ADVERTISEMENT

ಚಿಕ್ಕಬಳ್ಳಾಪುರ: ಕೋಚಿಮುಲ್ ಚುನಾವಣಾ ಪ್ರಕ್ರಿಯೆಗೆ ನಿಶಾನೆ

2024ರ ಮಾ.21ರ ಹಂತದಿಂದ ಚುನಾವಣಾ ಪ್ರಕ್ರಿಯೆ ಮುಂದುವರಿಸುವಂತೆ ಆದೇಶ

ಡಿ.ಎಂ.ಕುರ್ಕೆ ಪ್ರಶಾಂತ
Published 15 ಜೂನ್ 2024, 6:27 IST
Last Updated 15 ಜೂನ್ 2024, 6:27 IST
   

ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜನೆ ಆಗುತ್ತದೆ ಎನ್ನುವ ಜಿಲ್ಲೆಯ ಸಹಕಾರ ವಲಯದ ನಿರೀಕ್ಷೆಗಳು ಮತ್ತೆ ಹುಸಿಯಾಗಿವೆ. ಸಹಕಾರ ಸಂಘಗಳಿಗೆ ಚುನಾವಣಾ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ರಾಜ್ಯ ಸರ್ಕಾರ ಮಾರ್ಪಾಡು ಆದೇಶ ಹೊರಡಿಸಿದೆ. 

‘ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿ 2024ರ ಮಾ.21ಕ್ಕೆ ಯಾವ ಹಂತದಲ್ಲಿ ನಿಂತು ಹೋಗಿದೆಯೊ ಆ ಹಂತದಿಂದಲೇ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು’ ಎಂದು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಗುರುವಾರ (ಜೂ.13) ಮಾರ್ಪಾಡು ಆದೇಶ ಹೊರಡಿಸಿದ್ದಾರೆ. 

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಏ.28ಕ್ಕೆ ಚುನಾವಣೆ ನಿಗದಿಯಾಗಿತ್ತು. ಕೋಲಾರ ಜಿಲ್ಲಾಧಿಕಾರಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮತದಾನದ ಹಕ್ಕು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಅರ್ಹ ಮತದಾರರ ಕರಡು ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿ ಸಿದ್ಧಗೊಂಡ ನಂತರ ಸಹಕಾರ ವಲಯದ ರಾಜಕಾರಣ ಮತ್ತಷ್ಟು ರಂಗೇರಿತ್ತು.

ADVERTISEMENT

ಈ ನಡುವೆಯೇ ಕೋಚಿಮುಲ್ ವಿಭಜನೆ ಆಗಬೇಕು. ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ರಚನೆಯಾದ ನಂತರ ಚುನಾವಣೆ ನಡೆಸಬೇಕು ಎಂದು ಒಕ್ಕೂಟದ ಕೆಲವು ನಿರ್ದೇಶಕರು ಆಗ್ರಹಿಸುತ್ತಿದ್ದರು. 

ಈ ಎಲ್ಲ ಬೆಳವಣಿಗೆಗಳ ನಡುವೆ ಲೋಕಸಭೆ  ಚುನಾವಣೆಯ ನೀತಿ ಸಂಹಿತೆ ಜಾರಿ ಆಯಿತು. ಕೋಚಿಮುಲ್ ಚುನಾವಣೆಯ ಪ್ರಕ್ರಿಯೆಗಳು ಸ್ಥಗಿತವಾದವು. ವಿಭಜನೆಯ ತರುವಾಯ ಚುನಾವಣೆ ನಡೆಸಿ ಎನ್ನುವ ಕೆಲವು ನಿರ್ದೇಶಕರಿಗೆ ನೀತಿ ಸಂಹಿತೆ ಸಂತಸ ತಂದಿತು. 

ಲೋಕಸಭೆ ಚುನಾವಣೆ ನಂತರವಾದರೂ ಸರ್ಕಾರ ವಿಭಜನೆಗೆ ಮನಸ್ಸು ಮಾಡುತ್ತದೆ ಎಂದು ನಿರೀಕ್ಷೆ ಹೊಂದಿದ್ದರು. ಆದರೆ ಈಗ ಸರ್ಕಾರ ಸ್ಥಗಿತವಾಗಿದ್ದ ಸಹಕಾರ ಸಂಘಗಳ ಚುನಾವಣೆಯನ್ನು ಮುಂದುವರಿಸುವಂತೆ ಆದೇಶಿಸಿದೆ. 

