ADVERTISEMENT

ಚಿಕ್ಕಬಳ್ಳಾಪುರ: ತುಪ್ಪಕ್ಕೆ ಬೇಡಿಕೆ; ಕರಗಲಿದೆ ಕೋಚಿಮುಲ್ ಬೆಣ್ಣೆ

ಆಫ್ರಿಕಾಕ್ಕೆ ಹಾಲಿನ ಪೌಡರ್ ಪೂರೈಸಲು ಕೆಎಂಎಫ್ ಒಡಂಬಡಿಕೆ

ಡಿ.ಎಂ.ಕುರ್ಕೆ ಪ್ರಶಾಂತ
Published 10 ಅಕ್ಟೋಬರ್ 2024, 3:58 IST
Last Updated 10 ಅಕ್ಟೋಬರ್ 2024, 3:58 IST
ಕೆ.ವೈ.ನಂಜೇಗೌಡ
ಕೆ.ವೈ.ನಂಜೇಗೌಡ   

ಚಿಕ್ಕಬಳ್ಳಾಪುರ: ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ತಯಾರಿಸುವ ಲಾಡಿಗೆ ಈ ಹಿಂದೆ ರಾಜ್ಯದ ತುಪ್ಪ ಪೂರೈಕೆ ಆಗುತ್ತಿತ್ತು. ಆದರೆ ಆಂಧ್ರಪ್ರದೇಶದ ಜಗನ್ ಸರ್ಕಾರದ ಜೊತೆಗೆ ಬೆಲೆ ವಿಚಾರದಲ್ಲಿ ಹೊಂದಾಣಿಕೆ ಆಗದ ಕಾರಣ ಆಂಧ್ರ ಸರ್ಕಾರವು ನಂದಿನಿ ತುಪ್ಪ ಖರೀದಿ ಸ್ಥಗಿತಗೊಳಿಸಿತ್ತು.

ತಿರುಪತಿ ತಿಮ್ಮಪ್ಪ ದೇಗುಲದಲ್ಲಿ ನೀಡುವ ಲಾಡಿನಲ್ಲಿ ದನದಕೊಬ್ಬು ಮತ್ತಿತರ ಅಂಶಗಳು ಪತ್ತೆ ಆಗಿರುವುದು ಇತ್ತೀಚೆಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು. 

ಮತ್ತೆ ಆಂಧ್ರಸರ್ಕಾರವು ರಾಜ್ಯದ ನಂದಿನಿ ತುಪ್ಪವನ್ನು ಲಾಡು ತಯಾರಿಕೆಗೆ ಬಳಸಲು ಮುಂದಾಗಿದೆ. ಈ ಪರಿಣಾಮ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ಇದು ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೂ (ಕೋಚಿಮುಲ್‌)‌ ಒಳ್ಳೆಯ ಕಾಲ ಎನ್ನುವಂತೆ ಆಗಿದೆ. 

ADVERTISEMENT

ತಿರುಪತಿಗೆ ಕೋಲಾರವು ಸಮೀಪದಲ್ಲಿ ಇದೆ. ಕೋಚಿಮುಲ್‌ನಲ್ಲಿ ತಯಾರಾಗುವ ತುಪ್ಪದ ಸರಬರಾಜು ಸುಲಭವಾಗಿದೆ. ಈ ಕಾರಣದಿಂದ ಕೋಚಿಮುಲ್‌ನಲ್ಲಿ ತಯಾರಾಗುತ್ತಿರುವ ನಂದಿನಿ ತುಪ್ಪ ತಿರುಪತಿಯತ್ತ ಹೆಚ್ಚು ರವಾನೆ ಆಗುತ್ತಿದೆ.

ಕೋಚಿಮುಲ್ ಬಳಿ 800 ಟನ್ ಬೆಣ್ಣೆ ಸಂಗ್ರಹವಿದೆ. ತುಪ್ಪಕ್ಕೆ ಬೇಡಿಕೆ ಹೆಚ್ಚಿರುವುದರಿಂದ ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಇರುವ ಬೆಣ್ಣೆಯು ಕರಗುವ ದಿನಗಳು ದೂರವೇನೂ ಇಲ್ಲ ಎನ್ನುವುದು ಕೋಚಿಮುಲ್ ಅಭಿಪ್ರಾಯ.

‘ಕೋಚಿಮುಲ್ ಒಕ್ಕೂಟವು ತಿರುಪತಿಗೆ ಸಮೀಪವಿದೆ. ಆದ್ದರಿಂದ ನಮ್ಮ ಒಕ್ಕೂಟಕ್ಕೆ ತುಪ್ಪ ಪೂರೈಕೆಗೆ ಈ ಹಿಂದೆಯೂ ಹೆಚ್ಚು ಅವಕಾಶಗಳು ದೊರೆಯುತ್ತಿದ್ದವು. ಈಗ ಮತ್ತೆ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ನಮ್ಮ ಒಕ್ಕೂಟದಿಂದಲೂ ತುಪ್ಪ ಪೂರೈಸುತ್ತಿದ್ದೇವೆ. ಒಕ್ಕೂಟಕ್ಕೆ ಅನುಕೂಲವಾಗಿದೆ’ ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

₹20 ಕೋಟಿ ಲಾಭ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಬಳಿ ಇರುವ 2,100 ಟನ್ ಹಾಲಿನ ಪೌಡರ್ ಖಾಲಿಯಾಗುವ ದಿನಗಳು ಬಂದಿವೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಆಫ್ರಿಕಾಕ್ಕೆ ರಾಜ್ಯದಿಂದ ಹಾಲಿನ ಪೌಡರ್‌ ಕಳುಹಿಸುವ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. 

