ADVERTISEMENT

ಚಿಕ್ಕಬಳ್ಳಾಪುರ: 22ನೇ ವಾರ್ಡ್‌ ಹೆಸರಿಗೆ ಪ್ರತಿಷ್ಠಿತ, ‘ಗಾರ್ಡನ್‌’ಗಿಲ್ಲ ಅಂದ

ಡಿ.ಎಂ.ಕುರ್ಕೆ ಪ್ರಶಾಂತ
Published 28 ಫೆಬ್ರುವರಿ 2024, 5:34 IST
Last Updated 28 ಫೆಬ್ರುವರಿ 2024, 5:34 IST
ಕಸಕಡ್ಡಿಯಿಂದ ತುಂಬಿರುವ ಎಚ್‌.ಎಸ್.ಗಾರ್ಡನ್ ಚರಂಡಿಗಳು
ಕಸಕಡ್ಡಿಯಿಂದ ತುಂಬಿರುವ ಎಚ್‌.ಎಸ್.ಗಾರ್ಡನ್ ಚರಂಡಿಗಳು   

ಚಿಕ್ಕಬಳ್ಳಾಪುರ: ನಗರದಲ್ಲಿ ವೇಗವಾಗಿ ಬೆಳೆಯುತ್ತಿರುವ ಬಡಾವಣೆಗಳನ್ನು ಪಟ್ಟಿ ಮಾಡಿದರೆ ಎಚ್‌.ಎಸ್.ಗಾರ್ಡನ್ (ಕೆಳಗಿನ ತೋಟಗಳು) ಸಹ ಒಂದು. ಹೆಸರಿಗೆ ‘ಗಾರ್ಡನ್’ ಎನಿಸಿದರೂ ಒಮ್ಮೆ ಬಡಾವಣೆ ಸುತ್ತಿದರೆ ಗಾರ್ಡನ್ನೊ ಗಾರ್ಬೆಜ್ ಬಡಾವಣೆಯೊ ಎನಿಸುತ್ತದೆ. 

ವಾಲ್ಮೀಕಿ ನಗರ, ಕನಕನಗರ, ಟೀಚರ್ಸ್ ಕಾಲೊನಿ, ಪಾಪಣ್ಣ ಲೇಔಟ್, ಶಿರಡಿ ಸಾಯಿ ಬಡಾವಣೆ, ಅಂಬೇಡ್ಕರ್ ಬಡಾವಣೆಯನ್ನು ಎಚ್‌.ಎಸ್‌.ಗಾರ್ಡನ್ ಒಳಗೊಂಡಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡಿರುವ ಎಚ್‌.ಎಸ್‌.ಗಾರ್ಡನ್ 22ನೇ ವಾರ್ಡ್‌ಗೆ ಒಳಪಡುತ್ತದೆ. 2,300 ಮತದಾರರು ಇದ್ದಾರೆ. 

ಬಡಾವಣೆಯಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚುತ್ತಲೇ ಇವೆ. ವರ್ಷಕ್ಕೆ ಎಚ್‌.ಎಸ್.ಗಾರ್ಡನ್‌ನಲ್ಲಿ ಅಂದಾಜು 20ರಿಂದ 30 ಮನೆಗಳು ನಿರ್ಮಾಣವಾಗುತ್ತಿವೆ. ಹೀಗೆ ವೇಗವಾಗಿ ಬೆಳೆಯುತ್ತಿರುವ ಬಡಾವಣೆ ಎನಿಸಿದೆ. 

ADVERTISEMENT

ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ, ನಮ್ಮ ಕ್ಲಿನಿಕ್‌, ಸುಬ್ರಹ್ಮಣ್ಯೇಶ್ವರ, ಆಂಜನೇಯ ದೇವಾಲಯಗಳು ಇವೆ. ಬಿಬಿ ರಸ್ತೆಗೆ ಹೊಂದಿಕೊಂಡು ಬಡಾವಣೆ ಇದೆ. ಬಡಾವಣೆಯನ್ನು ಸುತ್ತಿದರೆ ಅಧ್ವಾನಗಳ ದರ್ಶನ ದೊಡ್ಡದಾಗಿಯೇ ಆಗುತ್ತದೆ. ಪ್ರತಿಷ್ಠಿತ ಮತ್ತು ಪ್ರಮುಖ ಬಡಾವಣೆಯ ಚರಂಡಿಗಳು ನಿರ್ವಹಣೆ ಇಲ್ಲದೆ ಕಲ್ಲುಮಣ್ಣು, ಕಸಕಡ್ಡಿಗಳು ತುಂಬಿ ತುಳುಕುತ್ತಿವೆ. ಪ್ರಮುಖ ರಸ್ತೆಯ ಎರಡೂ ಬದಿಯ ಚರಂಡಿಗಳೂ ಇದೇ ಸ್ಥಿತಿಯಲ್ಲಿವೆ. ಬಡಾವಣೆಯ ರಸ್ತೆಗಳ ಇಕ್ಕೆಲಗಳಲ್ಲಿ ಆಳೆತ್ತರದ ಕಳೆಗಿಡಗಳಿವೆ. ವಿಶೇಷವಾಗಿ ಚರಂಡಿಗಳ ವ್ಯವಸ್ಥೆ ಗಬ್ಬೆದ್ದಿದೆ. ಸ್ವಚ್ಛ ಮಾಡಿ ತಿಂಗಳುಗಳೇ ಆಗಿವೆ ಎನ್ನುವುದನ್ನು ಸಾರುತ್ತವೆ. 

