ADVERTISEMENT

ಶಿಢ್ಲಘಟ್ಟದಲ್ಲಿ ಹರಿಜನ ನಿಧಿಗಾಗಿ ಪ್ರವಾಸ ಮಾಡಿದ್ದ ಮಹಾತ್ಮ ಗಾಂಧಿ

ಡಿ.ಜಿ.ಮಲ್ಲಿಕಾರ್ಜುನ
Published 30 ಸೆಪ್ಟೆಂಬರ್ 2024, 6:54 IST
Last Updated 30 ಸೆಪ್ಟೆಂಬರ್ 2024, 6:54 IST
ಶಿಡ್ಲಘಟ್ಟಕ್ಕೆ ಗಾಂಧೀಜಿ ಭೇಟಿ ನೀಡಿರುವ ವರದಿಯಿರುವ ಜೂನ್ 1, 1936 ರ ದಿ ಹಿಂದೂ ಪತ್ರಿಕೆ
ಶಿಡ್ಲಘಟ್ಟಕ್ಕೆ ಗಾಂಧೀಜಿ ಭೇಟಿ ನೀಡಿರುವ ವರದಿಯಿರುವ ಜೂನ್ 1, 1936 ರ ದಿ ಹಿಂದೂ ಪತ್ರಿಕೆ   

ಶಿಡ್ಲಘಟ್ಟ: ಶಿಡ್ಲಘಟ್ಟದಲ್ಲಿ ಮಹಾತ್ಮ ಗಾಂಧೀಜಿಯವರ ಹಲವು ಹೆಜ್ಜೆ ಗುರುತುಗಳಿವೆ. ಅವರ ಪ್ರಭಾವ ಹಲವು ರೀತಿಯಲ್ಲಿ ಕಾಣಬಹುದಾಗಿದೆ.

1936 ಮೇ ತಿಂಗಳ 10ರಂದು ಗಾಂಧೀಜಿ ನಂದಿಬೆಟ್ಟಕ್ಕೆ ಬಂದವರು 20 ದಿನ ಇದ್ದರು. ಅವರೊಂದಿಗೆ ಕಸ್ತೂರಬಾ, ವಲ್ಲಭಬಾಯಿ, ಮಹದೇವ ದೇಸಾಯಿ, ಮಣಿಬೆನ್ ಸಹ ಇದ್ದರು.

ಕೋಲಾರ ಜಿಲ್ಲಾ ಬೋರ್ಡ್‌ನ ಅಧ್ಯಕ್ಷ ಹಾಗೂ ಜಿಲ್ಲಾ ಹರಿಜನ ಸೇವಕ ಸಂಘದ ಅಧ್ಯಕ್ಷ ಕೆ.ಚಂಗಲರಾಯರೆಡ್ಡಿ, ಗಾಂಧೀಜಿಯನ್ನು ನಂದಿಬೆಟ್ಟದಲ್ಲಿ ಕಂಡು, ತಮ್ಮ ಜಿಲ್ಲೆಯಲ್ಲಿ ಪ್ರವಾಸ ಮಾಡಲು ಕೋರಿದರು. ಹರಿಜನ ನಿಧಿಗಾಗಿ ಹಣ ಸಂಗ್ರಹಿಸುವುದು ಅವರ ಉದ್ದೇಶವಾಗಿತ್ತು. ಅದರಂತೆ ನಂದಿಬೆಟ್ಟವನ್ನಿಳಿದು ಬೆಂಗಳೂರಿಗೆ ಬರುವ ಮುನ್ನ ಅವಿಭಾಜ್ಯ ಕೋಲಾರ ಜಿಲ್ಲೆಯಲ್ಲಿ ಕೆಲವು ಸ್ಥಳಗಳನ್ನು ಗಾಂಧೀಜಿ ಭೇಟಿ ಕೊಟ್ಟರು. ಆ ಸಂದರ್ಭದಲ್ಲಿ ಒಂದು ಸಾವಿರದ ಆರುನೂರು ರೂಗಳು ಸಂಗ್ರಹವಾಯಿತು.

