ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯು ಬುಧವಾರ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ಷೇತ್ರಕ್ಕೆ ಹುರಿಯಾಳು ಘೋಷಣೆಯಾಗಿಲ್ಲ. ಇದು ಬಿಜೆಪಿ ಹಾಗೂ ಕ್ಷೇತ್ರದ ರಾಜಕೀಯ ವಲಯದಲ್ಲಿ ನಾನಾ ರೀತಿಯ ಊಹಾಪೋಹಗಳು ಗರಿಗೆದರುವಂತೆ ಮಾಡಿದೆ.
ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ಹೆಸರು ಟಿಕೆಟ್ ವಿಚಾರವಾಗಿ ಮುಂಚೂಣಿಯಲ್ಲಿ ಇತ್ತು. ಇಬ್ಬರೂ ಪ್ರತ್ಯೇಕವಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ. ಒಂದು ಹಂತದಲ್ಲಿ ಡಾ.ಕೆ.ಸುಧಾಕರ್ ಮತ್ತು ಎಸ್.ಆರ್.ವಿಶ್ವನಾಥ್ ಪರಸ್ಪರರ ವಿರುದ್ಧ ಟೀಕೆಗಳನ್ನು ಮಾಡಿಕೊಂಡಿದ್ದರು.
ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಎನ್ನುವ ವಿಶ್ವಾಸ ಬಿಜೆಪಿ ನಾಯಕರದ್ದಾಗಿತ್ತು. ಈ ನಡುವೆಯೇ ಸುಧಾಕರ್, ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಿತು.
ಈಗ ಬಿಜೆಪಿ ಮುಖಂಡ ಸಿ.ಟಿ.ರವಿ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೆಸರುಗಳು ಚಿಕ್ಕಬಳ್ಳಾಪುರ ಕ್ಷೇತ್ರದ ಜೊತೆ ತಳುಕು ಹಾಕಿಕೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹಾಗೂ ಊಹಾಪೋಹಗಳು ಜೋರಾಗಿವೆ. ಇದನ್ನು ಬಿಜೆಪಿ ಮುಖಂಡರು ಸ್ಪಷ್ಟವಾಗಿ ನಿರಾಕರಿಸುವ ಸ್ಥಿತಿಯಲ್ಲಿ ಇಲ್ಲ. ‘ಏನಾದರೂ ಆಗಬಹುದು’ ಎಂದು ವರಿಷ್ಠರತ್ತ ಬೆರಳು ತೋರುತ್ತಿದ್ದಾರೆ. ಮತ್ತೊಂದು ಕಡೆ ಕೆ.ಸುಧಾಕರ್‌ಗೆ ಟಿಕೆಟ್ ದೊರೆಯುತ್ತದೆ ಎನ್ನುವ ಅಚಲ ವಿಶ್ವಾಸವನ್ನು ಬೆಂಬಲಿಗರು ಹೊಂದಿದ್ದಾರೆ.
ಡಾ.ಕೆ.ಸುಧಾಕರ್ ಅವರ ಬೆಂಬಲಿಗರೂ ಆಗಿರುವ ಬಿಜೆಪಿ ಮುಖಂಡ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ ಗುರುವಾರ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿದರು. ‘ಹೊರಗಿನ ಅಭ್ಯರ್ಥಿಗಳು ಬರುತ್ತಾರೆ ಎನ್ನುವ ಊಹಾಪೋಹಗಳು ಇವೆ. ಸ್ಥಳೀಯ ಒಕ್ಕಲಿಗರಿಗೆ ಟಿಕೆಟ್ ನೀಡಬೇಕು’ ಎಂದು ಒತ್ತಾಯಿಸಿದರು. ಹೊರಗಿನ ಅಭ್ಯರ್ಥಿಯ ಚರ್ಚೆಗೆ ಇದು ಮತ್ತಷ್ಟು ಪುಷ್ಠಿ ನೀಡಿದೆ.
ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಅಂದಾಜು 7 ಲಕ್ಷ ಮತದಾರರು ಇದ್ದಾರೆ. ಸಿ.ಟಿ ರವಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಲಿಜ ನಾಯ್ಡು ಸಮುದಾಯದವರಾಗಿದ್ದು ಈ ಸಮುದಾಯದ ಮತಗಳು ಕ್ಷೇತ್ರದಲ್ಲಿ ಇವೆ.
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಚಿಕ್ಕಮಗಳೂರು– ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಹಲವು ಅನಿರೀಕ್ಷಿತರೂ ಟಿಕೆಟ್ ಪಡೆದಿದ್ದಾರೆ. ಆದ್ದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿಯಲ್ಲಿಯೂ ‘ಅನಿರೀಕ್ಷಿತ’ ಅಭ್ಯರ್ಥಿಯ ಕುತೂಹಲ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.