ADVERTISEMENT

ಗೌರಿಬಿದನೂರು | ಬಿರು ಬಿಸಿಲಿಗೆ ಕಮರಿದ ಮಾವು: ಬೆಳೆಗಾರರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 5:08 IST
Last Updated 29 ಏಪ್ರಿಲ್ 2024, 5:08 IST
ಬಿಸಿಲಿನ ಕಾರಣಕ್ಕೆ ಉದುರುತ್ತಿರುವ ಮಾವಿನ ಹೀಚುಗಳು
ಬಿಸಿಲಿನ ಕಾರಣಕ್ಕೆ ಉದುರುತ್ತಿರುವ ಮಾವಿನ ಹೀಚುಗಳು   

ಗೌರಿಬಿದನೂರು: ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಬಿರು ಬಿಸಿಲು ನಿರಾಸೆ ಮೂಡಿಸಿದೆ. ಈ ಮಳೆ ಕೊರತೆಯಿಂದಾಗಿ ಮಾವಿನ ಹೂವು ಒಣಗಿದೆ.  ಕಡಿಮೆ ಪ್ರಮಾಣದಲ್ಲಿ ಮಾತ್ರ ಫಸಲು ಸಿಗುವ ಸಾಧ್ಯತೆ ಇದೆ.

ಇದಲ್ಲದೆ ತಾಲ್ಲೂಕಿನ ರೈತರಿಗೆ ಈಗಾಗಲೇ ಮಾವಿನ ಬೆಳೆ ಬಗ್ಗೆ ನಿರಾಸಕ್ತಿ ಮೂಡಿದೆ.  ಇತರೆ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ.

ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವನ್ನು ಬೇಸಿಗೆಯ ಕಾವು ಇನ್ನಿಲ್ಲದಂತೆ ಕಾಡುತ್ತಿದೆ. ತಾಲ್ಲೂಕಿನಲ್ಲಿ ತೋತಾಪುರಿ, ರಸಪುರಿ, ಮಲ್ಲಿಕಾ, ಬಾದಾಮಿ ಮುಂತಾದ ಹಲವು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಈ ವರ್ಷದ ಉತ್ಪಾದನೆ ಶೇ 30ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ.

ADVERTISEMENT

ಸಕಾಲಕ್ಕೆ ಮಳೆ ಬಾರದಿರುವುದು ಮತ್ತು ಬಿಸಿಲಿನ ತಾಪ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

‌ಕಳೆದ ವರ್ಷದ ಫಸಲಿಗೆ ಅತಿಯಾದ ಮಳೆ ಸಮಸ್ಯೆ ಉಂಟು ಮಾಡಿತ್ತು. ಆದರೆ, ಈ ಬಾರಿ ಮಾರ್ಚ್ ಆರಂಭದಲ್ಲಿ ಮಾವು ಉತ್ತಮವಾಗಿ ಹೂ ಬಿಟ್ಟ ಕಾರಣ ‌‌ಉತ್ತಮ ಫಸಲಿನ ನಿರೀಕ್ಷೆ ಮಾಡಲಾಗಿತ್ತು.ಆದರೆ, ಹೂ ಬಿಟ್ಟ ನಂತರ ಅಗತ್ಯ ಮಳೆ ತಾಲ್ಲೂಕಿನಲ್ಲಿ ಆಗಲಿಲ್ಲ. ಇದರಿಂದ ಮಾವಿಗೆ ಹಿನ್ನಡೆಯಾಗಿದೆ.

ಮಾವಿನ ಫಸಲು ಕಡಿಮೆಯಾಗಲಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಈಗಾಗಲೇ ಅಂದಾಜಿಸಿದ್ದಾರೆ. ಮಳೆ ಕೊರತೆ ಮುಂದುವರಿದರೆ ಮತ್ತಷ್ಟು ಫಸಲು ಕೂಡ ಇಳಿಕೆ ಕಾಣುವ ಸಾಧ್ಯತೆ ಇದೆ.

