ADVERTISEMENT

ಕೋಚಿಮುಲ್: ಏರಿಕೆಯತ್ತ ಹಾಲು ‌ಉತ್ಪಾದನೆ

ಡಿ.ಎಂ.ಕುರ್ಕೆ ಪ್ರಶಾಂತ
Published 27 ಜೂನ್ 2024, 6:06 IST
Last Updated 27 ಜೂನ್ 2024, 6:06 IST
ಕೋಲಾರದಲ್ಲಿರುವ ಕೋಚಿಮುಲ್‌ ಆಡಳಿತ ಕಚೇರಿಯ ಹೊರ ನೋಟ
ಕೋಲಾರದಲ್ಲಿರುವ ಕೋಚಿಮುಲ್‌ ಆಡಳಿತ ಕಚೇರಿಯ ಹೊರ ನೋಟ   

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ಆಡಳಿತ ಮಂಡಳಿಯ ಅಧಿಕಾರ ಅವಧಿ ವಿಸ್ತರಣೆ ಮತ್ತು ವಿಭಜನೆಯ ವಿಚಾರ ಈಗ ಅವಳಿ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಯಲ್ಲಿದೆ. ಈ ಚರ್ಚೆಯ ನಡುವೆಯೇ ಕೋಚಿಮುಲ್‌ನ ಹಾಲು ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ. 

2024ರ ಜನವರಿಯಲ್ಲಿ ಕೋಚಿಮುಲ್‌ಗೆ ರೈತರು 9.65 ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದರು. ಈಗ ಜೂನ್ ತಿಂಗಳಲ್ಲಿ ಈ ಪ್ರಮಾಣ 12.37 ಲಕ್ಷಕ್ಕೆ ತಲುಪಿದೆ. 

ಬೇಸಿಗೆ ಕಳೆದು ಮುಂಗಾರು ಆರಂಭವಾಗುತ್ತಿದ್ದಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರ ಜೀವನಾಡಿ ಹೈನೋದ್ಯಮಕ್ಕೆ ಜೀವ ಕಳೆ ಬಂದಿದೆ. ಕಳೆದ ವರ್ಷ ಎರಡೂ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬರ ಬಿದ್ದಿತ್ತು. ತೀವ್ರ ಬರಪೀಡಿತ ಜಿಲ್ಲೆಗಳು ಎನ್ನುವ ಹಣೆಪಟ್ಟಿಯನ್ನು ಹೊತ್ತಿದ್ದವು. ಹಸಿರು ಮೇವಿನ ಸಮಸ್ಯೆಯ ಕಾರಣ ಹೈನುಗಾರಿಕೆಯ ಕರಿಛಾಯೆ ಆವರಿಸಿತ್ತು. ಒಣ ಮೇವಿಗೂ ಸಹ ರೈತರು ಹೆಚ್ಚು ಹಣ ನೀಡಬೇಕಾಗಿತ್ತು. ಹೀಗೆ ನಾನಾ ಕಾರಣಗಳಿಂದ ಹಾಲು ಉತ್ಪಾದನೆ ಕ್ಷೀಣಿಸಿತ್ತು.

ADVERTISEMENT

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾದ  ಬೆನ್ನಲೇ ಈ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳ ಕಂಡಿದೆ. ಒಂದೂವರೆ ತಿಂಗಳಲ್ಲಿ 2.50 ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆ ಎರಡು ಜಿಲ್ಲೆಗಳಲ್ಲಿ ಹೆಚ್ಚಳವಾಗಿದೆ. ಈಗ ನಿತ್ಯ 12.37 ಲಕ್ಷ ಲೀಟರ್ ಹಾಲನ್ನು ಕೋಚಿಮುಲ್‌ಗೆ ಉತ್ಪಾದಕರು ಪೂರೈಕೆ ಮಾಡುತ್ತಿದ್ದಾರೆ. ಇದೇ ವರ್ಷದ ಬೇಸಿಗೆಯ ದಿನಗಳಲ್ಲಿ 9.75 ಲಕ್ಷ ಲೀಟರ್‌ಗಳಿಂದ 10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. 

ಹೀಗೆ ಹಾಲು ಉತ್ಪಾದನೆ ಗಣನೀಯವಾಗಿ ಹೆಚ್ಚಿರುವುದು ರೈತರಲ್ಲಿ ತೀವ್ರ ಸಂತಸಕ್ಕೆ ಕಾರಣವಾಗಿದೆ. ಕೋಚಿಮುಲ್ ಎರಡು ಜಿಲ್ಲೆಗಳಲ್ಲಿ ಒಟ್ಟು 1,928 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 978 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದ್ದರೆ, ಕೋಲಾರ ಜಿಲ್ಲೆಯಲ್ಲಿ 950 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ.

ಎರಡೂ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲು ಉತ್ಪಾದಕರು ‌‌‌ಇದ್ದಾರೆ. 

ಶಾಶ್ವತ ನೀರಾವರಿ ಇಲ್ಲದ ಪರಿಣಾಮ ಇಲ್ಲಿನ ರೈತರು ಆರ್ಥಿಕ ಬದುಕು ಉತ್ತಮಗೊಳ್ಳಲು ಹೈನುಗಾರಿಕೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ದಶಕಗಳಿಂದ ಹೈನೋದ್ಯಮದ ಮೇಲೆಯೆ ಹೆಚ್ಚು ಅವಲಂಬಿತವಾಗಿದೆ. ಲಕ್ಷಾಂತರ ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ. ಸ್ವಾವಲಂಬಿ ಜೀವನ ನಡೆಸುತ್ತಿವೆ.

ಬೇಸಿಗೆ ಪರಿಣಾಮ ಹಲವು ತಿಂಗಳಿಂದ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ  ಕುಸಿತವಾಗಿತ್ತು. ಆದರೆ ಈಗ ಮತ್ತೆ ಮುಂಗಾರು ಶುರುವಾದ ಕೂಡಲೇ ಎರಡು ಜಿಲ್ಲೆಗಳಲ್ಲಿ ಹೈನುಗಾರಿಕೆ ಚೇತರಿಕೆ ಕಂಡಿದೆ.

ಜೊತೆಗೆ ಮೇವು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 30,617, ಕೋಲಾರ ಜಿಲ್ಲೆಯಲ್ಲಿ 35 ಸಾವಿರಕ್ಕೂ ಹೆಚ್ಚು ಮೇವಿನ ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.