ADVERTISEMENT

ಸೊಣಗಾನಹಳ್ಳಿ ಶಾಲೆಗಿಲ್ಲ ಮೂಲ ಸೌಕರ್ಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 7:09 IST
Last Updated 24 ಅಕ್ಟೋಬರ್ 2024, 7:09 IST
ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೊಣಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳಿಲ್ಲದೆ ಅಶ್ವತ ಕಟ್ಟೆ ಮೇಲೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ
ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೊಣಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳಿಲ್ಲದೆ ಅಶ್ವತ ಕಟ್ಟೆ ಮೇಲೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ   

ಸಾದಲಿ: ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಿ ಅವರ ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗಬೇಕಾದ ಸರ್ಕಾರಿ ಶಾಲೆಯಲ್ಲಿ ಮೂಲ ಸೌಕರ್ಯಗಳೇ ಇಲ್ಲದೆ ಮಕ್ಕಳು ಗಿಡದ ಬುಡದಲ್ಲಿ ಕುಳಿತು ಕಲಿಯುವಂತಹ ಪರಿಸ್ಥಿತಿ ತಾಲ್ಲೂಕಿನ ಸೋಣಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗಿದೆ.

ಶಾಲೆಯಲ್ಲಿ ಎರಡೇ ಕೊಠಡಿಗಳಿದ್ದು, ಒಂದು ಕೊಠಡಿಯು ಶಾಲೆಯ ದಾಖಲೆಗಳು, ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಕಚೇರಿಯಾದರೆ, ಇನ್ನೊಂದು ಕೊಠಡಿಯಲ್ಲಿ ಎರಡು ಮತ್ತು ನಾಲ್ಕನೇ ತರಗತಿಗಳ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠ ಮಾಡಲಾಗುತ್ತದೆ. ಉಳಿದ ತರಗತಿಗಳನ್ನು ಅಶ್ವಥ್ಥ ಕಟ್ಟೆಯ ಮೇಲೆ ಕೂಡಿಸಿಕೊಂಡು ಪಾಠ ಹೇಳುವ ಪರಿಸ್ಥಿತಿ ಎದುರಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಶೌಚಾಲಯವೂ ಇಲ್ಲ. ಮಕ್ಕಳಿಗೆ ಬಯಲು ಶೌಚವೇ ಗತಿ.

ಸೋರುತಿಹುದು ಮಾಳಿಗೆ: ಅಕ್ಷರ ದಾಸೋಹ ಕಟ್ಟಡ ಸೋರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಗಳ ಮತ್ತು ಜನ ಪ್ರತಿನಿಧಿಗಳ ಬಳಿ ಹಲವು ಬಾರಿ ಮನವಿ ಮಾಡಿಕೊಂಡರು ಯಾವುದೇ ಸ್ಪಂದನೆ ಇಲ್ಲ. ಸೋರುತ್ತಿರುವ ಅಡಿಗೆ ಕೋಣೆಯಲ್ಲಿ ಅಡುಗೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಿಬ್ಬಂದಿಯೊಬ್ಬರು ಬೇಸರ ತೋಡಿಕೊಂಡರು.

ADVERTISEMENT

ಈ ಹಿಂದೆ ಇದ್ದ ಶೀತಲಗೊಂಡ ಕೊಠಡಿಗಳನ್ನು ಕೆಡವಿ ಆರು ತಿಂಗಳಾದರೂ ಇದುವರೆಗೂ ಹೊಸ ಕೊಠಡಿಗಳ ಭಾಗ್ಯ ಕಂಡಿಲ್ಲ. ಇದೀಗ ಶಾಲೆ ಆರಂಭವಾಗಿದೆ, ಮಕ್ಕಳಿಗೆ ಎಲ್ಲಿ ಪಾಠ ಮಾಡುವುದು ಎಂಬ ಯಕ್ಷಪ್ರಶ್ನೆ ಕಾಡುತ್ತಿದೆ.