‘ರಿಟರ್ನಿಂಗ್ ಅಧಿಕಾರಿಯಿಂದ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಪ್ರಕರಣಗಳಲ್ಲಿ, ಮತದಾನ ಹಕ್ಕುಳ್ಳ ಸದಸ್ಯ ಸಹಕಾರ ಸಂಘಗಳ ಎಲ್ಲ ಡೆಲಿಗೇಟ್‌ಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿ ಸಿದ್ಧಪಡಿಸಲು ಸಂಘಕ್ಕೆ (ಮಾಧ್ಯಮಿಕ, ಒಕ್ಕೂಟ, ಅಪೆಕ್ಸ್ ಸಹಕಾರ ಸಂಘಗಳು) ಸಲ್ಲಿಸಿದ್ದ ಪ್ರಕರಣಗಳ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಬೇಕು’ ಎಂದು ಸರ್ಕಾರ ಆದೇಶಿಸಿದೆ. 

ಕಾಂಗ್ರೆಸ್ ನಿರ್ದೇಶಕರಲ್ಲಿಯೇ ಬೇಸರ: 2019ರಲ್ಲಿ ಕೋಚಿಮುಲ್ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತು. 2024ರ ಮೇ 12ಕ್ಕೆ ಆಡಳಿತ ಮಂಡಳಿಯ ಅಧಿಕಾರದ ಅವಧಿ ಪೂರ್ಣಗೊಂಡಿದೆ. ಒಟ್ಟು 13 ಮಂದಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. 2019ರ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೇ ಹೆಚ್ಚು ಆಯ್ಕೆಯಾಗಿದ್ದು ಅಧಿಕಾರ ಸಹ ಪಡೆದರು. 

ನಮ್ಮದೇ ಸರ್ಕಾರದಲ್ಲಿ ಕೋಚಿಮುಲ್ ವಿಭಜನೆ ಆಗುತ್ತದೆ. ಚಿಕ್ಕಬಳ್ಳಾಪುರ ಪ್ರತ್ಯೇಕ ಒಕ್ಕೂಟ ಅಸ್ತಿತ್ವಕ್ಕೆ ಬರುತ್ತದೆ. ಆ ಕ್ರೆಡಿಟ್‌ ಕಾಂಗ್ರೆಸ್ ಪಾಲಿಗೆ ದೊರೆಯಲಿದೆ ಎಂದು ಕೆಲವು ನಿರ್ದೇಶಕರು ನಿರೀಕ್ಷೆ ಹೊಂದಿದ್ದರು. ಆದರೆ ಅವರ ನಿರೀಕ್ಷೆ ಈಡೇರುತ್ತಲೇ ಇಲ್ಲ. 

ಬಿಜೆಪಿ ಅವಧಿಯಲ್ಲಿ ರಚನೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರ ನವೆಂಬರ್ 8ರಂದು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಕೋಚಿಮುಲ್‌ ವಿಭಜನೆಗೆ ಮುದ್ರೆ ಬಿದ್ದಿತ್ತು. ಚಿಕ್ಕಬಳ್ಳಾಪುರ ‌ಜಿಲ್ಲೆಗೆ ಪ್ರತ್ಯೇಕ ಹಾಲು‌ ಒಕ್ಕೂಟ ಸ್ಥಾಪಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆಯ ಜಂಟಿ‌ ಕಾರ್ಯದರ್ಶಿ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. ಆಸ್ತಿ‌ ಮತ್ತು ಜವಾಬ್ದಾರಿ ವಿಭಜನೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು 2021ರ ಡಿಸೆಂಬರ್‌ನಲ್ಲಿ ಸರ್ಕಾರ ಆದೇಶಿತ್ತು.

2022ರ ಜೂನ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಿಮುಲ್) ಸಹಕಾರ ಸಂಘಗಳ ಕಾಯ್ದೆಯಡಿ ಅಧಿಕೃತವಾಗಿ ನೋಂದಣಿಯೂ ಆಯಿತು. ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು. ನಂತರ ಚಿಮುಲ್ ಆಡಳಿತ ಮಂಡಳಿ ರಚನೆಗೆ ಸರ್ಕಾರ ಮುಂದಾಯಿತು. ಕೋಚಿಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಜಿಲ್ಲೆಯ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಅಧಿಕಾರದ ಅವಧಿಗೆ ಇದರಿಂದ ಕುತ್ತು ಎದುರಾಯಿತು. ಆಗ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹೈಕೋರ್ಟ್ ಮೆಟ್ಟಿಲೇರಿದರು.  