ADVERTISEMENT

‘ಗಾಂಧೀಜಿ ಮತ್ತು ಕಸ್ತೂರಬಾ ಇಬ್ಬರೂ ಶಿಡ್ಲಘಟ್ಟಕ್ಕೆ ಆಗಮಿಸಿದ್ದರು. ಕೋಲಾರ ಜಿಲ್ಲೆಯ ಅವರ ಪ್ರವಾಸದ ಸಂಪೂರ್ಣ ವಿವರ 1936, ಜೂನ್ 1 ರ ‘ದಿ ಹಿಂದೂ’ ಪತ್ರಿಕೆಯಲ್ಲಿ ವರದಿಯಾಗಿದೆ. ಗಾಂಧೀಜಿಯವರನ್ನು ಶಿಡ್ಲಘಟ್ಟದಲ್ಲಿ ಭೇಟಿ ಮಾಡಿದ್ದ ದಿ.ಎಂ.ಎಸ್.ಪುಟ್ಟಣ್ಣ ಎಂಬುವವರು ಆ ದಿನ ನಡೆದದ್ದನ್ನು ಕಣ್ಣಿಗೆ ಕಟ್ಟುವಂತೆ ಬರೆದುಕೊಟ್ಟಿರುವ ಅಪರೂಪದ ಪತ್ರ ನನ್ನ ಬಳಿ ಇದೆ. ಇದರಿಂದ ಶಿಡ್ಲಘಟ್ಟದಲ್ಲಿ ಗಾಂಧೀಜಿಯವರ ಹೆಜ್ಜೆಗುರುತನ್ನು ದಾಖಲಿಸಬಹುದು’ ಎನ್ನುತ್ತಾರೆ ಇತಿಹಾಸತಜ್ಞ ವೇಮಗಲ್ ಸೋಮಶೇಖರ್.

‘1936, ಮೇ 31 ರಂದು ಬೆಳಗ್ಗೆ 4.20ಕ್ಕೆಲ್ಲಾ ಪ್ರಾರ್ಥನೆ ನಡೆಯಿತು. ಬೆಟ್ಟದ ಮೇಲೆ ನೂರಾರು ಜನರು ಸೇರಿದ್ದರು. ಮಹಾತ್ಮ ಗಾಂಧೀಜಿ, ಕಸ್ತೂರಬಾ, ಬ್ರಿಜ್ ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಮಹದೇವ್ ದೇಸಾಯಿ, ಮಣಿಬೆನ್ ಪಟೇಲ್, ಕಾಂತಿಲಾಲ್ ಗಾಂಧಿ ಅವರ ತಂಡವನ್ನು ಕೋಲಾರ ಜಿಲ್ಲೆಯ ಹರಿಜನಸೇವಕ ಸಂಘದ ಅಧ್ಯಕ್ಷ ಕೆ.ಚಂಗಲರಾಯರೆಡ್ಡಿ ಕರೆದುಕೊಂಡು ಮೆಟ್ಟಿಲ ಹಾದಿಯಲ್ಲಿ ಬೆಟ್ಟವನ್ನಿಳಿದರು. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ ಮುಂತಾದ ಸ್ಥಳಗಳಲ್ಲಿ ಗಾಂಧೀಜಿ ಹರಿಜನ ನಿಧಿ ಸಂಗ್ರಹಣೆ ಹಾಗೂ ಹರಿಜನ ಅಭಿವೃದ್ಧಿ ಯಾತ್ರೆಯ ಉದ್ದೇಶ, ಅಸ್ಪೃಶ್ಯರೆಂದು ಪರಿಗಣಿಸಲ್ಪಡುತ್ತಿದ್ದ ದಲಿತರಿಗೆ ಸಮಾನ ಹಕ್ಕುಗಳನ್ನು ನೀಡಬೇಕು ಎಂಬುದನ್ನು ತಮ್ಮ ಭಾಷಣದಲ್ಲಿ ಗಾಂಧೀಜಿ ತಿಳಿಸಿದರು. ಹರಿಜನರನ್ನು ಸಮಾಜದಲ್ಲಿ ಸಮಾನರಾಗಿ ಕಾಣುವವರೆಗೂ ಶಾಂತಿ, ನೆಮ್ಮದಿ ಇರುವುದಿಲ್ಲ’ ಎಂಬುದನ್ನು ವಿವರಿಸಿದರು.

