ADVERTISEMENT

1.25 ಲಕ್ಷ ರಾಸುಗಳಿಗೆ ವಿಮೆ ಗುರಿ

ಕೋಚಿಮುಲ್‌; ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರೀಮಿಯಂ ಇಳಿಕೆ

ಡಿ.ಎಂ.ಕುರ್ಕೆ ಪ್ರಶಾಂತ
Published 11 ಜೂನ್ 2024, 7:42 IST
Last Updated 11 ಜೂನ್ 2024, 7:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು (ಕೋಚಿಮುಲ್) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತನ್ನ ವ್ಯಾಪ್ತಿಯ ಎರಡೂ ಜಿಲ್ಲೆಗಳಲ್ಲಿ ರಾಸುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿಮೆಗೆ ಒಳಪಡಿಸುವ ಗುರಿ ಹೊಂದಿದೆ. 

ಈ ಬಾರಿ ಕೋಲಾರ ಜಿಲ್ಲೆಯಲ್ಲಿ 65 ಸಾವಿರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 60 ಸಾವಿರ ರಾಸುಗಳಿಗೆ ವಿಮೆ ಮಾಡಿಸಲು ಮುಂದಾಗಿದೆ. ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರೀಮಿಯಂ ಮೊತ್ತವೂ ಸಹ ಕಡಿಮೆ ಇದೆ. 

ಕಳೆದ ವರ್ಷ ₹ 60 ಸಾವಿರ ಮೌಲ್ಯದ ಒಂದು ರಾಸಿಗೆ ವಿಮೆ ಮಾಡಿಸಲು ರೈತರು ₹ 912 ಪ್ರೀಮಿಯಂ ಹಣ ಪಾವತಿಸಿದ್ದರು. ಈ ಬಾರಿ ಈ ಮೊತ್ತ ₹ 885ಕ್ಕೆ ಇಳಿಕೆ ಆಗಿದೆ. ಪ್ರೀಮಿಯಂನ ಅರ್ಧ ಹಣವನ್ನು ಕೋಚಿಮುಲ್ ಮತ್ತರ್ಧ ಹಣವನ್ನು ರೈತರು ಭರಿಸುತ್ತಿದ್ದಾರೆ. 

ADVERTISEMENT

ಕಳೆದ ವರ್ಷ ಹೆಚ್ಚಿದ್ದ ರಾಸುಗಳ ಸಾವು: ರಾಜ್ಯದಲ್ಲಿ ಕಳೆದ ವರ್ಷ ರಾಸುಗಳನ್ನು ಚರ್ಮಗಂಟು ರೋಗ ತೀವ್ರವಾಗಿ ಬಾಧಿಸಿತು. ದೊಡ್ಡ ಪ್ರಮಾಣದಲ್ಲಿ ರೋಗದಿಂದ ರಾಸುಗಳು ಮೃತಪಟ್ಟವು. ಹೈನುಗಾರಿಕೆಯನ್ನೇ ಪ್ರಮುಖವಾಗಿಸಿ ಕೊಂಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಸಹ ಈ ಚರ್ಮಗಂಟು ರೋಗದಿಂದ ತತ್ತರಿಸಿದರು. ರಾಸುಗಳ ಸಾವಿನ ಪ್ರಮಾಣ ಸಹ ಹೆಚ್ಚಿತ್ತು. ಕಳೆದ ವರ್ಷಕ್ಕೆ ಹೋಲಿಸಿದೆ ಈ ಬಾರಿ ರೋಗ ರಾಸುಗಳನ್ನು ಕಾಡುತ್ತಿಲ್ಲ. ಆದ್ದರಿಂದ ‌ರಾಸುಗಳ ಮರಣ ಪ್ರಮಾಣ ಕಡಿಮೆ ಇದೆ.  

