲು ಪ್ರಾರಂಭಿಸಿತು. ಭರವಸೆ ನೀಡಿದಂತೆ, ಸರ್ಕಾರವು ನೀರಿನ ತೃತೀಯ ಸಂಸ್ಕರಣೆಯನ್ನು ಖಾತ್ರಿಪಡಿಸುವ ಬದಲು, ಅವರು ಕುಡಿಯುವ ನೀರನ್ನು ಒದಗಿಸಲು ಕೊರೆಸಿರುವ ಕೊಳವೆಬಾವಿಗಳು ಹೊಂದಿರುವ ಕೆರೆಗಳನ್ನು ಎರಡು ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸಿ ಅಂತರ್ಜಲವನ್ನು ಕಲುಷಿತಗೊಳಿಸುವುದಲ್ಲದೆ, ಮೀನುಗಳು ಮತ್ತು ಇತರ ಜಲಚರಗಳ ಸಾವಿಗೆ ಕಾರಣವಾಗಿದೆ. ಕೆರೆಗಳ ಜೀವವೈವಿಧ್ಯ ನಾಶಕ್ಕೆ ಕಾರಣವಾಗಿವೆ ಎಂದು ನಿಯೋಗದ ಸದಸ್ಯರು ಲಿಖಿತವಾಗಿ ತಿಳಿಸಿದ್ದಾರೆ.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, ಸಮಿತಿಯ ಸುಷ್ಮಾ ಶ್ರೀನಿವಾಸ್, ಪ್ರಭಾ ನಾರಾಯಣಗೌಡ, ಉಷಾ ಆಂಜನೇಯರೆಡ್ಡಿ, ಲೋಕೇಶ್ ಗೌಡ, ರಾಮೇಗೌಡ, ಹರೀಶ್, ನಾರಾಯಣ ಸ್ವಾಮಿ ಮತ್ತಿತರರು ನಿಯೋಗದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರದ ಮಾರ್ಗಸೂಚಿ ಪಾಲಿಸದ ರಾಜ್ಯ

ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಮರುಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಪಾಲಿಸುತ್ತಿಲ್ಲ. 2013ರಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಕೇಂದ್ರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಎಂಜಿನಿಯರಿಂಗ್ ಸಂಸ್ಥೆ ನವದೆಹಲಿ ಮತ್ತು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ ಜಂಟಿಯಾಗಿ ರೂಪಿಸಿದ ಕೊಳಚೆ ಮತ್ತು ಒಳಚರಂಡಿ ಸಂಸ್ಕರಣಾ ವ್ಯವಸ್ಥೆಗಳ ಕೈಪಿಡಿಯನ್ನು ಹೊರತಂದಿದೆ. ಇದನ್ನು ಎಲ್ಲ ರಾಜ್ಯ ಸರ್ಕಾರ ಒಪ್ಪಿಕೊಂಡಿವೆ.

ಕೊಳಚೆ ಮತ್ತು ಒಳಚರಂಡಿ ಸಂಸ್ಕರಣಾ ಮಾನದಂಡಗಳ ಕೈಪಿಡಿಯ ಪ್ರಕಾರ ಮುಖ್ಯ ಶಿಫಾರಸುಗಳಲ್ಲಿ ಅಗತ್ಯವಿರುವ ಸಂಸ್ಕರಣಾ ತಂತ್ರಗಳನ್ನು ಅನುಸರಿಸುವ ಮೂಲಕ ಒಳಚರಂಡಿ ನೀರಿನ ಕಡ್ಡಾಯ ಮೂರು ಹಂತಗಳಲ್ಲಿ ಸಂಸ್ಕರಣೆಯಾಗಬೇಕಿದೆ. ಮಾರ್ಗಸೂಚಿ ನಿರ್ದಿಷ್ಟವಾಗಿ ಬೆಂಗಳೂರಿನ ಕೊಳಚೆ ಮತ್ತು ಒಳಚರಂಡಿ ನೀರಿನ ತೃತೀಯ ಸಂಸ್ಕರಣೆ ಅತ್ಯಗತ್ಯ ಎಂದು ಹೇಳಿದೆ.

ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಎಚ್‌ಎನ್ ವ್ಯಾಲಿ ಮತ್ತು ಕೆಸಿ ವ್ಯಾಲಿಯಿಂದ ದ್ವಿತೀಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುತ್ತಿದೆ. ಅಂತರ್ಜಲ ವಿಷಪೂರಿತವಾಗಿ ಜನ ಮತ್ತು ಜಾನುವಾರುಗಳ ಜೀವಕ್ಕೆ ಸರಿಪಡಿಸಲಾಗದ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಬರಪೀಡಿತ ಜಿಲ್ಲೆಗಳನ್ನು ಉಳಿಸಲು ತೃತೀಯ ಹಂತದ ಸಂಸ್ಕರಣಾ ಸೌಲಭ್ಯಗಳೊಂದಿಗೆ ಎಸ್‌ಟಿಪಿಗಳನ್ನು ಉನ್ನತೀಕರಣಗೊಳಿಸಲು ಅಗತ್ಯವಾದ ಹಣ ಮಂಜೂರು ಮಾಡಬೇಕು‌. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಸಚಿವರಿಗೆ ನಿರ್ದೇಶನ ನೀಡಲು ಮಧ್ಯಸ್ಥಿಕೆ ವಹಿಸಬೇಕು ಎಂದು ನಿಯೋಗವು ರಾಜ್ಯಪಾಲರನ್ನು ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.