ADVERTISEMENT

LS Polls: ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಚಿಕ್ಕಬಳ್ಳಾಪುರದತ್ತ ಸುಳಿಯದ ಶಾಸಕ

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಸ್ವಕ್ಷೇತ್ರಕ್ಕೆ ಬಾರದ ‍ಪ್ರದೀಪ್ ಈಶ್ವರ್

ಡಿ.ಎಂ.ಕುರ್ಕೆ ಪ್ರಶಾಂತ
Published 13 ಜೂನ್ 2024, 4:27 IST
Last Updated 13 ಜೂನ್ 2024, 4:27 IST
ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್   

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 20,941 ಮತಗಳ ಮುನ್ನಡೆ ಪಡೆಯುವ ಮೂಲಕ ಸೋತ ನೆಲದಲ್ಲಿಯೇ ಮತ್ತೆ ಮನ್ನಣೆಗಳಿಸಿದ್ದಾರೆ. 

ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಲೀಡ್ ದೊರೆತಿರುವುದಕ್ಕೆ ನಾನಾ ರೀತಿಯ ಚರ್ಚೆಗಳು, ವಿಶ್ಲೇಷಣೆಗಳು ನಡೆಯುತ್ತಿವೆ. ಆದರೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತ್ರ ಫಲಿತಾಂಶ ಪ್ರಕಟವಾಗಿ ಒಂದು ವಾರ ದಾಟಿದರೂ ಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟಿಲ್ಲ. ಇದು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಒಂದು ಮತ ಹೆಚ್ಚು ಪಡೆದರೂ ರಾಜೀನಾಮೆ ನೀಡುವೆ. ಸುಧಾಕರ್ ಅವರನ್ನು ಪಾರ್ಲಿಮೆಂಟ್ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂದು ಬಿಡುಬೀಸಾಗಿ ಪ್ರದೀಪ್ ಈಶ್ವರ್ ಹೇಳಿಕೆಗಳನ್ನು ನೀಡಿದ್ದರು. ಚುನಾವಣೆಯ ಸಂದರ್ಭದಲ್ಲಿ ಅವರು ನೀಡಿದ್ದ ಈ ಹೇಳಿಕೆಗಳು ಫಲಿತಾಂಶದ ತರುವಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಆಗುತ್ತಿದೆ. ಮತ್ತೊಂದು ಕಡೆ ‘ಮಹಾಜ್ಞಾನಿಗಳ ಬಗ್ಗೆ ಮಾತನಾಡುವುದಿಲ್ಲ’ ಎಂದು ಸುಧಾಕರ್ ತಿಳಿಸಿದ್ದಾರೆ. ಮಾತಿನ ಮೂಲಕವೇ ಗಮನ ಸೆಳೆಯುತ್ತಿದ್ದ ಪ್ರದೀಪ್ ಈಶ್ವರ್ ಮೌನವಾಗಿದ್ದಾರೆ. 

ADVERTISEMENT

ಫಲಿತಾಂಶದ ತರುವಾಯ ಇತ್ತೀಚೆಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ರಕ್ಷಾ ರಾಮಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಆರ್‌.ಸೀತಾರಾಮ್ ಹಾಗೂ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಕಾಂಗ್ರೆಸ್ ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟರು. ‘ಸೋಲಿನಿಂದ ಧೃತಿಗೆಡದಿರಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಸಚಿವರು ಆತ್ಮಸ್ಥೈರ್ಯ ತುಂಬಿದರು.

ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಸೋತ ನಂತರ ಚಿಕ್ಕಬಳ್ಳಾಪುರದಲ್ಲಿ ನಡೆಸಿದ ಮೊದಲ ಸುದ್ದಿಗೋಷ್ಠಿ ಇದು. ಈ ಗೋಷ್ಠಿಗೂ ಪ್ರದೀಪ್ ಈಶ್ವರ್ ಗೈರಾಗಿದ್ದರು. ಪ್ರದೀಪ್ ರಾಜೀನಾಮೆಯ ವಿಚಾರವನ್ನು ‘ಅವರಿಗೆ ಬಿಟ್ಟಿದ್ದು’ ಎಂದು ಸಚಿವರು ಚುಟುಕಾಗಿ ಪ್ರತಿಕ್ರಿಯಿಸಿದರು. 