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಕ್ಕೆ ಇಳಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ‘ಹಾಲು ಉತ್ಪಾದಕರ ಸಹಕಾರ ಸಂಘಗಳು, ನಿರ್ದೇಶಕರ ಅಭಿಪ್ರಾಯ ಪಡೆದು ಮುಂದಿನ ದಿನಗಳಲ್ಲಿ ವಿಭಜನೆ ಬಗ್ಗೆ ಕ್ರಮಕೈಗೊಳ್ಳಲಾಗುವುದು. ವಿಭಜನೆಯಿಂದ ಒಕ್ಕೂಟದ ಅಭಿವೃದ್ಧಿಗೆ ತೊಂದರೆ ಆಗಲಿದೆ. ಉತ್ಪಾದಕರಿಗೂ ಸಮಸ್ಯೆ ಆಗಲಿದೆ’ ಎಂದು ರಾಜ್ಯ ಸರ್ಕಾರ ವಿಭಜನೆಯ ಆದೇಶವನ್ನೇ ವಾಪಸ್ ಪಡೆಯಿತು.

ಈಡೇರದ ಸಚಿವರ ಭರವಸೆ
‘ಸೆಪ್ಟೆಂಬರ್‌ನಲ್ಲಿ ಕೋಚಿಮುಲ್ ವಿಭಜನೆ ತೀರ್ಮಾನ’ ಎಂದು ಚಿಂತಾಮಣಿಯಲ್ಲಿ ಕಳೆದ ವರ್ಷ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದರು. ಹೀಗೆ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದ ಕಾರಣ ವಿಭಜನೆ  ಚರ್ಚೆಗೆ ಕಾರಣವಾಗಿತ್ತು. ಆದರೆ ‌ವಿಭಜನೆ ವಿಚಾರ ಹಿನ್ನಲೆಗೆ ಸರಿದು ಚುನಾವಣೆ ನಿಗದಿ ಆಯಿತು. ಈಗ ಸ್ಥಗಿತವಾಗಿದ್ದ ಚುನಾವಣೆಗೆ ಮರು ಚಾಲನೆ ದೊರೆತಿದೆ. ವಿಭಜನೆಯ ಮಾತು ದೂರವಾಗಿದೆ.

ಕೋಚಿಮುಲ್ ಹೊರಗಿಡಿ:

ಮಾರ್ಪಾಡು ಆದೇಶದ ಪ್ರಕಾರ ಕೋಚಿಮುಲ್‌ಗೆ ಚುನಾವಣಾ ಪ್ರಕ್ರಿಯೆಗಳು ಮತ್ತೆ ಚಾಲನೆ ದೊರೆಯುತ್ತದೆ. ಇದರ ಬದಲು ಚುನಾವಣಾ ಪ್ರಕ್ರಿಯೆಯಿಂದ ಕೋಚಿಮುಲ್ ಅನ್ನು ಹೊರಗಿಡಬೇಕು. ವಿಭಜನೆ ತರುವಾಯ ಚುನಾವಣೆ ನಡೆಸಬೇಕು’ ಎಂದು  ಕೋಚಿಮುಲ್ ಮಾಜಿ ನಿರ್ದೇಶಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ವಿಭಜನೆಯ ಬಗ್ಗೆ ವರ್ಷದ ಹಿಂದೆಯೇ ತಿಳಿಸಿದ್ದರು. ಆದರೆ ಇಂದಿಗೂ ವಿಭಜನೆಯಾಗಿಲ್ಲ. ಸಚಿವರು ಈ ಬಗ್ಗೆ ಗಮನವಹಿಸಬೇಕು ಎಂದರು.

ಕರಡು ಪಟ್ಟಿ; 1,772 ಮತದಾರರು
ಕರಡು ಮತದಾರರ ಪಟ್ಟಿಯ ಅಂಕಿ ಸಂಖ್ಯೆಗಳ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 882 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 890 ಮಂದಿ ಮತದಾರರು ನಿರ್ದೇಶಕ ಚುನಾವಣೆಯಲ್ಲಿ ಮತ ಚಲಾಯಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.