ಚಿಂತಾಮಣಿ: ಬಯಲುಸೀಮೆ, ಬರಗಾಲದ ನಾಡು ಎಂಬ ಹಣೆಪಟ್ಟಿ ಹೊತ್ತ ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ಕೆರೆ ಮತ್ತು ಕೊಳವೆಬಾವಿಗಳ ನೀರನ್ನೇ ಆಶ್ರಯಿಸಲಾಗಿದೆ. ಕೆರೆಗಳು ನಿರ್ವಹಣೆ ಕೊರತೆಯಿಂದ ನಲುಗುತ್ತಿವೆ.
ನಗರದಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಚಿಂತಾಮಣಿ ನಗರಕ್ಕೆ ನೀರು ಪೂರೈಕೆ ಮಾಡಲು ರೂಪಿಸಿದ್ದ ಕೆರೆ ಅಭಿವೃದ್ಧಿ ಯೋಜನೆಗಳು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ದಶಕದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು.
ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಕನಸಿನ ಯೋಜನೆಗಳನ್ನು ಸಾಕಾರಗೊಳಿಸಲು ₹115 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಯೋಜನೆಗಳು ಹಾಗೂ ಇತರೆ ನನೆಗುದಿಗೆ ಬಿದ್ದಿದ್ದ ಯೋಜನೆಗಳ ಕಾಮಗಾರಿಗೆ ಕಾಯಕಲ್ಪ ನೀಡಲಾಗಿದೆ.
ನಗರದ ನಾಲ್ಕು ದಿಕ್ಕುಗಳಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಜತೆಗೆ ವಾಯುವಿಹಾರಕ್ಕೆ ಹೋಗಲು ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ನಗರದ ಸೌಂದರ್ಯ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
ಮುಂದಿನ 25-30 ವರ್ಷಗಳ ಜನಸಂಖ್ಯೆಯನ್ನು ಗಮನದಲ್ಲಿರಿಸಿ ನಗರಕ್ಕೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕನಂಪಲ್ಲಿ, ನೆಕ್ಕುಂದಿ ಹಾಗೂ ಭಕ್ತರಹಳ್ಳಿ-ಅರಸೀಕೆರೆಯ ನೀರಿನ ಸಂಗ್ರಹಣೆ ಸಾಮರ್ಥ್ಯವನ್ನು ಹೆಚ್ಚಿಸಲು ತಲಾ ₹35 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಈ ಯೋಜನೆಗಳಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ.
ಕನಂಪಲ್ಲಿ ಕೆರೆ ಅಭಿವೃದ್ಧಿ ಯೋಜನೆ: ನಗರಕ್ಕೆ ಮೊದಲಿನಿಂದಲೂ ನೈಸರ್ಗಿಕವಾಗಿ ನೀರು ಪೂರೈಕೆ ಮಾಡುತ್ತಿರುವ ಏಕೈಕ ಕೆರೆ ಇದಾಗಿದೆ. ದಶಕಗಳಿಂದ ಹೂಳು ತುಂಬಿಕೊಂಡು ನೀರಿನ ಸಂಗ್ರಹ ಕಡಿಮೆಯಾಗಿದೆ. ಹೂಳನ್ನು ತೆಗೆದು ಕೆರೆಯ ನೀರಿನ ಸಾಮರ್ಥ್ಯವನ್ನು 3 ಪಟ್ಟು ಹೆಚ್ಚಿಸುವುದು ಯೋಜನೆಯ ಉದ್ದೇಶ. ಕೆರೆಯ ಸುತ್ತಲೂ ಸಾರ್ವಜನಿಕರ ವಾಯು ವಿಹಾರಕ್ಕಾಗಿ ನಡಿಗೆ ಪಥ ನಿರ್ಮಿಸುವುದು, ಗಿಡಗಳನ್ನು ನೆಡುವುದು ಯೋಜನೆಯಲ್ಲಿ ಸೇರಿದೆ.