‘ಜಿಲ್ಲೆಯ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿವೆ. ಚಿಕ್ಕಬಳ್ಳಾಪುರ ಕ್ಷೇತ್ರ ಅಭಿವೃದ್ಧಿಯಿಲ್ಲ. ರಕ್ಷಾ ರಾಮಯ್ಯ, ಎಂ.ಆರ್.ಸೀತಾರಾಮ್ ಕ್ಷೇತ್ರದ ನೇತೃತ್ವವಹಿಸಬೇಕು. ಸಹಕಾರ ನೀಡಲು ಸಿದ್ಧ’ ಎಂದು ಸಚಿವರ ಸಮ್ಮುಖದಲ್ಲಿಯೇ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಗೆಲುವಿನ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗಲಾಟೆಗಳು ಹೆಚ್ಚಿವೆ. ಮಂಡಿಕಲ್ಲು ಮತ್ತು ಕಣಜೇನಹಳ್ಳಿಯಲ್ಲಿ ಗಲಾಟೆ ನಡೆದಿವೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವರೆಡ್ಡಿ ಹಾಗೂ ಮುಖಂಡರು ಆರೋಪಿಸಿದ್ದಾರೆ.  

ಶಾಸಕರ ಮನೆಯ ಮೇಲೆ ಕಲ್ಲು ತೂರಾಟ ಸಹ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್‌ನ ಕೆಲವು ಮುಖಂಡರು ಬಹಿರಂಗವಾಗಿಯೇ ಶಾಸಕರ ವರ್ತನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಲೋಕಸಭೆ ಚುನಾವಣೆಯಲ್ಲಿ ಶಾಸಕರನ್ನು ಕಡೆಗಣಿಸಲಾಗಿದೆ. ಅವರಿಗೆ ಯಾವುದೇ ಜವಾಬ್ದಾರಿ ನೀಡಲಿಲ್ಲ. ಬೇರೆಯವರನ್ನು ನೆಚ್ಚಿಕೊಂಡು ಮುನ್ನಡೆದರು. ಆ ಕಾರಣದಿಂದ ಸೋಲು ಆಯಿತು ಎಂದು ಬೆಂಬಲಿಗರು ಪ್ರದೀಪ್ ಈಶ್ವರ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ರಕ್ಷಾ ರಾಮಯ್ಯ ಸೋಲಿಗೆ ಪ್ರದೀಪ್ ಈಶ್ವರ್ ಮಾತುಗಳೂ ಕಾರಣ ಎಂದು ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿದ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಎಸ್‌.ಎಂ.ಜಗದೀಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಖುದ್ದು ಶಾಸಕರೇ ಈ ಉಚ್ಛಾಟನೆ ಆದೇಶವನ್ನು ‘ಎಂಎಲ್‌ಎ ಮಿಡಿಯಾ ಗ್ರೂಪ್‌’ನಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದು ಕಡೆ ಕೆಲ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಉಚ್ಛಾಟನೆ ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.

ಹೀಗೆ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ವಾತಾವರಣ ಕದಡಿದ ನೀರಾಗಿದೆ. ಕ್ಷೇತ್ರದಲ್ಲಿ ನಾನಾ ರೀತಿಯ ರಾಜಕೀಯ ಬೆಳವಣಿಗೆಗಳು ಘಟಿಸುತ್ತಿದ್ದರೂ ಶಾಸಕರು ಸ್ವಕ್ಷೇತ್ರಕ್ಕೆ ಇಲ್ಲಿಯವರೆಗೂ ಕಾಲಿಟ್ಟಿಲ್ಲ. 

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ‘ನಾಯಕ’ ಎನಿಸಿರುವ ಶಾಸಕರು ಈ ಕದಡಿದ ನೀರನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ. ಫಲಿತಾಂಶದ ನಂತರ ಶಾಸಕರು ಚಿಕ್ಕಬಳ್ಳಾಪುರಕ್ಕೆ ಬಾರದಿರುವುದು ಬಿಜೆಪಿಗೆ ಟೀಕೆಯ ಅಸ್ತ್ರವಾಗಿಯೂ ಒದಗಿದೆ.