ಸಭೆಯಲ್ಲಿಯೇ ಧ್ವನಿ: ಎಚ್‌.ಎಸ್.ಗಾರ್ಡನ್‌ನ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಇತ್ತೀಚೆಗೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಾರ್ಡ್ ಸದಸ್ಯೆ ಸ್ವಾತಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದರು. ಖುದ್ದು ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ  ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

‘ಆರೋಗ್ಯ ಶಾಖೆ ಅಧಿಕಾರಿಗಳು ವಾರ್ಡ್‌ಗೆ ಬಂದು ಹಲವು ತಿಂಗಳುಗಳೇ ಕಳೆದಿವೆ. ಅನೈರ್ಮಲ್ಯದ ಸ್ಥಳಗಳ ಬಗ್ಗೆ ತಿಳಿಸಿದರೂ ಗಮನವಹಿಸುತ್ತಿಲ್ಲ. ಬೇಸಿಗೆಯ ಆರಂಭದ ಈ ದಿನಗಳಲ್ಲಿ ಅನೈರ್ಮಲ್ಯದ ಸ್ಥಳಗಳಲ್ಲಿ ಸೊಳ್ಳೆಗಳು ಹೆಚ್ಚುತ್ತವೆ. ರೋಗ ಹರಡಿದ ಮೇಲೆ ಸಿಬ್ಬಂದಿ ಕ್ರಮಕೈಗೊಳ್ಳಲು ಮುಂದಾದರೆ ಪ್ರಯೋಜನವೇನು’ ಎಂದು ಸ್ವಾತಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸುವರು.

...

‘ಮನವಿ ಮಾಡಿದರೂ ಸ್ಪಂದನೆಯಿಲ್ಲ’

ಬಡಾವಣೆಯ ಸಮಸ್ಯೆಗಳು ಮತ್ತು ಸ್ವಚ್ಛತೆಯ ಬಗ್ಗೆ ನಗರಸಭೆಯ ಅಧಿಕಾರಿಗಳಿ ಎಷ್ಟು ಬಾರಿ ತಿಳಿಸಿದರೂ ಗಮನ ನೀಡುತ್ತಿಲ್ಲ. ಇತ್ತೀಚೆಗೆ ಅಂಬೇಡ್ಕರ್ ನಗರದಲ್ಲಿ ಬ್ಲಿಚಿಂಗ್ ಪೌಡರ್ ಸಿಂಪಡಿಸಿದರು. ಆ ಕಾರ್ಯ ಮಾಡುವಂತೆ ನಾಲ್ಕೈದು ತಿಂಗಳಿನಿಂದ ಹೇಳುತ್ತಿದ್ದೆವು. ಈಗ ನಾಮಕಾವಸ್ತೆಗೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ 22ನೇ ವಾರ್ಡ್ ಸದಸ್ಯೆ ಸ್ವಾತಿ ಮಂಜುನಾಥ್.  ವಿಶೇಷವಾಗಿ ನಗರಸಭೆ ಆರೋಗ್ಯ ಶಾಖೆಗೆ ಚರಂಡಿ ಸ್ವಚ್ಛತೆ ಅನೈರ್ಮಲ್ಯದ ವಿಚಾರವಾಗಿ ಗಮನಕ್ಕೆ ತಂದಿದ್ದೇವೆ. ಆದರೂ ಪರಿಹಾರಕ್ಕೆ ಮುಂದಾಗುತ್ತಿಲ್ಲ. ನಾಗರಿಕರು ಜನಪ್ರತಿನಿಧಿಗಳಾದ ನಮ್ಮನ್ನು ಪ್ರಶ್ನಿಸುತ್ತಾರೆ. ನಾನು ಜನರಿಗೆ ಉತ್ತರದಾಯಿಗಳು. ಆರೋಗ್ಯ ಶಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಇದೇ ರೀತಿಯಲ್ಲಿ ಮುಂದುವರಿದರೆ ಬಡಾವಣೆಯ ನಿವಾಸಿಗಳ ಜೊತೆ ನಗರಸಭೆ ಆವರಣದಲ್ಲಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

‘ಕಾಲಿಂಗ್ ಕಮಿಷನರ್’

ನಗರಸಭೆಯ ಅಧಿಕಾರಿಗಳು ಬಡಾವಣೆಯ ಸಮಸ್ಯೆಗಳ ಬಗ್ಗೆ ಗಮನವಹಿಸದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುವ ಇಲ್ಲಿನ ನಾಗರಿಕರು ನಗರಸಭೆ ಪೌರಾಯುಕ್ತರಿಗೆ ಕರೆ ಮಾಡಲು ನಿರ್ಧರಿಸಿದ್ದಾರೆ. ನಿತ್ಯವೂ ಆಗಾಗ್ಗೆ ಪೌರಾಯುಕ್ತರಿಗೆ ಕರೆ ಮಾಡಿ ಬಡಾವಣೆಯಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿಸುತ್ತೇವೆ. ಆಗಲಾದರೂ ಅಧಿಕಾರಿಗಳು ಸ್ಪಂದಿಸುವರೇ ಎನ್ನುತ್ತಾರೆ ನಾಗರಿಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.