ಓಟಿ ಕೆರೆ: ನಗರದ ಹೊರವಲಯದಲ್ಲಿ ಬೆಂಗಳೂರು ರಸ್ತೆಗೆ ಹೊಂದಿಕೊಂಡಿರುವ ಓಟಿ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ 10 ವರ್ಷಗಳ ಹಿಂದೆ ₹50 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ರೂಪಿಸಲಾಗಿತ್ತು. ಹಣದ ಕೊರತೆಯಿಂದ 10 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿತ್ತು. ಮತ್ತೆ ₹46 ಲಕ್ಷ ವೆಚ್ಚದಲ್ಲಿ ಪುನರುಜ್ಜೀವನ ಕೆಲಸ ಆರಂಭವಾಗಿದೆ.
ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವುದು ಹಾಗೂ ಗಣೇಶ ಮೂರ್ತಿಯನ್ನು ಇದೇ ಕೆರೆಯಲ್ಲಿ ವಿಸರ್ಜನೆ ಮಾಡುವ ಕಾರಣ ರಕ್ಷಣೆಗಾಗಿ ಸುತ್ತಲೂ ತಂತಿಬೇಲಿ ಅಳವಡಿಸಲಾಗಿದೆ. ಕಟ್ಟೆ, ಕೋಡಿಯನ್ನು ದುರಸ್ತಿಗೊಳಿಸಿ ಸುತ್ತಲೂ ವಾಕಿಂಗ್ ಪಾತ್ ನಿರ್ಮಿಸಲಾಗುತ್ತಿದೆ. ಮದ್ಯದಲ್ಲಿ ದ್ವೀಪದ ನಿರ್ಮಾಣ ಮಾಡಿ ಗಿಡಗಳನ್ನು ಬೆಳೆಸಲಾಗುವುದು. ಕುಳಿತು ವಿಶ್ರಾಂತಿ ಪಡೆಯಲು ಹಾಗೂ ಹಿರಿಯ ನಾಗರಿಕರ ಜಿಮ್ ಸ್ಥಾಪಿಸಲಾಗುತ್ತಿದೆ.
ನೆಕ್ಕುಂದಿ ಕೆರೆ: ನೆಕ್ಕುಂದಿ ಕೆರೆಯ ನೀರನ್ನು ನಗರಕ್ಕೆ ಬಳಕೆ ಮಾಡಿಕೊಳ್ಳಲು 10 ವರ್ಷಗಳ ಹಿಂದೆ ಯೋಜನೆ ತಯಾರಿಸಲಾಗಿತ್ತು. ಕಾರ್ಯರೂಪಕ್ಕೆ ಬರದೆ ನನೆಗುದಿಗೆ ಬಿದ್ದಿತ್ತು. ಒಳಚರಂಡಿ ನೀರು ಕೆರೆಗೆ ಹರಿದು ಸಂಪೂರ್ಣವಾಗಿ ಹಾಳಾಗಿತ್ತು. ₹35 ಕೋಟಿ ವೆಚ್ಚದಲ್ಲಿ ಪುನರುಜ್ಜೀವನ ಯೋಜನೆ ತಯಾರಿಸಿ ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿದೆ.
ಒಳಚರಂಡಿ ನೀರು ಹರಿಯುವುದನ್ನು ತಪ್ಪಿಸಿ, ಕಟ್ಟೆ, ಕೋಡಿಯನ್ನು ದುರಸ್ತಿಗೊಳಿಸುವುದು. ಹೂಳನ್ನು ತೆಗೆದು ನೀರಿನ ಸಂಗ್ರಹಣೆಯನ್ನು 3 ಪಟ್ಟು ಹೆಚ್ಚಿಸಲಾಗುತ್ತದೆ. ಆ ಭಾಗದ ಜನರ ವಾಯು ವಿಹಾರಕ್ಕೆ 2.5 ಕಿ.ಮೀ ವಾಯು ವಿಹಾರ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ರಸ್ತೆಗಳಲ್ಲಿ ವಾಯು ವಿಹಾರ ನಡೆಸುವುದು ಅಷ್ಟೊಂದು ಸುರಕ್ಷಿತವಲ್ಲ. ಹೀಗೆ ದೂರದೃಷ್ಟಿಯ ಯೋಜನೆಗಳ ಪರ್ವ ಅನುಷ್ಠಾನವಾಗುತ್ತಿದೆ.