ಹೆಚ್ಚುತ್ತಿದೆ ವಿಮೆ: ರಾಸುಗಳು ಅನಾರೋಗ್ಯದಿಂದ ಅಥವಾ ಇತ್ಯಾದಿ ಕಾರಣದಿಂದ ಮೃತಪಟ್ಟರೆ ರೈತರು ತೀವ್ರ ನಷ್ಟ ಅನುಭವಿಸುತ್ತಾರೆ. ರೈತರು ನಷ್ಟಕ್ಕೆ ಒಳಗಾಗಬಾರದು ಎಂದು ಕೋಚಿಮುಲ್ ರಾಸುಗಳಿಗೆ ವಿಮೆ ಮಾಡಿಸುತ್ತಿದೆ. ಪ್ರತಿ ವರ್ಷ ವಿಮೆಗಾಗಿಯೇ ಇಂತಿಷ್ಟು ಹಣವನ್ನು ಕೋಚಿಮುಲ್ ಮೀಸಲಿಡುತ್ತಿದೆ. ಕಳೆದ ವರ್ಷ ವಿಮೆಗಾಗಿಯೇ ₹ 20 ಕೋಟಿ ಮೀಸಲಿಡಲಾಗಿತ್ತು. ₹ 10 ಕೋಟಿಯನ್ನು ಕೋಚಿಮುಲ್ ಭರಿಸಿದ್ದರೆ ಉಳಿದ ₹ 10 ಕೋಟಿಯನ್ನು ರೈತರು ಭರಿಸಿದ್ದರು. 

ಹಾಲು ಕೊಡುವ ರಾಸುಗಳ ಸಾವಿನಿಂದ ರೈತರ ಆರ್ಥಿಕ ಮೂಲಗಳಿಗೆ ಪೆಟ್ಟು ಬೀಳುತ್ತದೆ. ಈ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಕೋಚಿಮುಲ್ ರಾಸುಗಳಿಗೆ ವಿಮೆ ಮಾಡಿಸಲು ಕ್ರಮವಹಿಸುತ್ತಿದೆ.  

2022–23ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯಲ್ಲಿ 55,425 ರಾಸುಗಳು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 51,268 ರಾಸುಗಳು ವಿಮೆಗೆ ಒಳಪಟ್ಟಿದ್ದವು. 2023–24ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯಲ್ಲಿ 65,000 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 52,448 ರಾಸುಗಳು ವಿಮೆಗೆ ಒಳಪಟ್ಟಿದ್ದವು. 2024–25ನೇ ಸಾಲಿನಲ್ಲಿ 1.25 ಲಕ್ಷ ರಾಸುಗಳನ್ನು ವಿಮೆಗೆ ಒಳಪಡಿಸುವ ಗುರಿ ಇದೆ.

ಮರಣ ಪ್ರಮಾಣವೂ ಹೆಚ್ಚು: ಅವಳಿ ಜಿಲ್ಲೆಯಲ್ಲಿ 2022–23ನೇ ಸಾಲಿನಲ್ಲಿ 2,350 ರಾಸುಗಳು ಮೃತಪಟ್ಟಿವೆ. ಈ ಮೃತ ರಾಸುಗಳ ಮಾಲೀಕರಿಗೆ ವಿಮೆಯ ಹಣವನ್ನು ನೀಡಲಾಗಿದೆ. 2023–24ನೇ ಸಾಲಿನಲ್ಲಿ ಇಲ್ಲಿಯವರೆಗೆ ಮೃತಪಟ್ಟ 1,650 ರಾಸುಗಳಿಗೆ ವಿಮೆ ಹಣ ಪಾವತಿಸಲಾಗಿದೆ. ಕೋಚಿಮುಲ್ ಮೂಲಗಳ ಪ್ರಕಾರ ಇನ್ನೂ 200ಕ್ಕೂ ಹೆಚ್ಚು ರಾಸುಗಳ ವಿಮೆ ಹಣವು ಬಾಕಿ ಇದೆ. 

‘ವಿಮೆ ಮಾಡಿಸಿದರೆ ಅನುಕೂಲ’

ವಿಮೆ ಮಾಡಿಸುವುದರಿಂದ ರೈತರಿಗೆ ಅನುಕೂಲ. ಕೋಚಿಮುಲ್‌ ಸಹಕಾರ ಸಂಘಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ಪ್ರತಿ ವರ್ಷ ವಿಮೆ ಮಾಡಿಸುವಂತೆ ರೈತರಿಗೆ ತಿಳಿವಳಿಕೆ ನೀಡುತ್ತಿದೆ ಎಂದು ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. ವಿಮೆ ಹಣವನ್ನು ತಕ್ಷಣವೇ ರೈತರಿಗೆ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ವಿಮೆ ಹಣ ನೀಡುವುದು ತಡವಾಗಬಾರದು ಎಂದು ವಿಮಾ ಕಂಪನಿಗೆ ನಿರ್ದೇಶನ ನೀಡಿದ್ದೇವೆ. ತಾಂತ್ರಿಕ ಕಾರಣದಿಂದ ಬಾಕಿ ಇದ್ದ ಅರ್ಜಿಗಳನ್ನೂ ತಕ್ಷಣವೇ ವಿಲೇವಾರಿ ಮಾಡಿಸಿದ್ದೇನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.