ADVERTISEMENT

ಗೌರಿಬಿದನೂರು ರಾಜಕೀಯದಲ್ಲಿ ಚಿತ್ರ ತಂದ ಸಂಚಲನ!: ಬಿಜೆಪಿಗರ ಜತೆ ಶಿವಶಂಕರರೆಡ್ಡಿ

ಬಿಜೆಪಿ ನಾಯಕರ ಜೊತೆ ಕಾಂಗ್ರೆಸ್‌ನ ಮಾಜಿ ಸಚಿವ ಶಿವಶಂಕರರೆಡ್ಡಿ

ಡಿ.ಎಂ.ಕುರ್ಕೆ ಪ್ರಶಾಂತ
Published 12 ಮಾರ್ಚ್ 2024, 6:15 IST
Last Updated 12 ಮಾರ್ಚ್ 2024, 6:15 IST
ಬಿಜೆಪಿ ನಾಯಕರ ಜೊತೆ ಎನ್‌.ಎಚ್.ಶಿವಶಂಕರ ರೆಡ್ಡಿ
ಬಿಜೆಪಿ ನಾಯಕರ ಜೊತೆ ಎನ್‌.ಎಚ್.ಶಿವಶಂಕರ ರೆಡ್ಡಿ   

ಗೌರಿಬಿದನೂರು: ಲೋಕಸಭೆ ಚುನಾವಣೆಯ ಈ ಸಮಯದಲ್ಲಿ ಊಹಾಪೋಹದ ಸುದ್ದಿಗಳು ಶರವೇಗದಲ್ಲಿಯೇ ಹರಡುತ್ತವೆ. ಅದರಲ್ಲಿಯೂ ಪ್ರಮುಖ ರಾಜಕೀಯ ನಾಯಕರು ಎದುರಾಳಿ ‍ಪಕ್ಷದ ನಾಯಕರ ಜೊತೆ ಕಾಣಿಸಿಕೊಂಡರೆ ಮತ್ತಷ್ಟು ಚರ್ಚೆಗೆ ಕಾರಣವಾಗುತ್ತದೆ. ಆ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ, ರಾಜಕೀಯ ಪಕ್ಷಗಳ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತವೆ. ಮತ್ತೊಂದಿಷ್ಟು ರಂಗಿನ ಚರ್ಚೆಗೆ ಕಾರಣವಾಗುತ್ತದೆ. 

ಈಗ ಇಂತಹದ್ದೇ ಒಂದು ಚಿತ್ರ ಜಿಲ್ಲೆಯ ರಾಜಕೀಯದಲ್ಲಿ ಕುತೂಹಲ ಮತ್ತು ಊಹಾಪೋಹದ ಚರ್ಚೆಗೆ ಕಾರಣವಾಗಿದೆ. ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ನಾಯಕರೂ ಆದ ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಅವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ನಂದೀಶ್ ರೆಡ್ಡಿ ಹಾಗೂ ಪ್ರೀತಮ್ ಗೌಡ ಅವರ ಜೊತೆ ಇರುವ ಚಿತ್ರಗಳು ರಾಜಕೀಯ ನಾಯಕರ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಇದೇನು ಶಿವಶಂಕರ ರೆಡ್ಡಿ ಅವರು ಬಿಜೆಪಿ ಪಾಳಯದಲ್ಲಿ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಶಿವಶಂಕರ ರೆಡ್ಡಿ ಸೇರುತ್ತಾರೆಯೇ ಎನ್ನುವ ಚರ್ಚೆಗಳು ಸಹ ಜೋರಾಗಿವೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಶಿವಶಂಕರ ರೆಡ್ಡಿ ಅವರೂ ಒಬ್ಬರಾಗಿದ್ದಾರೆ. ಕೆಲವು ದಿನಗಳ ಹಿಂದೆ ಶಿವಶಂಕರ ರೆಡ್ಡಿ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿಗಳು ಬಿರುಸಾಗಿದ್ದವು. ಬಿಜೆಪಿ ನಾಯಕರು ಸಹ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿತ್ತು. 

ADVERTISEMENT

ಈ ಸುದ್ದಿ ಬಿರುಸು ಪಡೆದ ನಂತರ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಧಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕಳುಹಿಸಿದ್ದರು. ಒಂದು ಹಂತದಲ್ಲಿ ಪಕ್ಷದ ಕೆಲವು ನಾಯಕರ ನಡೆಗಳ ವಿರುದ್ಧ ಮಾಜಿ ಸಚಿವರು ಅಸಮಾಧಾನ ಸಹ ವ್ಯಕ್ತಪಡಿಸಿದ್ದರು. 