ಭಕ್ತರಹಳ್ಳಿ-ಅರಸೀಕೆರೆ: ಭಕ್ತರಹಳ್ಳಿ ಅರಸೀಕೆರೆ ನೀರಿನ ಸಾಮರ್ಥ್ಯದ ಪ್ರಮಾಣ 37 ಎಂಎಲ್‌ಡಿ, ಆದರೆ ಹೂಳು ತುಂಬಿಕೊಂಡಿರುವುದರಿಂದ ವಾಸ್ತವವಾಗಿ ಸಂಗ್ರಹಣೆಯಾಗುವುದು ಕೇವಲ 20 ಎಂಎಲ್‌ಡಿ ನೀರು. ನೀರಿನ ಸಾಮರ್ಥ್ಯವನ್ನು ಮೂರುಪಟ್ಟು ಹೆಚ್ಚಿಸಲು ಸಣ್ಣ ನೀರಾವರಿ ಇಲಾಖೆಯಿಂದ ₹35 ಕೋಟಿ ವೆಚ್ಚದ ಯೋಜನೆ ಮಂಜೂರಾಗಿದೆ. ಕೆರೆಯ ಕೆಳಭಾಗದ 400 ಮೀಟರ್ ದೂರದಲ್ಲಿ ಮತ್ತೊಂದು ಕೆರೆಯ ನಿರ್ಮಾಣ ಮಾಡಿ, ಸಂಗ್ರಹಣೆಯ ಸಾಮರ್ಥ್ಯವನ್ನು 100 ಎಂಎಲ್‌ಡಿಗೆ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ ಎನ್ನುತ್ತಾರೆ ಡಾ.ಎಂ.ಸಿ.ಸುಧಾಕರ್.
ಅರಸೀಕೆರೆ ಯೋಜನೆಯ ನೀರಾವರಿ ಯೋಜನೆಯನ್ನು ಈ ಹಿಂದೆ ₹16.30 ಕೋಟಿ ವೆಚ್ಚದಲ್ಲಿ ರೂಪಿಸಲಾಗಿತ್ತು. ನೀರು ಹರಿಯುವ ಮಾರ್ಗಮಧ್ಯದ ಹಳ್ಳಿಗಳಿಗೂ ನೀರು ಸರಬರಾಜು ಮಾಡುವ ಯೋಜನೆಯಾಗಿತ್ತು. ನಂತರ ಹಣದ ಕೊರತೆಯಿಂದ ₹10.95 ಕೋಟಿಗೆ ಇಳಿಸಲಾಗಿತ್ತು. ಕೆರೆಯ ಹೂಳು ತೆಗೆಯುವುದು, ಕೆಳಭಾಗದಲ್ಲಿ ಹೊಸ ಕೆರೆಯ ನಿರ್ಮಾಣ ಮಾಡುವುದರಿಂದ ನೀರಿನ ಸಂಗ್ರಹಣೆ ಸಾಮರ್ಥ್ಯ 3 ಪಟ್ಟು ಹೆಚ್ಚಾಗುತ್ತದೆ. ಆಗ ಮಾರ್ಗದ ಗ್ರಾಮಗಳಿಗೂ ನೀರು ಪೂರೈಕೆ ಮಾಡಲಾಗುವುದು ಎಂದು ಸುಧಾಕರ್ ಹೇಳುತ್ತಾರೆ.
