ADVERTISEMENT

ವೈದ್ಯಕೀಯ ಕಾಲೇಜು: ಕೆ.ಸುಧಾಕರ್ ವಿರುದ್ಧ ಎಂ.ಸಿ.ಸುಧಾಕರ್ ತೀವ್ರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 14:03 IST
Last Updated 8 ಆಗಸ್ಟ್ 2023, 14:03 IST
ಡಾ.ಎಂ.ಸಿ.ಸುಧಾಕರ್
ಡಾ.ಎಂ.ಸಿ.ಸುಧಾಕರ್   

ಚಿಕ್ಕಬಳ್ಳಾಪುರ: ಕನಕಪುರದಲ್ಲಿ ₹ 525 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ನಿರ್ಮಾಣಕ್ಕೆ ಟೆಂಡರ್ ಆಗಿತ್ತು. ಆದರೆ ಆ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತಂದಾಗ ಯೋಜನಾ ವೆಚ್ಚ ₹ 810ಕ್ಕೆ ಹೆಚ್ಚಿತ್ತು. ಮನಸೋ ಇಚ್ಛೆ ಹೆಚ್ಚಳ ಮಾಡಿದರು. ಇದು ಅನುಮಾನಕ್ಕೆ ಕಾರಣ ಆಗುವುದಿಲ್ಲವೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಶ್ನಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವರ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ. ಆದರೆ ಅವರು ಇತ್ತೀಚೆಗೆ ನಮ್ಮ ಬಗ್ಗೆ ಮಾತನಾಡಿದ್ದಾರೆ. ಅವರು ಕ್ರಿಯಾಶೀಲವಾದ ಮಂತ್ರಿಗಳಾಗಿದ್ದರು. ಎರಡು ಇಲಾಖೆ  ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಇಲಾಖೆಗಳ ಅಡಿಯಲ್ಲಿಯೇ ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜು ಬರುತ್ತದೆ ಎಂದರು. 

ಇತ್ತೀಚಿನವರೆಗೂ ಅವರು ಅಧಿಕಾರದಲ್ಲಿ ಇದ್ದರು. ಈ ಹಿಂದಿನ ಮುಖ್ಯಮಂತ್ರಿ, ಮಾಜಿ ಸಚಿವರು ಬೆಳಿಗ್ಗೆ ಹೋಗಿ ಕರೆದರೆ 10 ನಿಮಿಷಕ್ಕೆ ಬರುತ್ತಿದ್ದರು. ಇಂತಹವರು ವೈದ್ಯಕೀಯ ಶಿಕ್ಷಣ ಕಾಲೇಜಿನ ಯೋಜನಾ ವೆಚ್ಚ ಹೆಚ್ಚಳದ ವಿಚಾರವಾಗಿ ಸಚಿವ ಸಂಪುಟದ ಅನುಮೋದನೆ ಏಕೆ ಪಡೆಯಲಿಲ್ಲ ಎಂದರು.

ADVERTISEMENT

ಹೆಚ್ಚುವರಿ ಆಗಿದ್ದಕ್ಕೆ ಕೆಲವು ನೈಜ ಕಾರಣಗಳು ಇರಬಹುದು. ಕೆಲವು ನೈಜ ಕಾರಣಗಳು ಇಲ್ಲದೇ ಇರಬಹುದು. ಆದರೆ ಸಚಿವ ಸಂಪುಟದ ಅನುಮೋದನೆ ಪಡೆಯದೆ ಹೆಚ್ಚಳ ಮಾಡಿದ್ದು ಸಂಶಯಕ್ಕೆ ಎಡೆ ಮಾಡಿಕೊಡುವುದಿಲ್ಲವೇ? ಇದರ ಬದಲು ಕಾನೂನು ರೀತಿ ಅನುಮೋದನೆ ಪಡೆದಿದ್ದರೆ ನಮಗೆ ಏಕೆ ಸಮಸ್ಯೆ ಎದುರಾಗುತ್ತಿತ್ತು ಎಂದು ಹೇಳಿದರು. 