‘ಚಿಕ್ಕಬಳ್ಳಾಪುರದಿಂದ ಚಿಂತಾಮಣಿಗೆ ಹೋಗುವಾಗ ಮಾರ್ಗದಲ್ಲಿ ಶಿಡ್ಲಘಟ್ಟಕ್ಕೆ ಗಾಂಧೀಜಿ ಬಂದರು. ಶಿಡ್ಲಘಟ್ಟ ಪುರಸಭೆ ಉಪಾಧ್ಯಕ್ಷರಾಗಿದ್ದ ಬಿ.ವಿರೂಪಾಕ್ಷಪ್ಪ ನಗರದ ಮುಖ್ಯ ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ಹಸಿರು ತೋರಣಗಳಿಂದ ದೊಡ್ಡ ಚಪ್ಪರ ಹಾಕಿಸಿದ್ದರು. ಮಧ್ಯಾಹ್ನ ಗಾಂಧೀಜಿಯವರಿದ್ದ ಕಾರು ಬಿ.ವಿರೂಪಾಕ್ಷಪ್ಪರ ಮನೆ ಮುಂದೆ ಬಂದು ನಿಂತಿತು. ಕೆ.ಚಂಗಲರಾಯರೆಡ್ಡಿ ಅವರು ಗಾಂಧೀಜಿಯವರಿಗೆ ಬಿ.ವಿರೂಪಾಕ್ಷಪ್ಪ ಮತ್ತು ಅಮಲ್ದಾರ್ ಸೂರ್ಯನಾರಾಯಣ ರಾವ್ ಅವರನ್ನು ಪರಿಚಯಿಸಿದರು. ಆಗಿನ ಕಾಲದ ಒಂದು ಸವರನ್ (8 ಗ್ರಾಂ) ತೂಕದ ಒಂದು ರೂಗಳ ನೂರು ಬೆಳ್ಳಿ ನಾಣ್ಯಗಳ ಗಂಟನ್ನು ಬಿ.ವಿರೂಪಾಕ್ಷಪ್ಪನವರು ತಾವು ಓದಿಸುತ್ತಿದ್ದ ಬಾಲಕ ಎಂ.ಎಸ್.ಪುಟ್ಟಣ್ಣನ ಕೈಯಿಂದ ಗಾಂಧೀಜಿಗೆ ಕೊಡಿಸಿದರು. ಗಾಂಧೀಜಿಯವರು ನಗುನಗುತ್ತಾ ನಮಸ್ಕರಿಸಿದ ಬಾಲಕನಿಗೆ ‘ಜೀತೇ ರಹೋ ಬೇಟ’ ಎಂದು ಆಶೀರ್ವದಿಸಿದರು’.

ಗಾಂಧೀಜಿ ಪ್ರಭಾವದಿಂದ ಪ್ರೌಢಶಾಲೆ ಕಟ್ಟಿಸಿಕೊಟ್ಟ ಬಿ.ವಿರೂಪಾಕ್ಷಪ್ಪ ಅವರ ಸೇವೆಗಾಗಿ ಮೈಸೂರು ಸಂಸ್ಥಾನದಿಂದ ಜಯಚಾಮರಾಜ ಒಡೆಯರ್ ಅವರು ನೀಡಿದ್ದ ಗಂಡುಬೇರುಂಡ ಲಾಂಛನವಿರುವ ಬಂಗಾರದ ಪದಕ

‘ಶಿಡ್ಲಘಟ್ಟದ ಪುರಸಭೆಯಿಂದ ಮಾನಪತ್ರವನ್ನು ಗಾಂಧೀಜಿಯವರಿಗೆ ಅರ್ಪಿಸಿದರು. ಮೈಸೂರು ಮಹಾರಾಜರ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಗಾಂಧೀಜಿಯವರು ಭೇಟಿ ಮಾಡಿರುವುದರಿಂದ ಪಟ್ಟಣದ ಜನರು ಸಂತಸಗೊಂಡಿದ್ದಾರೆ. ಮಹಾರಾಜರು ಮತ್ತು ದಿವಾನರ ನ್ಯಾಯಪರ ಆಡಳಿತದಲ್ಲಿ ಗ್ರಾಮಾಭಿವೃದ್ಧಿ, ಗುಡಿಕೈಗಾರಿಕೆ ಅಭಿವೃದ್ಧಿ, ಹಿಂದುಳಿದ ವರ್ಗಗಳಿಗೆ ಸೌಲಭ್ಯ, ಗ್ರಾಮಗಳಿಗೆ ಸೌಕರ್ಯಗಳು ಉತ್ತಮವಾಗಿದ್ದು, ಎಲ್ಲವೂ ಗಾಂಧೀಜಿಯವರ ಆಶಯದಂತೆಯೇ ನಡೆಯುತ್ತಿದೆ. ಮಹಾತ್ಮರ ಧ್ಯೇಯೋದ್ದೇಶ, ಆದರ್ಶದಂತೆಯೇ ನಮ್ಮ ಮಹಾರಾಜರ ಆಡಳಿತವಿದೆ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯೆನಿಸುತ್ತಿದೆ’ ಎಂಬುದಾಗಿ ಮಾನಪತ್ರದಲ್ಲಿ ಬರೆಯಲಾಗಿತ್ತು. ಗಾಂಧೀಜಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಗಾಂಧೀಜಿಯವರು ಬಿ.ವಿರೂಪಾಕ್ಷಪ್ಪನವರಿಗೆ ಹಸ್ತಲಾಘವನ್ನು ಕೊಟ್ಟು ಹೊರಟು ಎಲ್ಲರಿಗೂ ವಂದಿಸಿ, ‘ಬೋಲೋ ಭಾರತ ಮಾತಾ ಕೀ ಜೈ’ ಎಂದರು. ನೆರೆದಿದ್ದ ಜನಸಮೂಹ, ‘ಮಹಾತ್ಮಾ ಗಾಂಧೀಕಿ ಜೈ’ ಎಂದು ಜಯಕಾರ ಮಾಡಿದರು. ಗಾಂಧೀಜಿಯವರಿದ್ದ ಕಾರು ಚಿಂತಾಮಣಿ ಕಡೆಗೆ ಹೊರಟಿತು’ ಎಂದು ವೇಮಗಲ್ ಸೋಮಶೇಖರ್ ಅವರು ತಮ್ಮಲ್ಲಿದ್ದ ದಾಖಲೆಗಳಿಂದ ವಿವರಿಸಿದರು.

