ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಗುರುವಾರ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಸರ್ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಧ್ವಜಾರೋಹಣ ನೆರವೇರಿಸಿದರು.
ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಮಹಾತ್ಮ ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ಮಾಸ್ಟರ್ ವೆಂಕಟೇಶಪ್ಪ ಮತ್ತು ತಂಡದಿಂದ ಮೂಡಿಬಂದ ರಾಷ್ಟ್ರಗೀತೆ ನೆರೆದಿದ್ದವರ ಗಮನ ಸೆಳೆಯಿತು. ಸಂಗೀತ ಶಿಕ್ಷಕ ಮಹಾಲಿಂಗಯ್ಯ ಮಠದ ಹಾಗೂ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ನಾಡಗೀತೆ ಹಾಡಿದರು.
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರೌಢ ಶಾಲೆ, ಬ್ರೈಟ್ ಶಾಲೆ, ಭಾರತಿ ಶಾಲೆ ಹಾಗೂ ಚಿಂತಾಮಣಿಯ ಏನಿಗದೆಲೆಯ ಜೆ.ಎನ್.ವಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿತು.
ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ತುಕಡಿ, ಜಿಲ್ಲಾ ಮಹಿಳಾ ಪೊಲೀಸ್ ತುಕಡಿ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಸರ್ಕಾರಿ ಪ್ರಥಮ ದರ್ಜೆಕಾಲೇಜು, ಭಾರತ್ ಸೇವಾದಳ, ಸರ್.ಎಂ.ವಿ ಪ್ರೌಢಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆ, ವಾಪಸಂದ್ರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕ್ವಯಟ್ ಕರ್ನಾರ್ ಶಾಲೆ, ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ, ನ್ಯೂಟನ್ ಗ್ರಾಮರ್ ಪ್ರೌಢಶಾಲೆ, ಎನಿಗದೆಲೆಯ ಕೆ.ಎನ್.ವಿ. ವಸತಿ ಶಾಲೆ ಎನಿಗದಲೆ, ಜೆ.ಎನ್.ವಿ ವಸತಿ ಶಾಲೆ ಎನಿಗದಲೆ, ಗುಡ್ ಷಪರ್ಡ್ ಶಾಲೆ, ಪೂರ್ಣಪ್ರಜ್ಞಾ ಪ್ರೌಢಶಾಲೆಯ ತಂಡಗಳು ಕವಾಯತಿನಲ್ಲಿ ಪಾಲ್ಗೊಂಡಿದ್ದವು.
ಈ ವೇಳೆ ಮಾತನಾಡಿದ ಎಂ.ಟಿ.ಬಿ. ನಾಗರಾಜ್, ‘ರಾಜಪ್ರಭುತ್ವ, ಊಳಿಗಮಾನ್ಯ ವ್ಯವಸ್ಥೆ ಧಿಕ್ಕರಿಸಿ ಸರ್ವರ ಏಳ್ಗೆಯ ಸಂವಿಧಾನವನ್ನು ಒಪ್ಪಿಕೊಂಡ ದೇಶ ನಮ್ಮದು’ ಎಂದರು.
ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಹರಿದು ಹಂಚಿಹೋಗಿದ್ದ ದೇಶವನ್ನು ಒಂದುಗೂಡಿಸುವುದು, ಅನಕ್ಷರತೆ, ಅನಾರೋಗ್ಯ, ಹಸಿವು ಮತ್ತು ಬಡತನದಲ್ಲಿದ್ದ ದೇಶವನ್ನು ಮುನ್ನಡೆಸಿದ ನಾಯಕರನ್ನು ನಾವು ಗೌರವಿಸೋಣ ಎಂದು ಹೇಳಿದರು.
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ನಮ್ಮದು. ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟು ದೇಶದ ಮುನ್ನಡೆಗೆ ದಾರಿದೀಪ ನೀಡಿರುವ ಬಿ.ಆರ್. ಅಂಬೇಡ್ಕರ್ ಮತ್ತು ಅವರ ತಂಡವನ್ನು ಸ್ಮರಿಸಬೇಕು ಎಂದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ನಗರೋತ್ಥಾನ-3 ಯೋಜನೆಯಡಿ ₹11,950 ಲಕ್ಷಗಳ ಅನುದಾನ ಹಂಚಿಕೆಯಾಗಿದೆ. ಈ ಪೈಕಿ 111 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4 ಯೋಜನೆಯಡಿ ₹14,500 ಲಕ್ಷಗಳ ಅನುದಾನ ಹಂಚಿಕೆಯಾಗಿದ್ದು, ಈ ಪೈಕಿ 218 ಕಾಮಗಾರಿಗಳನ್ನು ಕೈಗೆತ್ತಿಕೊಂಡು 73 ಕಾಮಗಾರಿಗಳನ್ನು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜು, ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದ ರೆಡ್ಡಿ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಜಿ. ಸಂತೋಷ್ ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಹರೀಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.