ADVERTISEMENT

‘ಆದಿಕವಿ’, ‘ವಾಗ್ದೇವಿ’ ಪುರಸ್ಕಾರ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 14:22 IST
Last Updated 24 ನವೆಂಬರ್ 2024, 14:22 IST
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಆದಿಕವಿ ಹಾಗೂ ವಾಗ್ದೇವಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ವೇ.ಮೂ.ವಿಷ್ಣು ಭಟ್ ಡೋಂಗ್ರೆ ಅವರಿಗೆ ಆದಿಕವಿ ಪುರಸ್ಕಾರ ಹಾಗೂ ಜಿ.ಬಿ.ಹರೀಶ್ ಅವರಿಗೆ ವಾಗ್ದೇವಿ ಪುರಸ್ಕಾರ ಪ್ರಾದಾನ ಮಾಡಲಾಯಿತು
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಆದಿಕವಿ ಹಾಗೂ ವಾಗ್ದೇವಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ವೇ.ಮೂ.ವಿಷ್ಣು ಭಟ್ ಡೋಂಗ್ರೆ ಅವರಿಗೆ ಆದಿಕವಿ ಪುರಸ್ಕಾರ ಹಾಗೂ ಜಿ.ಬಿ.ಹರೀಶ್ ಅವರಿಗೆ ವಾಗ್ದೇವಿ ಪುರಸ್ಕಾರ ಪ್ರಾದಾನ ಮಾಡಲಾಯಿತು   

ಚಿಂತಾಮಣಿ: ‘ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವಂತೆ ನೋಡಿಕೊಳ್ಳಲು ಧರ್ಮಾಚರಣೆ ಮಾಡುವ ಮಾದರಿ ವ್ಯಕ್ತಿಗಳ ಅಗತ್ಯವಿದೆ’ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಆದಿಕವಿ ಹಾಗೂ ವಾಗ್ದೇವಿ’ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ತಾಯಿ ಭಾಷೆ ಸಂಸ್ಕೃತದಿಂದ ಸಾವಿರಾರು ಭಾಷೆಗಳು ಬೆಳೆದವು. ಸಾಮಾನ್ಯ ಜನರಿಗೆ ಸುಲಲಿತವಾಗಿ ವಿಚಾರಗಳನ್ನು ತಿಳಿಸುವ ಕಾರಣಕ್ಕಾಗಿ ಬೇರೆ ಬೇರೆ ಭಾಷೆಗಳು ಜನ್ಮ ತಾಳಿದವು. ಉತ್ತಮ ವಿಚಾರಗಳನ್ನು ಹೆಚ್ಚು ಜನರು ಅರ್ಥೈಸಿಕೊಂಡಾಗ ಸಮಾಜವು ಉತ್ತಮವಾಗುತ್ತದೆ. ಚಿಂತನೆಯನ್ನು ಮಾಡದಿರುವ ಜನರು ಹೆಚ್ಚಾದರೆ ಕಾಲ ಕೆಟ್ಟಿತು ಎನ್ನುತ್ತವೆ. ಏನೂ ಮಾಡುತ್ತಿಲ್ಲ ಎಂದು ಸಮಾಜದ ಕಡೆಗೆ ಬೆರಳು ತೋರಿಸುವ ಬದಲು ಕೈಲಾದ ಕಾರ್ಯವನ್ನು ಮಾಡುತ್ತಿರಬೇಕು. ಜನರಿಗೆ ಉತ್ತಮ ವಿಚಾರಗಳು ತಲುಪಲಿ ಎಂದು ಕಳೆದ 20-25 ವರ್ಷಗಳಿಂದ 5 ಸಾವಿರ ಭಜನಾ ತಂಡಗಳನ್ನು ಮುನ್ನೆಡೆಸುತ್ತಿರುವುದು ಸಾರ್ಥಕತೆ ಮೂಡಿಸಿದೆ’ ಎಂದರು.

ADVERTISEMENT

ಆಕಾಶವಾಣಿಯ ನಿವೃತ್ತ ಅಧಿಕಾರಿ ಹಾಗೂ ಏಕವ್ಯಕ್ತಿ ತಾಳಮದ್ದಳೆ ಪ್ರಕಾರದ ರೂವಾರಿ ದಿವಾಕರ ಹೆಗಡೆ ಕೆರೆಹೊಂಡ ಮಾತನಾಡಿ, ‘ಉತ್ಪನ್ನಗಳು ಮಾತ್ರ ಇದ್ದರೆ ಮಾರುಕಟ್ಟೆಯಾಗುತ್ತದೆ. ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಬೇಕಾದರೆ ಶ್ರದ್ಧೆ ಮುಖ್ಯ. ಶ್ರದ್ಧೆ ಬಂದ ಕೂಡಲೇ ಹೂ, ಹಣ್ಣು, ಅನ್ನ ಎಲ್ಲವೂ ಪ್ರಸಾದ ಆಗುತ್ತದೆ. ಹಾಗೆಯೇ ಸಾಹಿತ್ಯಕ್ಕೂ ಅಧ್ಯಾತ್ಮದ ದೃಷ್ಟಿ ಅತ್ಯಗತ್ಯ. ಸಮಾಜದಲ್ಲಿ ಏನನ್ನು ಕಳೆದುಕೊಂಡರೂ ಬದುಕಬಹುದು. ಶ್ರದ್ಧೆಯನ್ನು ಕಳೆದುಕೊಂಡರೆ ಉಳಿಯಲಾಗದು’ ಎಂದರು.

