ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆ ಆಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಗಳ ನಡುವೆ ಆಸ್ತಿ, ಮಾರುಕಟ್ಟೆಯ ವಿಭಜನೆಯ ಕುರಿತು ಮಾತುಕತೆಗಳು ನಡೆದಿವೆ.
ಈ ನಡುವೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಅಸ್ತಿತ್ವದ ನಂತರ ಚಿಮುಲ್‌ಗೆ ಎಷ್ಟು ಮಂದಿ ನಿರ್ದೇಶಕ ಸ್ಥಾನಗಳನ್ನು ಕಾಯ್ದಿರಿಸಲಾಗುತ್ತದೆ? ಹೊಸ ತಾಲ್ಲೂಕುಗಳಾದ ಮಂಚೇನಹಳ್ಳಿ, ಚೇಳೂರಿಗೆ ಪ್ರಾತಿನಿಧ್ಯ ದೊರೆಯಲಿದೆಯೇ? ಹೆಚ್ಚಿನ ಸಂಖ್ಯೆಯ ಡೇರಿಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಎರಡು ನಿರ್ದೇಶಕ ಸ್ಥಾನಗಳು ರೂಪುಗೊಳ್ಳುತ್ತವೆಯೇ ಎನ್ನುವ ಚರ್ಚೆಗಳು ಜಿಲ್ಲೆಯ ಸಹಕಾರ ವಲಯದಲ್ಲಿ ಬಿರುಸಿನಿಂದ ನಡೆದಿವೆ.
ಈಗಾಗಲೇ ಚಿಮುಲ್‌ಗೆ ಉಪವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಹೊಸ ಒಕ್ಕೂಟಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನೂ ನೇಮಿಸಲಾಗಿದೆ. ಹೀಗೆ ಒಂದೊಂದೇ ಪ್ರಕ್ರಿಯೆಗಳು ನಡೆಯುತ್ತಿವೆ. ಈ ನಡುವೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳ ಬಗ್ಗೆಯೂ ಅಧಿಕಾರಿಗಳು ಮತ್ತು ಸಹಕಾರ ವಲಯದಲ್ಲಿ ಚರ್ಚೆಗಳು ಗರಿಗೆದರಿವೆ.
ಕೋಚಿಮುಲ್ ಅಸ್ತಿತ್ವದಲ್ಲಿದ್ದ ವೇಳೆ ಎರಡೂ ಜಿಲ್ಲೆಯ 11 ತಾಲ್ಲೂಕುಗಳಿಂದ ತಲಾ ಒಬ್ಬರು, ಎರಡೂ ಜಿಲ್ಲೆಗಳಿಂದ ತಲಾ ಒಬ್ಬ ಮಹಿಳಾ ಪ್ರತಿನಿಧಿ ಚುನಾವಣೆಯ ಮೂಲಕ ಆಯ್ಕೆ ಆಗುತ್ತಿದ್ದರು. ಸರ್ಕಾರದ ನಾಮನಿರ್ದೇಶಕರು, ಎನ್‌ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿ ನಿರ್ದೇಶಕರಾಗಿದ್ದರು.
ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲ್ಲೂಕುಗಳಿಂದ ತಲಾ ಒಬ್ಬರು ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಒಬ್ಬರು ನಿರ್ದೇಶಕರಾಗಿ ಆಯ್ಕೆ ಆಗಿದ್ದರು. ಕೋಚಿಮುಲ್‌ನಲ್ಲಿ ಜಿಲ್ಲೆಯಿಂದ 7 ಮಂದಿ ನಿರ್ದೇಶಕರು ಇದ್ದರು.
ಆದರೆ ಈಗ ಚಿಮುಲ್ ಅಸ್ತಿತ್ವಕ್ಕೆ ಬಂದಿದೆ. ಸಹಜವಾಗಿ ಸರ್ಕಾರದ ಒಬ್ಬ ನಾಮನಿರ್ದೇಶಕರು, ಎನ್‌ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆಯ ಪ್ರತಿನಿಧಿ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿ ನಿರ್ದೇಶಕರಾಗಿರುತ್ತಾರೆ. ಉಳಿದಂತೆ ಎಷ್ಟು ನಿರ್ದೇಶಕ ಸ್ಥಾನಗಳು ರೂಪಿತವಾಗುತ್ತವೆ ಎನ್ನುವ ಚರ್ಚೆ ಜೋರಾಗಿದೆ.
ಹೊಸ ತಾಲ್ಲೂಕುಗಳಾದ ಮಂಚೇನಹಳ್ಳಿ ಮತ್ತು ಚೇಳೂರಿಗೆ ನಿರ್ದೇಶಕರ ಸ್ಥಾನಗಳನ್ನು ಕೊಡಬೇಕು ಎನ್ನುವ ಆಗ್ರಹ ಆ ಭಾಗದ ರೈತರಿಂದ ವ್ಯಕ್ತವಾಗುತ್ತಿದೆ. ಹೀಗಾದರೆ 8 ತಾಲ್ಲೂಕುಗಳಿಗೂ ತಲಾ ಒಂದು ನಿರ್ದೇಶಕ ಸ್ಥಾನ ದೊರೆಯುತ್ತದೆ.
