ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 66,194 ಮಕ್ಕಳಿಗೆ ಮೊಟ್ಟೆ

ವಿದ್ಯಾರ್ಥಿಗಳಿಗೆ ವಾರದ ಆರು ದಿನ ಪೌಷ್ಟಿಕ ಆಹಾರ ವಿತರಿಸುವ ಜಿಲ್ಲಾ ಹಂತದ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 15:34 IST
Last Updated 27 ಸೆಪ್ಟೆಂಬರ್ 2024, 15:34 IST
<div class="paragraphs"><p>ಚಿಕ್ಕಬಳ್ಳಾಪುರ ತಾಲ್ಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಶಾಲೆಯಲ್ಲಿ ನಡೆದ ಪೌಷ್ಟಿಕ ಆಹಾರ ವಿತರಿಸುವ ಜಿಲ್ಲಾ ಹಂತದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು</p></div>

ಚಿಕ್ಕಬಳ್ಳಾಪುರ ತಾಲ್ಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಶಾಲೆಯಲ್ಲಿ ನಡೆದ ಪೌಷ್ಟಿಕ ಆಹಾರ ವಿತರಿಸುವ ಜಿಲ್ಲಾ ಹಂತದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

   

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರವು ಅಜೀಂ ಪ್ರೇಮ್ ಜೀ ಫೌಂಡೇಶನ್‌ನೊಂದಿಗೆ  1 ರಿಂದ 10ನೇ ತರಗತಿಯ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ವಾರದ ಆರು ದಿನಗಳಲ್ಲೂ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ವಿತರಿಸಲು ಮುಂದಿನ ಮೂರು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.

ತಾಲ್ಲೂಕಿನ ರೆಡ್ಡಿಗೊಲ್ಲವಾರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ, ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಅಕ್ಷರ ದಾಸೋಹ ಯೋಜನೆಯಡಿ ನಡೆದ ಪೌಷ್ಟಿಕ ಆಹಾರ ವಿತರಿಸುವ ಜಿಲ್ಲಾ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು.

ADVERTISEMENT

ರಾಜ್ಯ ಸರ್ಕಾರ ಪ್ರಸ್ತುತ ವಾರದಲ್ಲಿ ಎರಡು ದಿನ ನೀಡುತ್ತಿರುವ ಪೌಷ್ಟಿಕ ಆಹಾರವನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಕಾರದೊಂದಿಗೆ ಆರು ದಿನಗಳಿಗೆ ವಿಸ್ತರಿಸಲಾಗಿದೆ. ವಾರ್ಷಿಕವಾಗಿ ₹ 1,500 ಕೋಟಿ ಅನುದಾನದ ಅಗತ್ಯವಿದೆ. ಮುಂದಿನ 3 ವರ್ಷಗಳವರೆಗೆ ಪೌಷ್ಟಿಕ ಆಹಾರ ವಿತರಿಸಲು ಫೌಂಡೇಶನ್ ಮುಂದೆ ಬಂದಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ 150 ಮಿಲಿ ಹಾಲನ್ನು ವಾರದ 5 ದಿನ ನೀಡಲಾಗುತ್ತಿದೆ. ಮಂಗಳವಾರ ಮತ್ತು ಶುಕ್ರವಾರ ಬೇಯಿಸಿದ ಮೊಟ್ಟೆ ಹಾಗೂ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ನೀಡಲಾಗುತ್ತಿತ್ತು. ಈ ಯೋಜನೆಯನ್ನು ಸೆ.25 ರಿಂದ ವಾರದ ಆರು ದಿನಗಳಿಗೂ ವಿಸ್ತರಿಸಿರುವುದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 1,601 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪೈಕಿ 1 ರಿಂದ 10ನೇ ತರಗತಿವರೆಗೆ 77,691 ವಿದ್ಯಾರ್ಥಿಗಳು ಈ ಯೋಜನೆ ಸೌಲಭ್ಯ ಪಡೆಯಲಿದ್ದಾರೆ. ಈ ಪೈಕಿ 66,194 ಮಕ್ಕಳು ಬೇಯಿಸಿದ ಮೊಟ್ಟೆ, 7,326 ಮಕ್ಕಳು ಬಾಳೆಹಣ್ಣು ಮತ್ತು 4,171 ವಿದ್ಯಾರ್ಥಿಗಳು ಶೇಂಗಾ ಚಿಕ್ಕಿಯನ್ನು ಕಳೆದ ಮೂರು ದಿನಗಳಿಂದ ಸ್ವೀಕರಿಸಿದ್ದಾರೆ ಎಂದರು.

ಸರ್ಕಾರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಜನೆಯ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರತಿಭಾವಂತರಾಗಬೇಕು. ಅಂತರ್ಜಾಲ ಸೇರಿದಂತೆ ಇತ್ತೀಚಿನ ತಂತ್ರಜ್ಞಾನದ ಸೌಲಭ್ಯ ಬಳಸಿಕೊಂಡು ಪ್ರಪಂಚದ ಎಲ್ಲಾ ವಿಷಯಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ  ಡಾ.ಎಂ.ಸಿ.ಸುಧಾಕರ್ ಮಾತನಾಡಿದರು

ಆಂಗ್ಲಭಾಷೆಯಲ್ಲಿ ಮಾತನಾಡುವ ಹವ್ಯಾಸವನ್ನು ಶಾಲಾ ವಾತಾವರಣದಲ್ಲಿ ಮಕ್ಕಳು ಬೆಳೆಸಿಕೊಳ್ಳಬೇಕು. ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಸಂಪೂರ್ಣವಾಗಿ ಕಡಿಮೆ ಆಗುವ ರೀತಿಯಲ್ಲಿ ಶಿಕ್ಷಕರು ಬದ್ದತೆಯಿಂದ ಬೋಧನೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಬೈಲಾಂಜಿನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್ ಕೇಶವ ರೆಡ್ಡಿ, ತಹಶೀಲ್ದಾರ್ ಅನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್,  ದೊಡ್ಡ ಪೈಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಸತೀಶ್, ಉಪಾಧ್ಯಕ್ಷ ನಾಗರಾಜು, ಅಕ್ಷರ ದಾಸೋಹ ಅಧಿಕಾರಿ ಬಿ.ರೇಣುಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ರೆಡ್ಡಪ್ಪ ಮತ್ತಿತರರು ಪಾಲ್ಗೊಂಡಿದ್ದರು.

...

ಶಾಲೆಗೆ ಅನುದಾನ ನೀಡಿ; ಮುಖ್ಯಶಿಕ್ಷಕಿ ಮನವಿ

ಕಾರ್ಯಕ್ರಮದಲ್ಲಿ ರೆಡ್ಡಿಗೊಲ್ಲವಾರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿನುತಾ ಶಾಲೆಯು 4.10 ಎಕರೆ ಜಾಗದಲ್ಲಿ ನಡೆಯುತ್ತಿದೆ. 114 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಕಲಿಕೆಗೆ ಪೂರಕವಾದ ಸಕಲ ವ್ಯವಸ್ಥೆಗಳು ಹಾಗೂ ಉತ್ತಮ ಬೋಧಕ ವರ್ಗವಿದೆ. ಶಾಲಾ ಆವರಣ ನಿರ್ಮಾಣ ಹಾಗೂ ಕ್ರೀಡಾ ಮೈದಾನ ಅಭಿವೃದ್ಧಿಗೆ ಅನುದಾನ ಬೇಕಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.