ADVERTISEMENT

ಸರ್ಕಾರ ಅಸ್ಥಿರಗೊಳಿಸುವುದೇ ಬಿಜೆಪಿಯವರ ಹುಟ್ಟುಗುಣ: ಎಂ.ಸಿ.ಮನಗೂಳಿ ಆರೋಪ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 9:14 IST
Last Updated 19 ಸೆಪ್ಟೆಂಬರ್ 2018, 9:14 IST
ಎಂ.ಸಿ.ಮನಗೂಳಿ
ಎಂ.ಸಿ.ಮನಗೂಳಿ   

ಚಿಕ್ಕಬಳ್ಳಾಪುರ: ‘ಜೆಡಿಎಸ್‌, ಕಾಂಗ್ರೆಸ್ ಮೈತ್ರಿ ಸರ್ಕಾರ ಚೆನ್ನಾಗಿ ನಡೆದಿದೆ. ಆದರೆ ಬಿಜೆಪಿಯವರು ಇಬ್ಬರ ನಡುವೆ ಕೆಡಿಸುವುದು, ಹುಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದು ಬಿಜೆಪಿಯವರ ಹುಟ್ಟುಗುಣ’ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹೇಳಿದರು.

ತಾಲ್ಲೂಕಿನ ನಂದಿಬೆಟ್ಟದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮಿಶ್ರ ಸರ್ಕಾರಕ್ಕೆ ಯಾವುದಾದರೂ ರೀತಿಯಲ್ಲಿ ಕೆಟ್ಟ ಹೆಸರು ತಂದು ತಾವು ಅಧಿಕಾರ ಹಿಡಿಯಬೇಕು ಎಂದು ಬಿಜೆಪಿಯವರು ತಂತ್ರಗಾರಿಕೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ತಳಮಳವಾಗುತ್ತಿದೆ. ಬಿಜೆಪಿಯವರು ಅಧಿಕಾರ ಕಸಿದುಕೊಳ್ಳಲು ಬಡಿದಾಡುತ್ತಿದ್ದಾರೆ. ಆದರೆ ಅವರಿಗೆ ಅಧಿಕಾರ ಕಸಿದುಕೊಳ್ಳಲು ಆಗುವುದಿಲ್ಲ’ ಎಂದು ತಿಳಿಸಿದರು.

‘ಬಿಜೆಪಿಯವರು ಹಂಗ ಹರದವರು. ಅವರಿಗೆ ಲಂಗು ಲಗಾಮಿಲ್ಲ. ಅದಕ್ಕಾಗಿ ಅವರು ಆ ರೀತಿ ತಿರುಗಾಡುತ್ತಾರೆ. ಆದರೆ, ಇತ್ತೀಚೆಗೆ ಯಡಿಯೂರಪ್ಪ ಅವರ ವರ್ಚಸ್ಸು ಕಡಿಮೆಯಾಗಿದೆ. ಹಿಂದಿನ ಹುರುಪು, ಹುಮ್ಮಸ್ಸು, ತಿರುಗಾಟ, ಸಭೆಗಳು ಕಡಿಮೆಯಾಗಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಮೋದಿ ಅವರು ಅವರಿಗೆ ಕಿವಿಮಾತು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಈಗ ಯಡಿಯೂರಪ್ಪನವರ ಓಡಾಟ ಬಹಳ ಕಡಿಮೆಯಾಗಿದೆ’ ಎಂದರು.

ADVERTISEMENT

‘ಏನಾದರೂ ಮಾಡಿ ಕೆಲ ಶಾಸಕರನ್ನು ಸೆಳೆದುಕೊಂಡು ಈ ಸರ್ಕಾರ ಉರುಳಿಸಬೇಕು ಎನ್ನುವುದು ಅವರ ತಲೆಯಲ್ಲಿ ಬಹಳಷ್ಟಿತ್ತು. ಆದರೆ ಅದಕ್ಕೆ ಯಾರು ಒಪ್ಪಲಿಲ್ಲ. ಬಿಜೆಪಿಯವರು ಕರೆದರೆ ನಮ್ಮಲ್ಲಿ ಯಾರೂ ಹೋಗುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತವಿಲ್ಲ. ಅದೆಲ್ಲವೂ ಮಾಧ್ಯಮಗಳ ಸೃಷ್ಟಿ’ ಎಂದು ಹೇಳಿದರು.

‘ಪ್ರತಿಯೊಬ್ಬರನ್ನೂ ಸಮಾಧಾನ ಮಾಡುವುದು ದೇವರಿಂದಲೂ ಸಾಧ್ಯವಿಲ್ಲ. ಎಲ್ಲ ಪಕ್ಷಗಳ ಒಳಗೆ ಆಂತರಿಕ ತಿಕ್ಕಾಟಗಳು ಇರುವುದು ಸಹಜ. ಬಿಜೆಪಿಯವರಿಗೆ ಅಧಿಕಾರ ಸಿಗದ ಕಾರಣ ಚಡಪಡಿಸುತ್ತಿದ್ದಾರೆ. ಆದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾವೇ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತೇವೆ’ ಎಂದು ತಿಳಿಸಿದರು.

‘ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಮೇಲೆ ಭರವಸೆ ಇಟ್ಟು ಯುವಜನರು ಬಿಜೆಪಿಗೆ ಮತ ಹಾಕಿದರು. ಆದರೆ ಮೋದಿ ಅವರು ವಿದೇಶಿ ಪ್ರವಾಸ ಮಾಡುವುದು ಬಿಟ್ಟು ಅಭಿವೃದ್ಧಿ ಮಾಡಲಿಲ್ಲ. ಅದು ಜನರಿಗೆ ಗೊತ್ತಾಗಿದೆ. ಹೀಗಾಗಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದು ಬಿಜೆಪಿಯವರು ಈ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಮ್ಮಿಶ್ರ ಸರ್ಕಾರ ರಚನೆಗೂ ಮುನ್ನವೇ ಕುಮಾರಸ್ವಾಮಿ ಅವರು ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ನಾನು ಮುಖ್ಯಮಂತ್ರಿಯಾದರೆ ರೈತರ ಸಾಲ ಮನ್ನಾ ಮಾಡುವೆ ಎಂದು ಮೊದಲೇ ಹೇಳುತ್ತ ಬಂದಿದ್ದರು. ಅದರಂತೆ ಮುಖ್ಯಮಂತ್ರಿಯಾದ ಬಳಿಕ ರೈತರ ಸಾಲ ಮನ್ನಾ ಮಾಡಿದ್ದಾರೆ. ಅದರ ಶ್ರೇಯಸ್ಸು (ಕ್ರೆಡಿಟ್) ಯಾರಿಗೆ ಸಿಗುತ್ತದೆ ನೀವೇ ವಿಚಾರ ಮಾಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.