ADVERTISEMENT

ಸಾದಲಿ: ಅಪಾಯ ಅಂಚಿನಲ್ಲಿವೆ ಸರ್ಕಾರಿ ಶಾಲೆ

ಬುಡಗವಾರಹಳ್ಳಿ, ಅಲಗುರ್ಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 7:21 IST
Last Updated 21 ಜೂನ್ 2024, 7:21 IST
ಬುಡಗವಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆಗಳು ಬಿರುಕು ಬಿಟ್ಟಿರುವುದು ಕಿಟಕಿ ಬಾಗಿಲು ಹಾಳಾಗಿವೆ
ಬುಡಗವಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಡೆಗಳು ಬಿರುಕು ಬಿಟ್ಟಿರುವುದು ಕಿಟಕಿ ಬಾಗಿಲು ಹಾಳಾಗಿವೆ   

ಸಾದಲಿ: ಕುಸಿಯುತ್ತಿರುವ ಚಾವಣಿ, ಮಳೆ ನೀರು ನಿಂತಿರುವ ಕೊಠಡಿಗಳು, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿ ಬಿರುಕು ಬಿಟ್ಟಿರುವ ಗೋಡೆಗಳು, ಜೀವಭಯದಲ್ಲಿ ಪಾಠ ಕೇಳುತ್ತಿರುವ ಶಾಲಾ ಮಕ್ಕಳು...

ಇದು, ಸಾದಲಿ ಹೋಬಳಿಯ ತಲಕಾಯಲ ಬೆಟ್ಟ ಗ್ರಾಮ ಪಂಚಾಯಿತಿಯ ಬುಡಗವಾರಹಳ್ಳಿ, ಅಲಗುರ್ಕಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ದುಸ್ಥಿತಿ.

ಅಲಗುರ್ಕಿ ಶಾಲೆಯು ಗ್ರಾಮದ ಹೃದಯ ಭಾಗದಲ್ಲಿದೆ. ಇದು ಹಳೆ ಕಟ್ಟಡವಾಗಿದ್ದು ಒಟ್ಟು 2 ಕೊಠಡಿಗಳಿವೆ. 1 ರಿಂದ 5 ತರಗತಿವರೆಗೆ 20 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ. 2 ಕೊಠಡಿಗಳು ದುಸ್ಥಿತಿಯಲ್ಲಿವೆ. ಬುಡಗವಾರಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ಕೊಠಡಿಗಳಿದ್ದು 2 ಕೊಠಡಿಗಳು ಸುಸ್ಥಿತಿಯಲ್ಲಿದೆ ಒಂದು ಕೊಠಡಿ ಪೂರ್ತಿ ಚಾವಣಿ ಕುಸಿದಿದೆ. ಮಕ್ಕಳು ಶಾಲೆಗೆ ಬರಲು ಭಯಪಡುತ್ತಿದ್ದಾರೆ. ಪೋಷಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಮಕ್ಕಳಿರುವ ಈ ಜಾಗದಲ್ಲಿ ಸದಾ ಭಯದ ವಾತಾವರಣ ಇದೆ. ಗೋಡೆ ಬೀಳುವ ಮೊದಲು ಎಚ್ಚೆತ್ತುಕೊಳ್ಳಬೇಕು. ಮಕ್ಕಳ ಜೀವವನ್ನು ಹಗುರವಾಗಿ ಪರಿಗಣಿಸಬಾರದು. ಮುಂದೆ ಅನಾಹುತ ಆದರೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

‘ಇಂತಹ ಅಪಾಯಕಾರಿ ಕೊಠಡಿಗಳಲ್ಲೇ ಮಕ್ಕಳಿಗೆ ಪಾಠ ಪ್ರವಚನ ನಡೆಯುತ್ತಿದೆ. ಗೋಡೆಗಳು ಸುಣ್ಣ ಬಣ್ಣ ಕಾಣದೇ ಭಣಗುಡುತ್ತಿವೆ. ಯಾವುದೋ ಹಳೆಯ ಪಾಳು ಕಟ್ಟಡದಂತೆ ಕಾಣುತ್ತಿರುವ ಶಾಲೆಯ ಕಿಟಕಿ, ಬಾಗಿಲುಗಳು ಮಣ್ಣು ಹಿಡಿದಿವೆ. ಮಳೆ ಬಂದರೆ ಕೊಠಡಿಯಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಮಕ್ಕಳು ನೀರಿನೊಳಗೆ ಪಾಠ ಕೇಳಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಗ್ರಾಮಸ್ಥ ನರಸಿಂಹರೆಡ್ಡಿ.