ಶಿಡ್ಲಘಟ್ಟದಲ್ಲಿ ಪ್ರೌಢಶಾಲೆ

‘ಗಾಂಧೀಜಿಯವರದ್ದು ಮೇರು ವ್ಯಕ್ತಿತ್ವ. ಅವರನ್ನು ಕಂಡವರು ಓದಿದವರು ಅವರಿಂದ ಪ್ರಭಾವಿತರಾಗಿದ್ದಾರೆ. ಶಿಡ್ಲಘಟ್ಟಕ್ಕೆ ಗಾಂಧೀಜಿ ಬಂದಾಗ ನೂರು ರೂಗಳನ್ನು ದೇಣಿಗೆ ನೀಡಿದ ಬಿ.ವಿರೂಪಾಕ್ಷಪ್ಪನವರು ಅವರಿಂದ ಪ್ರಭಾವಿತರಾದರು. ಆಗ ಶಿಡ್ಲಘಟ್ಟದಲ್ಲಿ ಪ್ರೌಢಶಾಲೆ ಇರಲಿಲ್ಲ. ಚಿಕ್ಕಬಳ್ಳಾಪುರಕ್ಕೆ ಹೋಗಲು ರೈಲು ಹತ್ತುವ ಧಾವಂತದಲ್ಲಿ ವಿದ್ಯಾರ್ಥಿಯೊಬ್ಬ ರೈಲಿನಡಿ ಸಿಕ್ಕು ಮೃತಪಟ್ಟನಂತೆ. ನಮ್ಮೂರಿನಲ್ಲಿ ಪ್ರೌಢಶಾಲೆ ಇದ್ದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದುಕೊಂಡು ಪ್ರೌಢಶಾಲೆ ನಡೆಸಲು ಬಿ.ವಿರೂಪಾಕ್ಷಪ್ಪ ಅವರು ನಾಲ್ಕು ವರ್ಷ ತಮ್ಮ ಮನೆಯನ್ನೇ ಬಿಟ್ಟುಕೊಟ್ಟರು. ನಂತರ 13 ಎಕರೆ ಒಂದು ಗುಂಟೆ ಜಮೀನನ್ನು ಖರೀದಿಸಿ ಕಟ್ಟಡಕ್ಕಾಗಿ ₹30 ಸಾವಿರ ನೀಡಿ ನಂತರ ಸರ್ಕಾರಕ್ಕೆ ದಾನ ಮಾಡಿದರು. ಅದರಿಂದಾಗಿ ಶಿಕ್ಷಣ ಕ್ರಾಂತಿ ಶಿಡ್ಲಘಟ್ಟದಲ್ಲಾಯಿತು. ಕನ್ನಡದ ಮೊಟ್ಟ ಮೊದಲ ನಿರ್ದೇಶಕಿ ಪ್ರೇಮಾ ಕಾರಂತ್ ಅವರು ತಮ್ಮ ಆತ್ಮಕಥನದಲ್ಲಿ ವಿರೂಪಾಕ್ಷಪ್ಪ ಪ್ರೌಢಶಾಲೆ ನನ್ನ ವಿದ್ಯೆ ಸಾಧನೆಗೆ ನೆರವಾಯಿತು ಎಂದು ಬರೆದಿರುವರು’ ಎಂದು ವೇಮಗಲ್ ಸೋಮಶೇಖರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.