ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರು ಡೈನಮಿಕ್ ಯುಪಿಐ ಕ್ಯೂ.ಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಂದೊಂದೇ ಜಿಲ್ಲೆಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.
ಚಿಕ್ಕಬಳ್ಳಾಪುರ ವಿಭಾಗದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನ.18ರಿಂದ ಈ ಅವಕಾಶ ಕಲ್ಪಿಸಲಾಗಿದೆ. ಈ ಆರು ದಿನಗಳಲ್ಲಿ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗದ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಮೂಲಕ ಒಟ್ಟು 14,747 ಟಿಕೆಟ್‌ಗಳನ್ನು ವಿತರಿಸಲಾಗಿದೆ. ಹೀಗೆ ನೀಡಿದ ಟಿಕೆಟ್‌ಗಳಿಂದ ಒಟ್ಟು ₹ 10,14,120 ಸಂಗ್ರಹವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಘಟಕವೂ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗದ ವ್ಯಾಪ್ತಿಯಲ್ಲಿದೆ. ವಿಭಾಗದ ವ್ಯಾಪ್ತಿಯ ಆರು ಘಟಕಗಳಲ್ಲಿ ಒಟ್ಟು 14,747 ಟಿಕೆಟ್‌ಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ವಿತರಿಸಲಾಗಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಮುಂದಿನ ದಿನಗಳಲ್ಲಿ ಡಿಜಿಟಲ್ ಪಾವತಿ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಹೆಚ್ಚಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುವರು.
ಚಿಕ್ಕಬಳ್ಳಾಪುರ ವಿಭಾಗದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನ.14ರಿಂದ 17ರವರೆಗೆ ಒಟ್ಟು 30 ಡಿಜಿಟಲ್ ಯಂತ್ರಗಳ ಮೂಲಕ ಪ್ರಾಯೋಗಿಕವಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಮೂಲಕ ಟಿಕೆಟ್‌ಗಳನ್ನು ವಿತರಿಸಲಾಯಿತು. ನಂತರ ಡಿ.18ರಿಂದ ವಿಭಾಗದ 700 ಬಸ್‌ಗಳಲ್ಲಿಯೂ ಈ ಮಾದರಿಯನ್ನು ಪರಿಚಯಿಸಲಾಯಿತು. ಈ ಮೂಲಕ ಪೂರ್ಣ ಪ್ರಮಾಣದಲ್ಲಿಯೇ ಡಿಜಿಟಲ್ ಪಾವತಿಗೆ ಚಾಲನೆ ನೀಡಲಾಯಿತು.
ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಪ್ರಮುಖವಾದುದು. ಈ ಚಿಲ್ಲರೆ ಹಣದ ವಿಚಾರವಾಗಿಯೇ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು, ಗಲಾಟೆಗಳು ನಡೆದ ನಿದರ್ಶನವಿದೆ. ಚಿಲ್ಲರೆ ಸಮಸ್ಯೆ ಪರಿಹಾರವನ್ನು ಮುಖ್ಯವಾಗಿ ಇಟ್ಟುಕೊಂಡೇ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿ ಜಾರಿಗೊಳಿಸಿದೆ.
‘ನಮ್ಮ ಟಿಕೆಟ್‌ಗಳ ದರ ₹ 51, ₹ 52 ಸಹ ಇರುತ್ತವೆ. ಪ್ರಯಾಣಿಕರು ಈ ಟಿಕೆಟ್‌ಗೆ ₹ 60 ನೀಡಿದರೆ ನಿರ್ವಾಹಕರು ವಾಪಸ್ ಉಳಿಕೆ ಚಿಲ್ಲರೆ ಹಣ ನೀಡಬೇಕಾಗಿತ್ತು. ಇದು ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಚಿಲ್ಲರೆ ಸಮಸ್ಯೆಗಳಿಗೆ ಡಿಜಿಟಲ್ ಪಾವತಿ ಮುಕ್ತಿ ನೀಡಲಿದೆ ಎಂದು ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ತಿಳಿಸುವರು.
