ಚಿಕ್ಕಬಳ್ಳಾಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಭೇಟಿಯ ತರುವಾಯ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಪಕ್ಷ ಸಂಘಟನೆ ಚುರುಕು ಪಡೆದಿದೆ. ನಡ್ಡಾ ಭೇಟಿ ಮತ್ತು ಸುಧಾಕರ್ ಅವರ ‘ಗ್ರಾಮ ಸಂಚಾರ’ ಸುಧಾಕರ್ ಅವರಿಗೆ ಲೋಕಸಭೆ ಚುನಾವಣೆಯ ಸ್ಪರ್ಧೆಯ ಬಗ್ಗೆ ‘ಹಸಿರು ನಿರಾಶೆ’ ದೊರೆತಿದೆ ಎನ್ನುವ ಮಾತುಗಳು ಪಕ್ಷದ ವೇದಿಕೆಗಳಲ್ಲಿ ಕೇಳಿ ಬರುತ್ತಿವೆ.
ಸುಧಾಕರ್ ಅವರಿಗೆ ಟಿಕೆಟ್ ಬಹುತೇಕ ಖಚಿತ. ಪಕ್ಷ ಸಂಘಟಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಕಾರಣವನ್ನು ಸುಧಾಕರ್ ಚೆನ್ನಾಗಿಯೇ ಬಲ್ಲರು. ಸುಧಾಕರ್ ಅಖಾಡಕ್ಕೆ ಸಕ್ರಿಯವಾಗಿ ಇಳಿದಿರುವುದು ಬಿಜೆಪಿಯ ರಾಜಕಾರಣಕ್ಕೆ ರಂಗು ತುಂಬುತ್ತದೆ ಎಂದು ಮಾಜಿ ಸಚಿವರ ಆಪ್ತ ಮೂಲಗಳು ತಿಳಿಸುತ್ತವೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯ ಹೆಜ್ಜೆ ಗುರುತುಗಳನ್ನು ನೋಡಿದರೆ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಮೇಲೆ ಕಮಲ ಪಕ್ಷದ ಮುಖಂಡರು ಪ್ರಮುಖವಾಗಿ ದೃಷ್ಟಿ ಹರಿಸಿದ್ದಾರೆ.
ಶನಿವಾರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಗುಡ್ಲಮುದ್ದೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪುರ, ಚಿಕ್ಕನಹಳ್ಳಿ, ಹರಳೂರು, ನಾಗೇನಹಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮುಖಂಡರ ಮನೆಗಳಿಗೆ ಸುಧಾಕರ್ ಭೇಟಿ ನೀಡಿದ್ದರು. ಆ ತರುವಾಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಡಾ.ಕೆ.ಸುಧಾಕರ್ ಭೇಟಿ ಮಾಡಿದ್ದಾರೆ.
ಭಾನುವಾರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚೇಳೂರು ತಾಲ್ಲೂಕಿನ ಚಾಕವೇಲು, ಪುಲಿಗಲ್ ಮತ್ತು ನಲ್ಲಗಟ್ಟಪಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮುಖಂಡರ ಸಭೆ ನಡೆಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ, ಬಿ.ಎಲ್.ಸಂತೋಷ್, ಅರುಣ್ ಸಿಂಗ್ ಹೀಗೆ ಪಕ್ಷದ ವರಿಷ್ಠರನ್ನು ಸುಧಾಕರ್ ಆಗಾಗ್ಗೆ ಭೇಟಿ ಮಾಡುತ್ತಿದ್ದರು. ಆದರೆ ಜೆ.ಪಿ.ನಡ್ಡಾ ಭೇಟಿಯ ತರುವಾಯ ಪಂಚಾಯಿತಿ ಸದಸ್ಯರು ಸೇರಿದಂತೆ ಗ್ರಾಮ ಮಟ್ಟದ ಮುಖಂಡರನ್ನು ವಿಶ್ವಾಸಕ್ಕೆ ಪಡೆಯುತ್ತಿದ್ದಾರೆ.
