ಚಿಕ್ಕಬಳ್ಳಾಪುರ: ಲಾಕ್‌ಡೌನ್ ಜಿಲ್ಲಾ ಕೆಎಸ್‌ಆರ್‌ಟಿಸಿಯು ನಷ್ಟದಿಂದ ತತ್ತರಿಸುವಂತೆ ಮಾಡಿದೆ. ಮೊದಲ ಕೋವಿಡ್ ಅಲೆಯ ಅವಧಿಯಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್‌ನಿಂದ ಸರಾಸರಿ ₹ 90 ಕೋಟಿಯಿಂದ ₹ 100 ಕೋಟಿ ನಷ್ಟವಾಗಿತ್ತು. ಈ ಎರಡನೇ ಅಲೆಯಲ್ಲಿ ₹ 25 ಕೋಟಿ ನಷ್ಟಕ್ಕೀಡಾಗಿದೆ.
ಕೋವಿಡ್ ಜಿಲ್ಲೆಯ ಕೆಎಸ್‌ಆರ್‌ಟಿಸಿ ಸಂಸ್ಥೆಯ ಮೇಲೆ ತೀವ್ರ ದುಷ್ಪರಿಣಾಮವನ್ನೇ ಬೀರಿದೆ. ಮೊದಲ ಕೋವಿಡ್ ಅಲೆ ಮುಕ್ತಾಯವಾಗಿ ಬಸ್‌ಗಳ ಸಂಚಾರ ಆರಂಭವಾಗಿದ್ದರೂ ಸಂಸ್ಥೆಯ ಆದಾಯ ಯಥಾಸ್ಥಿತಿಗೆ ತಲುಪಿರಲಿಲ್ಲ. ಮೊದಲ ಅಲೆಯ ಲಾಕ್‌ಡೌನ್ ತೆರವಾಗಿ ಬಸ್‌ಗಳ ಓಡಾಟ ಆರಂಭವಾದರೂ ಕೋವಿಡ್ ಭಯದ ಕಾರಣಕ್ಕೆ ಆದಾಯ ಯಥಾಸ್ಥಿತಿಗೆ ಬಂದಿರಲಿಲ್ಲ. ಈ ನಡುವೆಯೇ ಮತ್ತೆ ಲಾಕ್‌ಡೌನ್ ಜಾರಿಯಿಂದ ಸಂಸ್ಥೆಗೆ ತೀವ್ರ ಪೆಟ್ಟು ಬಿದ್ದಿದೆ.
ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗದಿಂದ ನಿತ್ಯ 560 ಬಸ್‌ಗಳು ಸಂಚರಿಸುತ್ತವೆ. ನಿತ್ಯ ಸರಾಸರಿ ₹ 60ರಿಂದ 65 ಲಕ್ಷ ಆದಾಯ ಸಂಸ್ಥೆಗೆ ಬರುತ್ತದೆ. ಇದಲ್ಲದೆ ಲಗೇಜ್‌ನಿಂದಲೇ ತಿಂಗಳಿಗೆ ₹ 25 ಲಕ್ಷ ಆದಾಯ ಬೊಕ್ಕಸ ಸೇರುತ್ತಿತ್ತು. ಮಾರ್ಚ್, ಏಪ್ರಿಲ್‌ನಲ್ಲಿ ಆದಾಯ
₹ 55 ಲಕ್ಷದ ಆಸುಪಾಸಿನಲ್ಲಿ ಇತ್ತು. ಏಪ್ರಿಲ್ 27ರಿಂದ ಲಾಕ್‌ಡೌನ್ ಘೋಷಣೆಯಾದ ನಂತರ ಬಸ್‌ಗಳ ಸಂಚಾರ ಪೂರ್ಣ ಬಂದ್ ಆಯಿತು.
ಸದ್ಯ ಈ ಜೂ.7ರವರೆಗಿನ ಲಾಕ್‌ಡೌನ್ ಬಗ್ಗೆ ಮಾತ್ರ ಸಂಸ್ಥೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿದೆ. ಒಟ್ಟು ಈ 42 ದಿನಗಳ ಅವಧಿಯಲ್ಲಿ ₹ 25 ಕೋಟಿ ನಷ್ಟವಾಗುತ್ತದೆ ಎಂದು ಜಿಲ್ಲಾ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ತಿಳಿಸಿದರು.
ಸಿಬ್ಬಂದಿಗೆ ಏಪ್ರಿಲ್‌ನ ವೇತನವಾಗಿದೆ. ಸರ್ಕಾರ ವೇತನಕ್ಕಾಗಿ ಹಣ ನೀಡಿತ್ತು. ಮೇ ತಿಂಗಳ ವೇತನ ಬಿಡುಗಡೆ ಆಗಬೇಕು. ಲಾಕ್‌ಡೌನ್ ಸಂಸ್ಥೆಗೆ ತೀವ್ರವಾದ ಪೆಟ್ಟು ಬೀಡಿದೆ. ಕಳೆದ ವರ್ಷ ಲಾಕ್‌ಡೌನ್ ತೆರವಾದರೂ ಜನರು ಬಸ್‌ಗಳಲ್ಲಿ ಸಂಚರಿಸಲಿಲ್ಲ. ಸಂಸ್ಥೆಯ ಆದಾಯ ಯಥಾಸ್ಥಿತಿಗೆ ಬರಲು ಲಾಕ್‌ಡೌನ್ ತೆರವಾದ ನಂತರ ಕನಿಷ್ಠ ಮೂರ್ನಾಲ್ಕು ತಿಂಗಳಾದರೂ ಬೇಕು ಎಂದು ಹೇಳಿದರು.
ಮೊದಲ ಅಲೆಯಲ್ಲಿ ಲಾಕ್‌ಡೌನ್ ತೆರವಾದ ನಂತರ ಶೇ 50ರಷ್ಟು ಸೀಟ್‌ಗಳ ಭರ್ತಿಗೆ ಮಾತ್ರ ಅವಕಾಶವಿತ್ತ. ಹೀಗಾದರೂ ಸಂಸ್ಥೆಗೆ ನಷ್ಟವೇ ಆಗುತ್ತದೆ ಎಂದರು.
ಡೀಸೆಲ್ ಹೊರೆ: ಕಳೆದ ವರ್ಷದ ಏಪ್ರಿಲ್‌ನಲ್ಲಿ ಲೀಟರ್ ಡೀಸೆಲ್ ದರ ₹ 48 ಇತ್ತು. ಅದು ಈಗ ₹ 90ಕ್ಕೆ ಹೆಚ್ಚಿದೆ. ಹೀಗೆ ತೀವ್ರ ಪ್ರಮಾಣದಲ್ಲಿ ಹೆಚ್ಚಿರುವ ಡೀಸೆಲ್ ಬೆಲೆಯೂ ಸಂಸ್ಥೆಯ ಆದಾಯಕ್ಕೆ ಮತ್ತಷ್ಟು ಕಂಟಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.