ಮಹಿಳೆಯರಿಗೆ ದೊರೆಯುವುದೇ ಎರಡು ಸ್ಥಾನ: ಜಿಲ್ಲೆಯ ಹೈನುಗಾರಿಕೆಯಲ್ಲಿ ಮಹಿಳೆಯರು ಸಹ ದೊಡ್ಡ ಪ್ರಮಾಣದಲ್ಲಿ ತೊಗಿಸಿಕೊಂಡಿದ್ದಾರೆ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳೂ ಕೆಲಸ ಮಾಡುತ್ತಿವೆ. ಬಹಳಷ್ಟು ಸಂಘಗಳಲ್ಲಿ ಮಹಿಳೆಯರೇ ಅಧ್ಯಕ್ಷರಾಗಿದ್ದಾರೆ. ಹೀಗಿದ್ದರೂ ಇಲ್ಲಿಯವರೆಗೆ ಮಹಿಳೆಗೆ ಒಂದು ಸ್ಥಾನ ಮೀಸಲಿಡಲಾಗುತ್ತಿತ್ತು. ಆದರೆ ಈಗ ಚಿಮುಲ್‌ನಲ್ಲಿ ಎರಡು ಸ್ಥಾನಗಳನ್ನು ಕಾಯ್ದಿರಿಸಬೇಕು ಎನ್ನುವ ಆಗ್ರಹ ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳಾ ಪ್ರತಿನಿಧಿಗಳಿಂದ ಕೇಳಿ ಬರುತ್ತಿದೆ.
ಕೋಚಿಮುಲ್‌ಗೆ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಕಳೆದ ಫೆಬ್ರುವರಿಯಲ್ಲಿ ಚುನಾವಣಾ ಅಧಿಕಾರಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದರು. ಕರಡು ಮತದಾರರ ಪಟ್ಟಿಯ ಅಂಕಿ ಸಂಖ್ಯೆಗಳ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 890 ಮಂದಿ ಮತದಾರರು ನಿರ್ದೇಶಕ ಚುನಾವಣೆಯಲ್ಲಿ ಮತ ಚಲಾಯಿಸಲು ಹಕ್ಕು ಹೊಂದಿದ್ದಾರೆ. ಜಿಲ್ಲೆಯಲ್ಲಿ 86 ಡೇರಿಗಳು ಅನರ್ಹ ಮತದಾರರ ಪಟ್ಟಿಯಲ್ಲಿವೆ.
‘ಹೊಸ ತಾಲ್ಲೂಕಿಗೂ ಕಾಯ್ದಿರಿಸಬೇಕು’
ಜಿಲ್ಲೆಗೆ ಸೀಮಿತಗೊಂಡಂತೆ ಸಹಕಾರಿ ಕಾಯ್ದೆ ಅನ್ವಯ ಹಾಲು ಒಕ್ಕೂಟಕ್ಕೆ 17 ಮಂದಿ ನಿರ್ದೇಶಕರು ಇರಬೇಕು. ಹೆಚ್ಚುವರಿಯಾಗಿ ನಿರ್ದೇಶಕರ ಸ್ಥಾನ ಸೃಷ್ಟಿಸಿದರೆ ಹೆಚ್ಚುವರಿ ಹೊರೆ ಆಗುತ್ತದೆ. ಇಲ್ಲಿ ಅಧಿಕಾರ ಮುಖ್ಯವಲ್ಲ. ವೆಚ್ಚವು ಹೆಚ್ಚಿದರೆ ಅದರ ಪರಿಣಾಮ ರೈತರ ಮೇಲೆ ಬೀಳುತ್ತದೆ ಎಂದು ಚಿಂತಾಮಣಿ ತಾಲ್ಲೂಕಿನ ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ (ಡಿಸಿಸಿ ಬ್ಯಾಂಕ್) ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕಿಗೆ ನಿರ್ದೇಶಕ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಈ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಈ ದೃಷ್ಟಿಯಿಂದ ನೋಡಿದರೆ ಈ ತಾಲ್ಲೂಕುಗಳಿಗೆ ನಿರ್ದೇಶಕ ಸ್ಥಾನ ಕಾಯ್ದಿರಿಸಬೇಕಾಗುತ್ತದೆ ಎಂದರು.
ಸ್ಥಾನ ಹೆಚ್ಚಿದರೆ ವೆಚ್ಚವೂ ಅಧಿಕ
ಚಿಮುಲ್ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ಹೆಚ್ಚು ನಿರ್ದೇಶಕರ ಸ್ಥಾನಗಳು ರೂಪಿತವಾದರೆ ಖರ್ಚು ವೆಚ್ಚಗಳು ಸಹ ಹೆಚ್ಚುತ್ತವೆ. ಶಿಬಿರ ಕಚೇರಿ ಅಧಿಕಾರಿಗಳು ಪಶುವೈದ್ಯರು ಹೀಗೆ ವಿವಿಧ ಸೌಲಭ್ಯಕ್ಕೆ ವೆಚ್ಚ ಮಾಡಬೇಕಾಗುತ್ತದೆ. ನಿರ್ದೇಶಕ ಸ್ಥಾನ ಪುನರ್‌ರಚಿಸುವ ವೇಳೆ ಈ ಎಲ್ಲವನ್ನೂ ಆಲೋಚಿಸಬೇಕು ಎಂದು ಸಹಕಾರ ವಲಯದ ಮುಖಂಡರು ತಿಳಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.