ಅನ್ಯ ಪಕ್ಷಗಳಲ್ಲಿಯೂ ಆಪ್ತರು: ಬಿಜೆಪಿ ಆಡಳಿತದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿರುವ ಸುಧಾಕರ್ ಅವರಿಗೆ ಅನ್ಯ ಪಕ್ಷಗಳಲ್ಲಿಯೂ ‘ಆಪ್ತ’ರು ಇದ್ದಾರೆ. ಗೌರಿಬಿದನೂರು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರ ಗೆಲುವಿನಲ್ಲಿಯೂ ಸುಧಾಕರ್ ಪಾತ್ರವಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಜೊತೆ ಈ ಹಿಂದಿನಿಂದಲೂ ಆತ್ಮೀಯ ಒಡನಾಟ ಹೊಂದಿದ್ದಾರೆ. ಹೀಗೆ ಅನ್ಯ ಪಕ್ಷಗಳ ಪ್ರಮುಖ ಮುಖಂಡರಷ್ಟೇ ಅಲ್ಲ ಸ್ಥಳೀಯ ಮುಖಂಡರ ಜೊತೆಯೂ ಸುಧಾಕರ್ ಅವರಿಗೆ ಉತ್ತಮ ಸಂಬಂಧವಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯು ಸಂಪನ್ಮೂಲ ಮತ್ತು ಸಂಘಟನೆಯ ದೃಷ್ಟಿಯಿಂದ ಬಲಿಷ್ಠ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಿದೆ. ಬಿ.ಎನ್.ಬಚ್ಚೇಗೌಡ ಅವರ ಗೆಲುವಿನ ಮೂಲಕ ತನ್ನ ತೆಕ್ಕೆಗೆ ಬಂದಿರುವ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಮತ್ತೆ ತನ್ನಲ್ಲಿ ಉಳಿಸಿಕೊಳ್ಳಲು ಕಮಲ ಪಾಳಯ ಪ್ರಯತ್ನಿಸುತ್ತಿದೆ.
ಆಗ ಒಬ್ಬ ಶಾಸಕ, ಈಗ ಇಬ್ಬರು: 2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದೇ ಒಂದು (ಯಲಹಂಕ) ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿದ್ದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಈಗ ದೊಡ್ಡಬಳ್ಳಾಪುರ ಮತ್ತು ಯಲಹಂಕದಲ್ಲಿ ಬಿಜೆಪಿ ಶಾಸಕರು ಇದ್ದಾರೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿದ್ದ ಕ್ಷೇತ್ರಗಳಲ್ಲಿಯೂ ವೀರಪ್ಪ ಮೊಯಿಲಿ ಅವರಿಗೆ ಹೇಳಿಕೊಳ್ಳುವಂತಹ ಮುನ್ನಡೆ ದೊರೆತಿರಲಿಲ್ಲ.
3 ಚುನಾವಣೆ; ಬಲ ಹೆಚ್ಚಿಸಿಕೊಳ್ಳುತ್ತಿರುವ ಕಮಲ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉತ್ಸಾಹದಿಂದ ಸಜ್ಜಾಗಲು ಮುಖ್ಯ ಕಾರಣ 2009 2014 ಮತ್ತು 2019ರ ಚುನಾವಣೆಯಲ್ಲಿನ ಪಕ್ಷದ ಸಾಧನೆ. ಹಿಂದೆಂದೂ ಬಿಜೆಪಿಯನ್ನು ಹತ್ತಿರ ಬಿಟ್ಟುಕೊಳ್ಳದ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮತದಾರ 2009 ಮತ್ತು 2014ರ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವಿನ ಆಸೆ ಹುಟ್ಟಿಸಿದ್ದ. 2019ರಲ್ಲಿ ಮೊದಲ ಬಾರಿ ಬಿಜೆಪಿ ಗೆದ್ದು ಸಂಭ್ರಮಿಸಿತು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಅಶ್ವತ್ಥ ನಾರಾಯಣ 339119 ಮತಗಳನ್ನು ಪಡೆದಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ 415280 ಮತಗಳನ್ನು ಪಡೆದರು. 2019ರ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡರು 745912 ಮತಗಳನ್ನು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.