ಶಾಲೆಯಲ್ಲಿರುವ ಎರಡು ಕೊಠಡಿಗಳಿಗೂ ಸುರಕ್ಷತೆ ಇಲ್ಲ, ಶಾಲೆಗೆ ಕಂಪೌಂಡ್ ವ್ಯವಸ್ಥೆ ಇಲ್ಲ, ಆಟದ ಮೈದಾನವಿಲ್ಲ. ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಂಡಿ ಎಂದು ಮನವಿ ಮಾಡಿ ಸಾಕಾಗಿದೆ. ಮಕ್ಕಳ ಗ್ರಾಮ ಸಭೆಗಳಲ್ಲಿ ಅಂತೂ ಹಲವು ಬಾರಿ ಈ ಬಗ್ಗೆ ಮಾತನಾಡಿ ಸುಮ್ಮನಾಗಿದ್ದೇವೆ. 
ನಾರಾಯಣಸ್ವಾಮಿ, ಎಸ್.ಡಿ.ಎಮ್.ಸಿ ಅಧ್ಯಕ್ಷ
ನಮ್ಮ ಶಾಲೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಕಳೆದ ವರ್ಷ 120 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ದಿಢೀರನೆ ಕುಸಿತ ಕಂಡಿದೆ. ಶಾಲೆಗೆ ಯಾವುದೇ ಸೌಕರ್ಯಗಳಿಲ್ಲದ ಕಾರಣ ಹಲವು ಪೋಷಕರು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ಅವರಿಗೆ ಮನವರಿಕೆ ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. 
ಪುಷ್ಪಲತಾ, ಮುಖ್ಯ ಶಿಕ್ಷಕಿ
ಅಕ್ಷರ ದಾಸೋಹ ಕೊಠಡಿ ಸೋರುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ನರೇಗಾ ಯೋಜನೆಯಡಿಯಲ್ಲಿ ಈಗಾಗಲೇ ಅನುಮೋದನೆ ಮಾಡಲಾಗಿದೆ. ಅದನ್ನು ಅತಿ ಶೀಘ್ರದಲ್ಲಿ ರಿಪೇರಿ ಮಾಡಲಾಗುವುದು. ಕೊಠಡಿಗಳ ವಿಚಾರ ಶಾಸಕರ ಗಮನಕ್ಕೆ ತಂದು ಅದನ್ನು ಸಹ ಬಗೆಹರಿಸಲಾಗುವುದು
ನಿರ್ಮಲಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ 
ಸೊನಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿಗತಿಯನ್ನು ಪರಿಶೀಲನೆ ಮಾಡಲಾಗಿದೆ. ಶಾಲೆಗೆ ಕೊಠಡಿಗಳ ಅವಶ್ಯಕತೆ ಬಹಳಷ್ಟು ಇದೆ. ₹ 25 ಸಾವಿರ ವೆಚ್ಛದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ನಂತರ ಶಾಲೆಯ ಕೊಠಡಿಗಳ ಅನುಮೋದನೆಗೆ ಮನವಿ ಸಲ್ಲಿಸಲಾಗಿದೆ
ನರೇಂದ್ರ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ

ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಶಾಲೆಯ ಮೂಲಸೌಕರ್ಯಗಳಾದ ಶೌಚಾಲಯ, ಕಾಂಪೌಂಡ್ ವ್ಯವಸ್ಥೆ, ಮೈದಾನ ಇವೆಲ್ಲವನ್ನೂ ನೀಡಲು ತಯಾರಿ ನಡೆದಿದೆ. ಶೌಚಾಲಯ ಮತ್ತು ಕಾಂಪೌಂಡ್ ವ್ಯವಸ್ಥೆಯನ್ನು ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿ ಕೊಡಲಾಗುವುದು. ಮೈದಾನ ನಿರ್ಮಿಸಲು ಜಾಗದ ಕೊರತೆ ಇದೆ. ಅದಕ್ಕೂ ಪ್ರಯತ್ನಿಸಲಾಗುವುದು.
ಶ್ರೀನಿವಾಸಪ್ಪ, ಸಾದಲಿ ಪಿಡಿಒ 
ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೊಣಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳಿಲ್ಲದೆ ಅಶ್ವತ ಕಟ್ಟೆ ಮೇಲೆ ಪಾಠ ಕೇಳುತ್ತಿರುವ ಮಕ್ಕಳು.
ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯತಿಯ ಸೊಣಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.