ಈ ಎಲ್ಲ ಬೆಳವಣಿಗೆಗಳ ತರುವಾಯ ಟಿಕೆಟ್ ವಿಚಾರವಾಗಿ ಚರ್ಚಿಸಲು ಇತ್ತೀಚೆಗೆ ಶಿವಶಂಕರ ರೆಡ್ಡಿ ಅವರು ನವದೆಹಲಿಗೆ ತೆರಳಿದ್ದರು. ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ನಡುವೆಯೇ ಬಿಜೆಪಿ ನಾಯಕರ ಜೊತೆಗಿರುವ ಚಿತ್ರ ಹೊರ ಬಂದಿದೆ. 

ಅಷ್ಟಕ್ಕೂ ಆಗಿದ್ದೇನೆ: ಮಾರ್ಚ್‌ 15ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೇವನಹಳ್ಳಿಗೆ  ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಈ ಪ್ರಯುಕ್ತ ಸೋಮವಾರ ದೇವನಹಳ್ಳಿ ‍ಪಟ್ಟಣದಲ್ಲಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಮುಖಂಡರು ನಡೆಸಿದ್ದಾರೆ.

ಸಭೆಯ ನಂತರ ಬಿಜೆಪಿ ನಾಯಕರು ಊಟಕ್ಕಾಗಿ ಹೋಟೆಲ್‌ವೊಂದಕ್ಕೆ ಹೋಗಿದ್ದಾರೆ. ಅದೇ ಸಮಯಕ್ಕೆ ಶಿವಶಂಕರ ರೆಡ್ಡಿ ಅವರು ಸಹ ಊಟಕ್ಕಾಗಿ ಬಂದಿದ್ದಾರೆ. ಬಿಜೆಪಿಯ ನಂದೀಶ್ ರೆಡ್ಡಿ ಅವರ ಜೊತೆ ಕುಶಲೋಪರಿಯಾಗಿ ಮಾತುಕತೆ ನಡೆಸಿದ್ದಾರೆ. ಪಕ್ಕದಲ್ಲಿಯೇ ಪ್ರೀತಂ ಗೌಡ ಅವರೂ ಇದ್ದಾರೆ. ಈ ಚಿತ್ರವೇ ಈಹ ಚರ್ಚೆಗೆ ಕಾರಣವಾದ ಮತ್ತು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. 

ಲೋಕಸಭೆ ಚುನಾವಣೆಯು ಸಮೀಪದಲ್ಲಿ ಇರುವ ಕಾರಣ ಚಿತ್ರವು ಮತ್ತಷ್ಟು ರಾಜಕೀಯ ರಂಗು ಪಡೆದಿದೆ.

‘ಊಟಕ್ಕೆ ತೆರಳಿದ್ದಾಗ ತೆಗೆದ ಚಿತ್ರ’

ನಾನು ಊಟಕ್ಕೆ ತೆರಳಿದ್ದಾಗ ಅಲ್ಲಿ ಬಿಜೆಪಿ ನಾಯಕರು ಸಿಕ್ಕಿದರು. ಆಗ ಅವರ ಜೊತೆ ಮಾತನಾಡಿದೆ. ಆಗ ಚಿತ್ರ ತೆಗೆದಿದ್ದಾರೆ ಅಷ್ಟೇ ಎಂದು ಎನ್‌.ಎಚ್. ಶಿವಶಂಕರ ರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  ‘ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಮತ್ತು ಗ್ಯಾರೆಂಟಿ ಸಮಾವೇಶವಿತ್ತು. ಸಚಿವರಾದ ಮುನಿಯಪ್ಪ ಅವರು ಆಹ್ವಾನಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಂತರ ಊಟಕ್ಕಾಗಿ ಹೋಟೆಲ್‌ಗೆ ಹೋದೆ. ಅಲ್ಲಿ ಬಿಜೆಪಿ ನಾಯಕರು ಇದ್ದರು’ ಎಂದು ಹೇಳಿದರು.  ‘ನನ್ನ ನೋಡಿ ಮಾತನಾಡಿಸಿದರು. ನಂದೀಶ್ ರೆಡ್ಡಿ ಮತ್ತು ಪ್ರೀತಂ ಗೌಡ ನನಗೆ ಸ್ನೇಹಿತರು. ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಆಗಲಿಲ್ಲ. ಅಷ್ಟು ಬೇಗ ಯಾರೊ ಚಿತ್ರ ತೆಗೆದಿದ್ದಾರೆ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.