ಡಿಜಿಟಲ್ ವ್ಯವಸ್ಥೆಯ ಬಗ್ಗೆ ನಾವು ಪ್ರಯಾಣಿಕರಿಗೆ ತಿಳಿಸುತ್ತಿದ್ದೇವೆ. ಯುವ ಸಮುದಾಯ ಮತ್ತು ಡಿಜಿಟಲ್ ಪಾವತಿ ಹೊಂದಿರುವವರು ಟಿಕೆಟ್ ಪಡೆಯುತ್ತಿದ್ದಾರೆ. ಇನ್ನೂ ಸಹ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಪಾವತಿ ಆಗುತ್ತಿಲ್ಲ ಎಂದು ನಿರ್ವಾಹಕಿಯೊಬ್ಬರು ತಿಳಿಸುವರು.
ಚಿಲ್ಲರೆ ಹಣ ನೀಡುವ ವಿಚಾರದಲ್ಲಿ ಪ್ರಯಾಣಿಕರ ಜೊತೆ ತೀವ್ರ ವಾಗ್ವಾದಗಳು ನಡೆಯುತ್ತಿದ್ದವು. ಚಿಲ್ಲರೆ ಇಲ್ಲದಿದ್ದರೆ ಟಿಕೆಟ್ ಹಿಂಬದಿಗೆ ಚಿಲ್ಲರೆ ಎಷ್ಟು ಕೊಡಬೇಕು ಎನ್ನುವ ಬಗ್ಗೆ ಬರೆಯುತ್ತಿದ್ದೆವು. ಚಿಲ್ಲರೆ ಹಣದ ವಿಚಾರವಾಗಿಯೇ ಜಗಳಗಳು ನಮ್ಮೊಂದಿಗೆ ನಡೆದಿವೆ. ಈ ಸಮಸ್ಯೆಗಳಿಗೆ ಡಿಜಿಟಲ್ ಪಾವತಿ ಮುಕ್ತಿ ನೀಡಿದೆ ಎಂದು ಹೇಳಿದರು.
ಘಟಕ;ಡಿಜಿಟಲ್ ಮೂಲಕ ಹಣ ಪಾವತಿಸಿ ಪಡೆದ ಟಿಕೆಟ್ ಸಂಖ್ಯೆ
ಚಿಕ್ಕಬಳ್ಳಾಪುರ:3241;
ಚಿಂತಾಮಣಿ: 1998
ದೊಡ್ಡಬಳ್ಳಾಪುರ; 2730
ಗೌರಿಬಿದನೂರು;2015
ಶಿಡ್ಲಘಟ್ಟ;1251
ಬಾಗೇಪಲ್ಲಿ 3512
ಒಟ್ಟು;14,747
‘ಪ್ರಯಾಣಿಕರಿಂದ ಉತ್ತಮ ಸ್ಪಂದನೆ’ ಡಿಜಿಟಲ್ ಪಾವತಿ ವ್ಯವಸ್ಥೆ ಈಗ ಆರಂಭವಾಗಿದೆ. ನಮ್ಮ ಬಸ್‌ಗಳ ನಿರ್ವಾಹಕರು ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಕೆಲವರು ತಿಳಿದವರು ಅವರಾಗಿಯೇ ಡಿಜಿಟಲ್ ಪಾವತಿ ವ್ಯವಸ್ಥೆ ಮೂಲಕ ಟಿಕೆಟ್ ಪಡೆಯುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು. ಈ ಐದಾರು ದಿನಗಳಲ್ಲಿಯೇ ಪ್ರಯಾಣಿಕರಿಂದ ಡಿಜಿಟಲ್ ಪಾವತಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದರು. ಚಿಲ್ಲರೆ ಹಣದ ಸಮಸ್ಯೆ ಪರಿಹಾರದ ಉದ್ದೇಶದಿಂದಲೇ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಹಿಂದಿನಿಂದಲೂ ಚಿಲ್ಲರೆಯ ವಿಷಯವು ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿತ್ತು. ಈಗ ಈ ಸಮಸ್ಯೆ ಪರಿಹಾರವಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.