‘ಜೀವನದಲ್ಲಿ ಸೌಂದರ್ಯ ಪ್ರಜ್ಞೆ ಮತ್ತು ಜ್ಞಾನದಾಹ ಇಂದಿನ ಅವಶ್ಯಕತೆ. ಜ್ಞಾನ ಎನ್ನುವುದು ಧಾನ್ಯದ ರೀತಿ ಶಾಶ್ವತವಾಗಿ ಉಳಿಯಬೇಕಾದರೆ ಮತ್ತೆ ಮತ್ತೆ ಬಿತ್ತಿ ಬೆಳೆಯಬೇಕು. ಕೋಟ್ಯಂತರ ಶ್ರದ್ಧಾವಂತರು ಇರುವ ದೇಶದಲ್ಲಿ ಕೆಲವೇ ನೂರು ಇರುವ ನಾಸ್ತಿಕರಿಗೆ ಆಳಲು ಬಿಟ್ಟುಕೊಟ್ಟಿದ್ದೇವೆ ಎನ್ನುವುದು ದುರಂತ. ಶ್ರದ್ಧಾವಂತರು ಎರಡನೇ ದರ್ಜೆಯ ನಾಗರಿಕರಲ್ಲ. ಭಜನೆ, ಮಂತ್ರ, ಅಜ್ಜಿ ಕತೆ, ಜಾನಪದ ಗೀತೆಗಳು ಇಂದಿಗೂ ಪ್ರಸ್ತುತ’ ಎಂದರು.

ಆದಿಕವಿ ಪುರಸ್ಕಾರ ಸ್ವೀಕರಿಸಿದ ವೇ.ಮೂ.ವಿಷ್ಣು ಭಟ್ ಡೋಂಗ್ರೆ ಮಾತನಾಡಿ, ‘ಸಾಹಿತ್ಯವು ಸಮಾಜದ ಪ್ರತಿಬಿಂಬ. ರಾಮಾಯಣವನ್ನು ಓದಿದರೆ ಆಗಿನ ಕಾಲದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸನ್ನಿವೇಶಗಳನ್ನು ತಿಳಿಯಬಹುದು. ಸನಾತನ ಧರ್ಮವು ಅಳಿವಿನ ಅಂಚಿನಲ್ಲಿದ್ದಾಗ ಗೋಸ್ವಾಮಿ ತುಳಸೀದಾಸರು ರಾಮಚರಿತಮಾನಸ ರಚಿಸಿ ಜನರಲ್ಲಿ ಧಾರ್ಮಿಕ ಭಾವನೆ ಮೂಡಿಸಿದರು. ತತ್ಕಾಲೀನ ಸಾಮಾಜಿಕ ಸನ್ನಿವೇಶ ಇಲ್ಲದಿದ್ದರೆ ಅದು ಉಪಯೋಗಕ್ಕೆ ಬಾರದು. ನನ್ನ ಸಾಹಿತ್ಯ ರಚನೆಯಲ್ಲೂ ಇದನ್ನೇ ಪಾಲಿಸುತ್ತಿದ್ದೇನೆ’ ಎಂದರು.

ವಾಗ್ದೇವಿ ಪುರಸ್ಕಾರ ಸ್ವೀಕರಿಸಿದ ಜಿ.ಬಿ.ಹರೀಶ್ ಮಾತನಾಡಿ, ‘ಕಾರ್ಯ ಮಾಡುವುದು ನಮ್ಮ ಕರ್ಮ ಎಂದು ಜೀವಿಸಿದವರು ಬಹಳಷ್ಟು ಜನರಿದ್ದಾರೆ. ಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮಗಿಂತ ದೊಡ್ಡವರಿದ್ದಾರೆ ಎಂದು ತಿಳಿದಿರುತ್ತಾರೆ. ಆದರೆ ಮಹಿಷಾಸುರನ ಹಬ್ಬ ಆಚರಿಸುವ ಚಿಂತಕರು ಈ ಮಾತನ್ನು ಹೇಳುವುದಿಲ್ಲ. ಜ್ಞಾನವಂತಿಕೆಯ ಜತೆಗೆ ಹೃದಯವಂತಿಕೆ ಬೇಕು. ಅಧ್ಯಾತ್ಮಿಕ ಶಕ್ತಿ ಇಲ್ಲದೆ ಬರೆದ ಸಾಹಿತ್ಯವು ಅವರ ಶವದೊಂದಿಗೆ ಸ್ಮಶಾನಕ್ಕೆ ಹೋಗುತ್ತದೆ. ಅಧ್ಯಾತ್ಮ ಇರುವ ಸಾಹಿತ್ಯ ಶಾಶ್ವತವಾಗಿ ಉಳಿಯುತ್ತದೆ’ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಮಾತನಾಡಿದರು. ಪರಿಷತ್ ಖಜಾಂಚಿ ರಾಮಕೃಷ್ಣ ಶ್ರೌತಿ, ಸಹ ಖಜಾಂಚಿ ವಿಜಯ್ ಭರ್ತೂರು, ತುಮಕೂರು ವಿಭಾಗದ ಸಂಯೋಜಕ ಅಶ್ವತ್ಥನಾರಾಯಣ, ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿ ರಂಜನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.