ADVERTISEMENT

ಅಧಿಕಾರಿಗಳ ಗೈರಿಗೆ ಮುಖಂಡರ ಅಸಮಾಧಾನ

ಪರಿಶಿಷ್ಟ ಜಾತಿ ಮತ್ತು ಪಂಗಡವರ ಕುಂದುಕೊರತೆ ಸಭೆಗೆ ಹಾಜರಾಗದ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಭೆ ಮುಂದೂಡಿದ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2018, 11:04 IST
Last Updated 12 ಜುಲೈ 2018, 11:04 IST
ಅಧಿಕಾರಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದ ದಲಿತ ಮುಖಂಡರು
ಅಧಿಕಾರಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದ ದಲಿತ ಮುಖಂಡರು   

ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್‌ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಾಗದ ಕಾರಣ ಸಭೆಯನ್ನು ಮುಂದೂಡಲಾಯಿತು.

ಅಬಕಾರಿ, ಪೊಲೀಸ್‌, ಲೋಕೋಪಯೋಗಿ ಇಲಾಖೆ, ಕೃಷಿ, ಪಶು ಇಲಾಖೆ, ಸಣ್ಣ ನೀರಾವರಿ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪ್ರವಾಸೋದ್ಯಮ, ಶಿಕ್ಷಣ, ಮೀನುಗಾರಿಕೆ ಸೇರಿದಂತೆ ಪ್ರಮುಖ ಅಧಿಕಾರಿಗಳು ಸಭೆಗೆ ಬರಲಿಲ್ಲ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಮುಂಖಡರು ಸಭೆಯನ್ನು ಮುಂದೂಡುವಂತೆ ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ ಅವರಿಗೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ದಲಿತ ಮುಖಂಡ ಗಂಗಾಧರಪ್ಪ, ‘ದಲಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಧಿಕಾರಿಗಳೇ ಕುಂದುಕೊರತೆ ಸಭೆಯಲ್ಲಿ ಗೈರಾಗಿರುವುದು ದಲಿತರ ಮೇಲೆ ಎಷ್ಟು ಕಾಳಜಿ ಎಂಬುದು ತೋರುತ್ತಿದೆ. ಈ ಹಿಂದೆ ಅಧಿಕಾರಿಗಳೇ ಸಭೆಯ ದಿನಾಂಕ ನಿಗದಿ ಪಡಿಸಿ ಇಂದು ಅವರೇ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ. ಅಧಿಕಾರಿಗಳಿಲ್ಲದೆ ಸಭೆ ನಡೆಸಿದರೆ ಸಭೆಗೆ ಅರ್ಥವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಸರ್ಕಾರದಿಂದ ಬಂದ ಹಣ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಹಣ ದುರ್ಬಳಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಳೆದ ಐದು ವರ್ಷದ ಅವಧಿಯಲ್ಲಿ ಎಸ್ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ರಸ್ತೆಗಳ ಅಭಿವೃದ್ಧಿ ಕುರಿತು ಸಂಪೂರ್ಣ ವಿವರವನ್ನು ಮುಂದಿನ ಸಭೆಯಲ್ಲಿ ತರಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ಸಮಸ್ಯೆಗೂ ಎರಡ್ಮೂರು ಇಲಾಖೆಗಳ ಸಂಬಂಧವಿರುತ್ತದೆ. ಕೇವಲ ಒಂದು ಇಲಾಖೆಯಿಂದ ಸಮಸ್ಯೆಯನ್ನು ಬಗೆಹರಿಸಲು ಅಸಾಧ್ಯ. ಎಲ್ಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿಯೇ ಸಭೆ ನಡೆಸಬೇಕು. ಇಲ್ಲದಿದ್ದರೆ ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಸಭೆಯನ್ನು ಮುಂದೂಡಬೇಕು’ ತಹಶೀಲ್ದಾರ್‌ ಅವರಿಗೆ ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜೀವಪ್ಪ ಮಾತನಾಡಿ, ‘ಕೇಂದ್ರ ಸರ್ಕಾರ ನಿವೇಶನ ರಹಿತರಿಗೆ ನಿವೇಶನ ನೀಡಲು ಸುತ್ತೋಲೆ ಹೊರಡಿಸಿದೆ. ಏಳು ವರ್ಷದಲ್ಲಿ ಅವಧಿಯಲ್ಲಿ ಏಳು ಸಾವಿರ ನಿವೇಶನಗಳ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ ನಿವೇಶನ ರಹಿತರು ಅರ್ಜಿ ಹಾಕಬೇಕು’ ಎಂದು ಹೇಳಿದರು.

ನಗರಸಭೆ ಆಯುಕ್ತ ಉಮಾಕಾಂತ್‌, ವಲಯ ಅರಣ್ಯ ಅಧಿಕಾರಿ ವಿಕ್ರಂ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಾಂತಮ್ಮ, ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ಲತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.