ಶಿಡ್ಲಘಟ್ಟ: ಬ್ರಿಟ್ರಿಷರ ಕಾಲದಲ್ಲಿ ನಿರ್ಮಾಣವಾದ ಶತಮಾನ ಕಂಡ ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಕಟ್ಟಡಕ್ಕೆ ಕಾಯಕಲ್ಪ ನೀಡುವ ಅಗತ್ಯವಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿ ಧ್ವಜ ಸತ್ಯಾಗ್ರಹ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಐತಿಹಾಸಿಕ ಕಟ್ಟಡವನ್ನು ಪಾರಂಪಾರಿಕ ತಾಣವಾಗಿ ಉಳಿಸುವ ಕೆಲಸ ಆಗಬೇಕಿದೆ. ಈ ಪುರಾತನ ಕಟ್ಟಡವನ್ನು 1917ರಲ್ಲಿ ಕಟ್ಟಲಾಗಿತ್ತು. ಇದು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ತಾಲ್ಲೂಕು ಆಡಳಿತ ಕಚೇರಿಯಾಗಿತ್ತು. ಸ್ವಾತಂತ್ರ್ಯಾ ನಂತರ ಇದೇ ಕಟ್ಟಡದ ಒಂದು ಭಾಗದಲ್ಲಿ ಪೋಲೀಸ್ ಸ್ಟೇಷನ್ ಮತ್ತು ಇನ್ನೊಂದು ಭಾಗದಲ್ಲಿ ತಾಲ್ಲೂಕು ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಹೊಸ ಕಟ್ಟಡಕ್ಕೆ ಪೋಲೀಸ್ ಸ್ಟೇಷನ್ ವರ್ಗಾವಣೆ ಅಯಿತು.
ಮಿನಿ ವಿಧಾನಸೌಧವಾದ ಮೇಲೆ ಆಡಳಿತ ಕಚೇರಿಯೂ ಅಲ್ಲಿಗೆ ಹೋಯಿತು. ಆಗ ಸ್ವಂತ ಕಟ್ಟಡವಿರದಿದ್ದರಿಂದ ನ್ಯಾಯವಾದಿಗಳ ವಶಕ್ಕೆ ಈ ಕಟ್ಟಡ ಬಂತು. ನ್ಯಾಯಾಲಯಕ್ಕೂ ಹೊಸ ಕಟ್ಟಡ ಬಂದ ನಂತರ ಇದೀಗ ಕಂದಾಯ ಭವನವಾಗಿದೆ.
ಆದರೆ, ಈಗ ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದ ಕಂದಾಯ ಭವನ ಅವಸಾನದ ಹಂಚಿಗೆ ತಲುಪಿದೆ. ಧ್ವಜ ಸತ್ಯಾಗ್ರಹ ಹೋರಾಟ ನಡೆಸುವಾಗ ಭಕ್ತರಹಳ್ಳಿಯ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ತೆತ್ತಿದ್ದರು. ಅಂತಹ ವಿಶೇಷವಾದ ಈ ಕಟ್ಟಡ ಈಗ ನಿರ್ಲಕ್ಷ್ಯಕ್ಕೊಳಗಾಗಿದ್ದು ದೇಶಾಭಿಮಾನಿಗಳಿಗೆ ನೋವು ತಂದಿದೆ.
ಈ ಕಟ್ಟಡದ ಸುತ್ತಮುತ್ತಲು ನಿರುಪಯುಕ್ತ ಗಿಡ ಬೆಳೆದು ಕಟ್ಟಡದ ಸ್ವರೂಪವೇ ಬದಲಾಗಿದೆ. ಕಟ್ಟಡದ ಮೇಲೆಯೂ ಅರಳಿ ಮರಗಳು ಬೆಳೆದಿದೆ. ಮುಂದೆ ಅದರ ಬೇರುಗಳು ಕಟ್ಟಡವನ್ನು ಬೀಳಿಸುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಕಟ್ಟಡದ ಮೇಲ್ಚಾವಣಿ ಕುಸಿಯಲು ಆರಂಭವಾಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಕಟ್ಟಡದ ಗೋಡೆಗಳಲ್ಲಿ ಗಿಡಗಳು ಬೆಳೆದು ರಂಬೆಗಳು ಹೊರಬಂದುಚ ಬಿಟ್ಟಿವೆ.
ಈಚೆಗೆ ಸುರಿಯುತ್ತಿರುವ ಮಳೆ ಆರ್ಭಟದಿಂದ ಎಲ್ಲಿ ಮೇಲ್ಚಾವಣಿ ಕುಸಿಯುತ್ತಿದೆಯೋ ಎಂಬ ಆತಂಕದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಮೇಲ್ಚಾವಣಿ ರಕ್ಷಣೆಗೆ ಒಂದು ಒಂದು ಕೋಲಿನ ಆಶ್ರಯ ನೀಡಿದ್ದಾರೆ.
ಕಟ್ಟಡದ ಸುತ್ತಮುತ್ತಲು ನಿರುಪಯುಕ್ತ ವಸ್ತುಗಳನ್ನು ದಾಸ್ತಾನು ಮಾಡಲಾಗಿದೆ. ಮತ್ತೊಂದೆಡೆ ಕಟ್ಟಡದ ಕಿಟಕಿ ಬಾಗಿಲು ಹಾಳಾಗಿವೆ. ಕಟ್ಟಡದ ಬಹುತೇಕ ಮೇಲ್ಚಾವಣಿಯಲ್ಲಿ ಗಿಡಗಳು ಬೆಳೆದು ಕಂದಾಯ ಭವನಕ್ಕೆ ರಕ್ಷಣೆ ಇಲ್ಲದಂತಾಗಿದೆ.
ಎಲ್ಲ ಇಲಾಖೆಗಳಿಗೆ ಮಾತೃ ಇಲಾಖೆ ಆಗಿರುವ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸೇವೆ ಲಭಿಸುವ ಸಲುವಾಗಿ ನಿರ್ಮಿಸಿರುವ ಈ ಕಂದಾಯ ಭವನ 1917ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿತ್ತು. ಅಂದಿನ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಸುಣ್ಣ ಬಣ್ಣ ಕಂಡು ನವೀಕರಣಗೊಂಡ ಈ ಕಂದಾಯ ಭವನವನ್ನು ಮತ್ತೊಮ್ಮೆ ಲೋಕಾರ್ಪಣೆಗೊಳಿಸಿದ್ದರು. ಅಂದಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ಪ್ರಾಚೀನ ಕಟ್ಟಡವನ್ನು ಉಳಿಸಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.