ಭಕ್ತರಹಳ್ಳಿ-ಅರಸೀಕೆರೆ, ನೆಕ್ಕುಂದಿ ಮತ್ತು ಕನಂಪಲ್ಲಿ ಕೆರೆಗಳಲ್ಲಿ ಎತ್ತಿನಹೊಳೆ ಯೋಜನೆಯ ನೀರನ್ನು ಸಂಗ್ರಹಿಸುವುದು ದೂರದೃಷ್ಟಿಯಾಗಿದೆ. ಎತ್ತಿನ ಹೊಳೆ ಯೋಜನೆ ಅನುಷ್ಠಾನಗೊಂಡಾಗ ನೀರಿನ ಸಂಗ್ರಹಣೆ ಮಾಡಿಕೊಳ್ಳಲು ಈಗಲೇ ಸಿದ್ಧತೆ ಮಾಡಿಕೊಳ್ಳುವುದು ಕೆರೆಗಳ ಕಾಯಕಲ್ಪದ ಮತ್ತೊಂದು ಗುರಿಯಾಗಿದೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ವಿವಿಧ ಕಾರ್ಪೊರೇಟ್ ಸಂಸ್ಥೆಗಳ ನೆರವಿನಿಂದ ನಗರದ ಮಾಳಪ್ಪಲ್ಲಿ ಕೆರೆಯನ್ನು ₹47 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಗೋಪಸಂದ್ರ ಕೆರೆ ಅಭಿವೃದ್ಧಿ ಮಾಡಲು ₹75 ಲಕ್ಷ ನಗರಸಭೆಯಿಂದ ಕೊಳಚೆ ನಿರ್ಮೂಲನಾ ಮಂಡಳಿಗೆ ಪಾವತಿಸಲಾಗಿದೆ ಎಂದು ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.
ಕೆರೆ ಒಡಲು ಕಸಕಡ್ಡಿಗಳಿಂದ ತುಂಬಿಕೊಳ್ಳದಂತೆ ಗಮನಹರಿಸಬೇಕು. ಅವುಗಳ ಹೂಳು ತೆಗೆದು ಆಳ ಮಾಡುವುದರ ಮೂಲಕ ನೀರಿನ ಸಂಗ್ರಹಣೆ ಸಾಮರ್ಥ್ಯ ಹೆಚ್ಚಿಸಬೇಕುದಾಕ್ಷಾಯಿಣಿ ಪರಿಸರಪ್ರೇಮಿ
ಹಿರಿಯರು ನಿರ್ಮಿಸಿರುವ ಕೆರೆಗಳಿಗೆ ಐತಿಹಾಸಿಕ ಮಹತ್ವವಿದೆ. ಅವುಗಳನ್ನು ಸ್ವಚ್ಛಗೊಳಿಸಿ ಕೆರೆ ಕಟ್ಟೆಯ ಮೇಲೆ ಜನರು ಓಡಾಡುವಂತೆ ಮಾಡಬೇಕು. ಕೆರೆ-ಕುಂಟೆಗಳಿಗೆ ಚರಂಡಿಗಳ ಕಲುಷಿತ ನೀರು ಹರಿಯುವುದನ್ನು ತಡೆಗಟ್ಟಬೇಕುನಾರಾಯಣರೆಡ್ಡಿ ಶಿಕ್ಷಣ ತಜ್ಞ
ಪೂರ್ವಿಕರು ನಿರ್ಮಿಸಿರುವ ಕೆರೆ ಕುಂಟೆಗಳ ಅಸ್ತಿತ್ವವನ್ನು ಕಾಪಾಡಬೇಕು. ಒತ್ತುವರಿ ತೆರವುಗೊಳಿಸಬೇಕು. ಕೆರೆ-ಕುಂಟೆಗಳು ಜನರ ಬಳಕೆಗೆ ಉಪಯೋಗವಾಗುವಂತೆ ಯೋಜನೆ ರೂಪಿಸಬೇಕುಮಂಜುನಾಥ್ ಜನಜಾಗೃತಿ ವೇದಿಕೆ ಮುಖ್ಯಸ್ಥ
ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕೆರೆ ಪುನಶ್ಚೇತನ ಅನಿವಾರ್ಯ. ನೀರಾವರಿ ಯೋಜನೆ ಹೆಸರಿನಲ್ಲಿ ಸಾವಿರಾರು ಕೋಟಿ ಖರ್ಚು ಮಾಡುವುದಕ್ಕಿಂತ ಸ್ಥಳೀಯ ಕೆರೆಗಳನ್ನು ಅಭಿವೃದ್ಧಿಪಡಿಸುವುದು ಉತ್ತಮಶಶಿರಾಜ್ ಹರತಲೆ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.