ಒಂದೇ ವರ್ಷದಲ್ಲಿ ಕುಸಿಯಿತೇ ಪ್ರಭಾವ?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಹೆಚ್ಚು ಲೀಡ್ ದೊರೆತಿರುವುದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ.  ಸುಧಾಕರ್ ಮೇಲಿನ ಅಸಮಾಧಾನಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ‘ಕೈ’ ಹಿಡಿದ್ದರು. ಆದರೆ ಕ್ಷೇತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್‌ ಮೇಲೆ ಅಸಮಾಧಾನ ಎನ್ನುವಂತೆ ಲೋಕಸಭಾ ಚುನಾವಣೆಯಲ್ಲಿ ಸುಧಾಕರ್‌ಗೆ 20900 ಮತಗಳ ಲೀಡ್ ನೀಡಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಕ್ಷೇತ್ರದ ಮೇಲಿನ ಹಿಡಿತ ಪ್ರದೀಪ್ ಈಶ್ವರ್ ಅವರಿಂದ ಸಡಿಲವಾಯಿತೇ ಎನ್ನುವ ಚರ್ಚೆಯೂ ಜೋರಾಗಿದೆ. ಮತ್ತೊಂದು ಕಡೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ನಲ್ಲಿರುವ ಬಿರುಕು ಎದ್ದು ಕಾಣುತ್ತಿದೆ.

ಅವಕಾಶ ಕೈ ಚೆಲ್ಲುತ್ತಿದ್ದಾರೆಯೇ ಪ್ರದೀಪ್?
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮೇಲೆ ದೊಡ್ಡಮಟ್ಟದಲ್ಲಿ ಪ್ರಭಾವ ಇಟ್ಟುಕೊಳ್ಳಲು ಶಾಸಕ ಪ್ರದೀಪ್ ಈಶ್ವರ್‌ಗೆ ಹಲವು ಅವಕಾಶಗಳು ಇವೆ. ಈ ಉತ್ತಮ ಅವಕಾಶಗಳನ್ನು ಶಾಸಕರು ಕೈ ಚೆಲ್ಲುತ್ತಿದ್ದಾರೆ ಎನ್ನುವ ವಿಶ್ಲೇಷಣೆಯೂ ಕ್ಷೇತ್ರದ ರಾಜಕೀಯ ವಲಯದಲ್ಲಿ ಇದೆ. ಕ್ಷೇತ್ರದಲ್ಲಿ ಅಹಿಂದ ಮತದಾರರ ಸಂಖ್ಯೆ ದೊಡ್ಡದಿದೆ. ರಾಜ್ಯ ಮಟ್ಟದಲ್ಲಿ ಬಲಿಜ ಸಮುದಾಯಕ್ಕೆ ಶಾಸಕರ ನಾಯಕತ್ವದ ಕೊರತೆಯೂ ಇದೆ. ‘ನಮಸ್ತೆ ಚಿಕ್ಕಬಳ್ಳಾಪುರ’ದ ಮೂಲಕ ಪ್ರದೀಪ್ ಭರವಸೆಗಳನ್ನು ಮೂಡಿಸಿದ್ದರು. ಸುಲಭವಾಗಿ ಜನರ ಕೈಗೆ ಸಿಗುವರು ದ್ವೇಷ ರಾಜಕೀಯ ಮಾಡುವುದಿಲ್ಲ ಎನ್ನುವ ಮಾತುಗಳು ಆರಂಭದಲ್ಲಿ ಇದ್ದವು. ಹೀಗೆ ನಾನಾ ರೀತಿಯ ‘ಮತಲೆಕ್ಕ’ದ ಮೂಲಕ ಚಿಕ್ಕಬಳ್ಳಾಪುರ ರಾಜಕಾರಣವನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಅವಕಾಶಗಳು ಇವೆ. ಆದರೆ ಶಾಸಕರ ನಡೆಗಳು ಮತಗಳು ‘ಕೈ’ ಚೆಲ್ಲುವಂತೆ ಮಾಡಿದೆ ಎನ್ನುವ ವಿಶ್ಲೇಷಣೆ ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.