ಗುಡಿಬಂಡೆ: ‘ಮೀಸಲಾತಿ ಗೊಂದಲದಿಂದ ಮೂರು ವರ್ಷಗಳಿಂದ ಚುನಾವಣೆ ನಡೆಯದೇ ಆಡಳಿತಾಧಿಕಾರಿಗಳ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಯಲ್ಲಿ ಪ್ರಗತಿಯಲ್ಲಿದೆ. ಪಟ್ಟಣವನ್ನು ಸ್ವಚ್ಛವಾಗಿಡುವುದು ಸ್ಥಳೀಯ ಪಟ್ಟಣ ಪಂಚಾಯಿತಿಯ ಕರ್ತವ್ಯವಾಗಿವೆ. ಪ.ಪಂ ಅಧಿಕಾರಿಗಳು ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೂಚಿಸಿದರು.
ಪಟ್ಟಣದ 11 ವಾರ್ಡುಗಳಲ್ಲಿ ಶಾಸಕರು ಶನಿವಾರ ಸಂಚಾರಿಸಿ, ಜನರಿಂದ ಅಹವಾಲು ಸ್ವೀಕರಿಸಿದರು.
‘ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಾರ್ಡ್‌ವಾರು ಭೇಟಿ ನೀಡಿದ್ದು, ಮುಖ್ಯವಾಗಿ ಚರಂಡಿ, ಬೀದಿ ದೀಪ, ಸ್ವಚ್ಛತೆ, ನಿವೇಶನಗಳ ಕುರಿತಂತೆ ಅಹವಾಲುಗಳು ಬಂದಿದೆ. ಈ ಕುರಿತು ಸ್ಥಳೀಯ ಪ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನುದಾನ ಕೊರತೆಯಿದ್ದರೇ ನನ್ನ ಗಮನಕ್ಕೆ ತನ್ನಿ, ಅನುದಾನ ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.
‘ರಾಜಕಾಲುವೆ ಹೂಳು ಹಾಗೂ ಗಿಡಗಂಟೆಗಳಿಂದ ಕೂಡಿದ್ದು, ಇದನ್ನು ಸ್ವಚ್ಛ ಮಾಡುವಂತೆ ಸಾರ್ವಜನಿಕರು ಹಲವಾರು ಬಾರಿ ಒತ್ತಾಯ ಮಾಡಿದ್ದಾರೆ. ಆದರೆ ರಾಜಕಾಲುವೆ ಸ್ವಚ್ಛತೆಗೆ ಅನುದಾನ ಬಿಡುಗಡೆಯಾಗದ ಕಾರಣ ಬೇರೆ ಯಾವುದಾದರೂ ಅನುದಾನ ಅಥವಾ ನನ್ನ ಸ್ವಂತ ಹಣದಿಂದಲೇ ರಾಜಕಾಲುವೆ ಸ್ವಚ್ಛ ಮಾಡಲು ಯೋಜನೆ ರೂಪಿಸಲಾಗುತ್ತದೆ. ಜೊತೆಗೆ ಕೆಲವೊಂದು ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುವಂತೆ ಬೇಡಿಕೆ ಬಂದಿದ್ದು, ಈ ಕೆಲಸವನ್ನು ಸಹ ಶೀಘ್ರದಲ್ಲಿಯೇ ಮಾಡುತ್ತೇನೆ’ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ, ಕಾಲೇಜು ಸುತ್ತಲೂ ಕಾಂಪೌಂಡ್ ನಿರ್ಮಾಣ, ವಿದ್ಯಾರ್ಥಿಗಳ ಕಲಿಕೆಗಾಗಿ ಕಂಪ್ಯೂಟರ್, ಉಪನ್ಯಾಸಕರ ಕೊರತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
‘ಕೆಲವೆ ದಿನಗಳಲ್ಲಿ ಪಟ್ಟಣ ಪಂಚಾಯಿತಿ 11 ಸ್ಥಾನಗಳಿಗೆ ಚುನಾವಣೆಯ ಅಧಿಕೃತ ಘೋಷಣೆ ಹೊರ ಬೀಳಲಿದೆ. ಪ್ರತಿ ವಾರ್ಡಿನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಸದಸ್ಯರು, ಯುವಮುಖಂಡರ ಸಂಖ್ಯೆ ಬೆಳೆಯುತ್ತಿದೆ’ ಎಂದರು.
ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪ.ಪಂ. ಮುಖ್ಯಾಧಿಕಾರಿ ರಾಜಶೇಖರ್, ಮುಖಂಡರಾದ ದ್ವಾರಕೀನಾಥನಾಯ್ಡು, ಲಕ್ಷ್ಮೀಕಾಂತಮ್ಮ, ಅನೀಲ್, ಆದಿರೆಡ್ಡಿ, ರಿಯಾಜ್‌ಪಾಷ, ಕೃಷ್ಣೇಗೌಡ, ರಘುನಾಥರೆಡ್ಡಿ, ನವೀನ್, ನಯಾಜ್, ಶ್ರೀನಿವಾಸ್, ಪ್ರಕಾಶ್, ರಮೇಶ್, ಜಿ.ಟಿ.ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.