ಈ ಒಪ್ಪಂದವು ಕುದುರಿದರೆ ಕೋಚಿಮುಲ್‌ಗೆ ₹20 ಕೋಟಿಯಷ್ಟು ಆದಾಯ ಹೆಚ್ಚುವರಿಯಾಗಿ ದೊರೆಯುತ್ತದೆ. ಸದ್ಯ ಕೋಚಿಮುಲ್‌ನ ಗೋದಾಮುಗಳಲ್ಲಿ 2,100 ಟನ್ ಹಾಲಿನ ಪೌಡರ್ ಸಂಗ್ರಹವಿದೆ. ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆಗೂ ಈ ಪೌಡರ್ ನೀಡಲಾಗುತ್ತಿದೆ. ಇಷ್ಟೆಲ್ಲದ್ದರ ನಂತರವೂ ದೊಡ್ಡ ಪ್ರಮಾಣದಲ್ಲಿ ಪೌಡರ್ ಉಳಿದಿದೆ. 

ಮಾರುಕಟ್ಟೆಯಲ್ಲಿ ಕೋಚಿಮುಲ್ ಒಂದು ಕೆ.ಜಿ ಹಾಲಿನ ಪೌಡರ್ ಅನ್ನು ₹220ಕ್ಕೆ ಮಾರಾಟ ಮಾಡುತ್ತಿದೆ. ಆಫ್ರಿಕಾಕ್ಕೆ ₹320ಕ್ಕೆ ಪೂರೈಸಲು ಮಾತುಕತೆಗಳು ನಡೆದಿವೆ.  

‘ಹಾಲಿನ ಪೌಡರ್ ಅನ್ನು ಕ್ಷೀರಭಾಗ್ಯ ಯೋಜನೆಗೆ ನೀಡುತ್ತಿದ್ದೆವು. ನಷ್ಟವಾಗುತ್ತಿದೆ ಎಂದು ಸರ್ಕಾರಕ್ಕೆ ತಿಳಿಸಿದ ಕಾರಣ ಒಂದು ಕೆ.ಜಿ ಪೌಡರ್ ಬೆಲೆಯನ್ನು ಸರ್ಕಾರವು ₹ 38 ಹೆಚ್ಚಳ ಮಾಡಿತು. ಈಗ ಆಫ್ರಿಕಾವು ಕೆಎಂಎಫ್‌ನಿಂದ ಪೌಡರ್ ಖರೀದಿಸಲು ಮುಂದಾಗಿದೆ. ಒಂದು ಕೆ.ಜಿ ಹಾಲಿನ ಪೌಡರ್ ಅನ್ನು ₹320ಕ್ಕೆ ಖರೀದಿಸಲಿದೆ. ಈ ಬಗ್ಗೆ ಮಾತುಕತೆಗಳು ನಡೆದಿವೆ. ಶೀಘ್ರದಲ್ಲಿಯೇ ಈ ಪ್ರಕ್ರಿಯೆಗಳು ಪೂರ್ಣವಾಗಲಿದೆ’ ಎಂದು ಕೆ.ವೈ.ನಂಜೇಗೌಡ ತಿಳಿಸಿದರು.

‘ಒಕ್ಕೂಟಕ್ಕೆ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು ಮಾರುಕಟ್ಟೆ ಕಂಡುಕೊಂಡಿದ್ದೇವೆ. ಹಾಲಿನ ಪೌಡರ್‌ ದಾಸ್ತಾನು ಇರುವುದರಿಂದ ಒಕ್ಕೂಟಕ್ಕೆ ಹಣದ ಸಮಸ್ಯೆಯೇನೂ ಆಗಿಲ್ಲ’ ಎಂದರು. 

ನಂದಿನಿ ಶುದ್ಧ ತುಪ್ಪ

ವಿಭಜನೆ; ನ್ಯಾಯಾಲಯದತ್ತ ಚಿತ್ತ

ಕೋಚಿಮುಲ್ ವಿಭಜನೆಗೆ ಸಂಬಂಧಿಸಿದಂತೆ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಅ.23ಕ್ಕೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಅಂದು ವಿಭಜನೆಗೆ ಕೋರ್ಟ್ ಅಸ್ತು ಎನ್ನುವ ವಿಶ್ವಾಸವಿದೆ ಎಂದು ಕೆ.ವೈ.ನಂಜೇಗೌಡ ತಿಳಿಸಿದರು. ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರು ಮತ್ತು ನಿರ್ದೇಶಕರು ವಿಭಜನೆಯನ್ನು ಎಂದಿಗೂ ವಿರೋಧಿಸಿಲ್ಲ. ಆದರೆ ಬಿಜೆಪಿ ಸರ್ಕಾರವು ಮಾಡಿದ್ದ ಅವೈಜ್ಞಾನಿಕ ವಿಭಜನೆಯನ್ನು ವಿರೋಧಿಸಿದ್ದೆವು. ಈಗ ವೈಜ್ಞಾನಿಕ ರೀತಿಯಲ್ಲಿ ವಿಭಜನೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.