ADVERTISEMENT

ತನಿಖೆಗೆ ಆದೇಶಿಸದಿದ್ದರೆ ಹೋರಾಟ: ಕೆ. ಸುಧಾಕರ್

ಕೋಚಿಮುಲ್‌; ನೇಮಕಕ್ಕೆ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಡಾ.ಕೆ.ಸುಧಾಕರ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 4:56 IST
Last Updated 20 ಡಿಸೆಂಬರ್ 2023, 4:56 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ:  ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ (ಕೋಚಿಮುಲ್‌) ಹೊಸದಾಗಿ ನಡೆಸುತ್ತಿರುವ ವಿವಿಧ ಹುದ್ದೆ ಗಳ ನೇಮಕಾತಿಯ ಘೋಷಣೆಗೆ ಮುನ್ನವೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿರುವುದಕ್ಕೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಕಾಂಗ್ರೆಸ್‌ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸದಿದ್ದರೆ ಹೋರಾಟ ನಡೆಸುವುದಾಗಿ
ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ. 

ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ದಕ್ಕಿದ್ದ ಪ್ರತ್ಯೇಕ ಹಾಲು ಒಕ್ಕೂಟವನ್ನು ರದ್ದು ಮಾಡಲಾಯಿತು. ಕಾಣದ ಕೈಗಳು ಹಾಗೂ ಪಟ್ಟಭದ್ರರ ಬಣ್ಣ ಬಯಲಾಗಿದೆ. ನೇಮಕಾತಿ ಪ್ರಕ್ರಿಯೆ ಮುಗಿಯುವ ಮುನ್ನವೇ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಭ್ಯರ್ಥಿಗಳ ಹೆಸರಿನ ಮುಂದೆ ಅವರನ್ನು ಶಿಫಾರಸ್ಸು ಮಾಡಿದ ವ್ಯಕ್ತಿಗಳ ಹೆಸರನ್ನು ಸಹ ನಮೂದಿಸಿರುವುದನ್ನು ಗಮನಿಸಿದರೆ ನೇಮಕಾತಿ ಎಷ್ಟು ಪಾರದರ್ಶಕವಾಗಿ ನಡೆದಿದೆ ಎಂದು ತಿಳಿಯುತ್ತದೆ.

ADVERTISEMENT

ನೇಮಕಾತಿ ಪ್ರಕ್ರಿಯೆಯೇ ಒಂದು ದೊಡ್ಡ ಹಗರಣ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಪ್ರಾಮಾಣಿಕ ಹಾಗೂ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಈ ನೇಮಕಾತಿ ಯನ್ನು ಕೂಡಲೇ ರದ್ದುಪಡಿಸಬೇಕು. ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಆಗ್ರಹಿಸುತ್ತೇನೆ.  

ಈ ಹಗರಣ ಗಮನಿಸಿದರೆ, ಪ್ರತ್ಯೇಕ ಒಕ್ಕೂಟವನ್ನು ವಿರೋಧಿ ಸುವ ಕಾಣದ ಕೈಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ದುರುದ್ದೇಶ ಏನು ಎನ್ನುವುದು ಅರ್ಥವಾಗುತ್ತಿದೆ. ನೇಮಕಾತಿಯನ್ನು ಕೂಡಲೇ ರದ್ದು ಮಾಡಿ ನಿಷ್ಪಕ್ಷಪಾತ ತನಿಖೆಗೆ ಆದೇಶ ಮಾಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.