ವೈದ್ಯಕೀಯ ಶಿಕ್ಷಣ ಕಾಲೇಜು ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಈಗ ಕಾಲೇಜು ನಡೆಯುತ್ತಿರುವ ಮುದ್ದೇನಹಳ್ಳಿ ವಿಟಿಯು ಕ್ಯಾಂಪಸ್‌ನಲ್ಲಿ ಸ್ಥಳದ ಕೊರತೆ ಇದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ವೈದ್ಯಕೀಯ ಶಿಕ್ಷಣ ಕಾಲೇಜು ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಹಣ ಕೊಡಿಸಿ ಜಾಗ ಬಿಟ್ಟುಕೊಡುತ್ತೇವೆ ಎನ್ನುತ್ತಾರೆ ಎಂದರು.

ಇವರು (ಡಾ.ಕೆ.ಸುಧಾಕರ್) ಮುಖ್ಯಮಂತ್ರಿ ಆಗುತ್ತಾರೆ ಎನ್ನುವಷ್ಟು ಪ್ರಭಾವಿಗಳು. ಆದರೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಆ ಸೌಲಭ್ಯವಿಲ್ಲ, ಇದು ಮಾಡಿಲ್ಲ ಎಂದರೆ ಇವರಿಗೆ ಅವಮಾನ ಮಾಡಿದಂತೆ ಅಲ್ಲವೇ? ಚುನಾವಣೆ ನಂತರ ವಿದೇಶದಲ್ಲಿ ಓಡಾಡಿಕೊಂಡು ಬಂದರು. ಈಗ ಮತ್ತೆ ನಾವು ಬೇಸರ ಮಾಡಿದರೆ ‌ವಿದೇಶಕ್ಕೆ ಹೋಗುತ್ತಾರೆ. ಅವರು ನಮ್ಮ ಜೊತೆ ಓಡಾಡಿಕೊಂಡು ಇರಬೇಕು ಅಲ್ಲವೇ ಎಂದು ವ್ಯಂಗ್ಯವಾಡಿದರು. 

ಜಿಲ್ಲಾ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವಿಲ್ಲ. ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಇದೆ. ಈಗ ಜಿಲ್ಲಾ ಆಸ್ಪತ್ರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿದೆ. ಈ ಸಮಸ್ಯೆಗಳೆಲ್ಲವನ್ನು ಪರಿಹರಿಸಬೇಕಿದೆ ಎಂದರು.

ಹಿಂದೆ ಏನಾಗಿದೆ ಎನ್ನುವುದಕ್ಕಿಂತ ಮುಂದೆ ಏಗಾಗಬೇಕು ಎನ್ನುವುದನ್ನು ನೋಡಬೇಕಿದೆ. ಈ ಹಿಂದಿನವರ ತಪ್ಪು ಹುಡುಕಲು ‌ನಮ್ಮನ್ನು ಜನ ಗೆಲ್ಲಿಸಿಲ್ಲ ಎಂದರು.

ಮಾಜಿ ಸಚಿವರು ನನ್ನ ರಾಜೀನಾಮೆ ಕೇಳಿದ್ದಾರೆ. ಆದರೆ ನಾನು ಅಂತಹ ಯಾವುದೇ ಅಪರಾಧ ಮಾಡಿಲ್ಲ. ನಾನು ರಾಜೀನಾಮೆ ಕೇಳುವಷ್ಟು ಯಾವ ಅಪರಾಧ ಮಾಡಿದ್ದೇನೆ ಎಂದು ಅವರೇ ಹೇಳಬೇಕು. ಚಾಮರಾಜನಗರದಲ್ಲಿ ಆಮ್ಲಜನಕ ದೊರೆಯದೆ 23 ಜನರು ಸತ್ತರು. ಆಗ ಇವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ? ನಾನು ಇನ್ನೂ ಇದ್ದೇನೆ ಎಂದು ತಮ್ಮ ಅಸ್ತಿತ್ವಕ್ಕಾಗಿ ಸುಧಾಕರ್ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭವಾಗದಿದ್ದರೆ ಹೋರಾಟ ಮಾಡುವುದಾಗಿ ಇತ್ತೀಚೆಗೆ ಡಾ.ಕೆ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

Cut-off box - ಇಂದು ಮುಖ್ಯಮಂತ್ರಿ ಸಭೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬುಧವಾರ ಸಂಜೆ 6ಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರ ಸಭೆ ಕರೆದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮತ್ತಿತರ ವಿಷಯಗಳು ಅಲ್ಲಿ ಚರ್ಚೆ ಆಗಬಹುದು. ಈ ಹಿಂದಿನ ಬಿಜೆಪಿ ಸರ್ಕಾರ ಆರ್ಥಿಕ ಶಿಸ್ತು ಪಾಲಿಸಿಲ್ಲ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೇಗೆ ಬೇಕೊ ಆ ರೀತಿಯಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು.