‘ಶಾಲೆಯ ಶೌಚಾಲಯಗಳು ಕೂಡ ಹೊರತಾಗಿಲ್ಲ. ಶಿಥಿಲಾವಸ್ಥೆ ತಲುಪಿದ್ದ ಬಾಗಿಲುಗಳು ಮುರಿದಿವೆ. ಶಾಲಾ ಶೌಚಾಲಯವನ್ನು ಗ್ರಾಮಸ್ಥರೂ ಬಳಸುತ್ತಿರುವುದರಿಂದ ದುರ್ವಾಸನೆಯಿಂದ ಕೂಡಿವೆ. ಶಾಲೆಯ ಸುತ್ತ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ. ಬೆಳಕಿನ ವ್ಯವಸ್ಥೆ ಇಲ್ಲವೇ ಇಲ್ಲ. ಶಾಲಾ ಕಿಟಕಿಗಳೇ ದನ, ಕರು ಕಟ್ಟುವ ಗೂಟಗಳಾಗಿವೆ’ ಎನ್ನುತ್ತಾರೆ ಅವರು.

‘ಶಾಲೆಯ ಸ್ಥಿತಿಯ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮೇಲಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಏನೂ ಪ್ರಯೋಜನವಾಗಿಲ್ಲ. ಅಪಾಯ ಸಂಭವಿಸುವ ಮೊದಲು ಕ್ರಮ ಕೈಗೊಳ್ಳಬೇಕು’ ಎಂದು ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ಅಲಗುರ್ಕಿ ಒತ್ತಾಯಿಸಿದರು.

ಶೈಕ್ಷಣಿಕ ವರ್ಷ ಆರಂಭದ ಆಸುಪಾಸಿನಲ್ಲೇ, ನಿರಂತರವಾಗಿ ಮಳೆಯಾಗುವ ಮುಂಗಾರು ಕೂಡ ಪ್ರಾರಂಭಗೊಳ್ಳಲಿದೆ. ಇದಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳನ್ನು ಎಲ್ಲ ಕಡೆಯೂ ಸಜ್ಜುಗೊಳಿಸಲಾಗಿದೆಯೇ ಎನ್ನುವುದನ್ನು ಗಮನಿಸಿದರೆ, ನಿರಾಶಾದಾಯಕವಾಗಿ ಕಂಡುಬರುತ್ತದೆ ಗ್ರಾಮಸ್ಥರು ಮುನಿಕೃಷ್ಣ ಹೇಳಿದರು.

ಶಿಥಿಲಾವಸ್ಥೆ ತಲುಪಿದ ಅಥವಾ ಕುಸಿದ ಸರ್ಕಾರಿ ಶಾಲೆ ಕೊಠಡಿಗಳ ಸ್ಥಿತಿ ಇನ್ನೂ ಬದಲಾಗಿಲ್ಲ. ಪರಿಣಾಮವಾಗಿ, ಮಕ್ಕಳು ಈ ವರ್ಷವೂ ಸೋರುತ್ತಿರುವ, ಈಗಲೋ–ಆಗಲೋ ಬೀಳುವ ಹಂತದಲ್ಲಿರುವ ಕಟ್ಟಡದಲ್ಲೇ ಆತಂಕದಿಂದ ಓದು ಮುಂದುವರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಕೊಠಡಿಗಳು ಅನಾಹುತಕ್ಕೆ ಆಹ್ವಾನ ನೀಡುವ ಪರಿಸ್ಥಿತಿ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಪೋಷಕರು ಮತ್ತು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಾರಪ್ಪ ರೆಡ್ಡಿ ಹೇಳಿದರು.

ಅಲಗುರ್ಕಿ ಶಾಲೆಯ ಸ್ಥಿತಿ
ಅಲಗುರ್ಕಿ ಕಿರಿಯ ಪ್ರಾಥಮಿಕ ಶಾಲೆ ಒಂದು ಕೊಠಡಿ ಮೇಲ್ನೋಟಕ್ಕೆ ಚೆನ್ನಾಗಿದ್ದರೂ ಮಳೆ ಬಂದರೆ ಸೋರುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.