Cut-off box - ‘ಪ್ರಜಾವಾಣಿ’ ವರದಿ ಪ್ರಸ್ತಾಪಿಸಿದ ಡಿ.ಸಿ ಸರ್ಕಾರಿ ಜಮೀನುಗಳನ್ನು ಕೆಲವರು ಕಬಳಿಸಿರುವುದು ಮತ್ತು ಈ ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ದೂರು ದಾಖಲಿಸಿರುವ ವಿಚಾರವನ್ನು ಮಾಧ್ಯಮದವರು ಉಸ್ತುವಾರಿ ಸಚಿವರ ಎದುರು ಪ್ರಸ್ತಾಪಿಸಿದರು. ಆಗ ಸಚಿವರು ಕಂದಾಯ ಇಲಾಖೆಯ ಬಗ್ಗೆ ಚರ್ಚೆ ಆಗಿಲ್ಲ. ಸರ್ಕಾರಿ ಭೂಮಿ ಕಬಳಿಕೆಗೆ ಅವಕಾಶವಿಲ್ಲ ಎಂದರು.  ಆಗ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ‘ಪ್ರಜಾವಾಣಿ’ಯಲ್ಲಿ ಈ ಬಗ್ಗೆ ವರದಿ ಬಂದಿತ್ತು. ಎಸ್ಪಿ ಅವರಿಗೆ ಈ ಬಗ್ಗೆ ಬರೆದಿದ್ದೇವೆ. ಕ್ರಮವಹಿಸುತ್ತೇವೆ ಎಂದು ಹೇಳಿದರು. ಆ.2ರಂದು ‘ಪ್ರಜಾವಾಣಿ’ಯಲ್ಲಿ ‘ದೂಳು ಹಿಡಿಯುವವೇ ತಹಶೀಲ್ದಾರರ ದೂರುಗಳು? ಎನ್ನುವ ವಿಶೇಷ ವರದಿ ಪ್ರಕಟವಾಗಿತ್ತು.

Cut-off box - ‘ಕಾಗದದ ಮೇಲೆ ಸರ್ಕಾರಿ ಜಮೀನು ಮಂಜೂರು’ ಈ ಹಿಂದಿನ ಶಾಸಕರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನೀಡಿದ್ದ ನಿವೇಶನದ ಹಕ್ಕುಪತ್ರಗಳ ನೈಜತೆ ಬಗ್ಗೆ ಈಗಾಗಲೇ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ‘ಇದು ನಿಗಮದ ಹಕ್ಕುಪತ್ರವಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಕಾಗದದ ಮೇಲೆ ಸರ್ಕಾರಿ ಜಮೀನು ಮಂಜೂರು ಮಾಡಿದ್ದಾರಷ್ಟೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.  ಜನರು ಮುಗ್ದರು. ಎಲ್ಲಿ ನಿವೇಶನ ಕೊಡುತ್ತಾರೆ ಎನ್ನುವುದು ಗೊತ್ತಿಲ್ಲ. ರೈತರಿಗೆ ಮಂಜೂರಾಗಿರುವ ಜಮೀನುಗಳನ್ನು ನಿವೇಶನಕ್ಕೆ ಮಂಜೂರು ಮಾಡಿದ್ದಾರೆ. ನಗರದಿಂದ 10 15 ಕಿ.ಮೀ ದೂರದಲ್ಲಿ ಜಮೀನುಗಳು ಇವೆ. ಹಕ್ಕುಪತ್ರಗಳ ವಿಚಾರದಲ್ಲಿ ಗೊಂದಲ ಸೃಷ್ಟಿ ಆಗಿದೆ ಎಂದರು. ಈಗಿನ ಬೇಡಿಕೆ ಅನುಗುಣವಾಗಿ ನಗರ ಪ್ರದೇಶದಲ್ಲಿ ನಿವೇಶನ ಕೊಡಲು ಸಾಧ್ಯವಿಲ್ಲ. ನಾನು ಚಿಂತಾಮಣಿಯಲ್ಲಿ ನಗರದ ವಾಸಿಗಳಿಗೆ ಹುಡುಕುತ್ತಿದ್ದೇನೆ. ಎಲ್ಲಿ ನೀಡಲು ಸಾಧ್ಯ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.