ತಾಲ್ಲೂಕಿನಲ್ಲಿ ಮಾವು ಬೆಳೆಗಾರರಿಗೆ ಹವಾಮಾನ ವೈಪರೀತ್ಯ ತಲೆಬಿಸಿ ತಂದೊಡ್ಡುತ್ತಿದೆ. 2022 ರಲ್ಲಿ ಸ್ವಲ್ಪ ಮಟ್ಟಿಗೆ ಮಾವಿನ ಫಸಲು ಕೈ ಸೇರಿತ್ತು. ಅದನ್ನು ಹೊರತುಪಡಿಸಿ 2020, 2021 ರಲ್ಲಿ ಕೊರೊನಾ ಹಿನ್ನೆಲೆ ಮಾವು ಮಾರುಕಟ್ಟೆ ಕಳೆದುಕೊಂಡಿತ್ತು. ತದನಂತರ 2023 ರಲ್ಲಿ ವ್ಯಾಪಕ ಮಳೆಯ ಕಾರಣ ಫಸಲಿಗೆ ಪೆಟ್ಟು ಬಿದ್ದಿತ್ತು.

ಈ ಬಾರಿ ತಾಲ್ಲೂಕಿನಲ್ಲಿ ಕೃಷಿ ಸಂಪೂರ್ಣವಾಗಿ ಮಳೆ ಕೊರತೆಯಿಂದ ನೆಲಕಚ್ಚಿದೆ. ಈಗಾಗಲೇ ರಾಗಿ, ಜೋಳ ಬೆಳೆಗಳಿಗೆ ಹೊಡೆತ ಬಿದ್ದಿದೆ. ಇದಲ್ಲದೆ ಅಡಿಕೆ ಸಸಿಗಳು ಹಲವೆಡೆ ಒಣಗಿವೆ. ಬಾಳೆಗೂ ಕೂಡ ಹಾನಿಯಾಗುತ್ತಿದೆ. ಹೂ ಗಳ ಇಳುವರಿ ಇಲ್ಲದೇ ಹೂಗಳ ದರ ಗಗನಕ್ಕೇರಿದೆ. ಅಂತರ್ಜಲ ಮಟ್ಟ ಕೂಡ ಕುಸಿತ ಕಾಣುತ್ತಿದೆ.

ಇದೀಗ ಮಾವಿಗೂ ಕೂಡ ಇದೇ ಪರಿಸ್ಥಿತಿ ಇದೆ. ಮಳೆ ಬಂದರೆ ಮಾತ್ರ ಮಾವಿನ ಫಸಲು ಸ್ವಲ್ಪಮಟ್ಟಿಗೆ ಕೈ ಸೇರುವ ಸಾಧ್ಯತೆ ಇದೆ. ಉಳಿದಂತೆ ಬಿಸಿಲ ಪ್ರಭಾವಕ್ಕೆ ಫಸಲು ಮತ್ತಷ್ಟು ಕುಸಿಯುವ ಸಾಧ್ಯತೆಯೇ ಹೆಚ್ಚು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಮಾರುಕಟ್ಟೆಯಲ್ಲಿ ಮಾವಿಗೆ ಎಷ್ಟರ ಮಟ್ಟಿಕೆ ಬೇಡಿಕೆ ಹಾಗೂ ದರ ಇರುತ್ತದೆ ಎಂದು ಕಾದು ನೋಡಬೇಕಿದೆ. 

ಕಾಯಿ ಕಚ್ಚುವ ಹಂತದಲ್ಲಿ ಬೇಸಿಗೆಯ ತಾಪ ವಿಪರೀತವಾದ ಕಾರಣಕ್ಕೆ ಹೂವು ಮತ್ತು ಹೀಚುಗಳು ನೆಲ ಕಚ್ಚುತ್ತಿವೆ. ಕೆಲವೆಡೆ ಈಚು ಹಾಗೂ ಸಣ್ಣ ಗಾತ್ರದ ಕಾಯಿಗಳೂ ಉದುರುತ್ತಿವೆ. ಬಿಸಿಲು ಹೆಚ್ಚಿದಷ್ಟೂ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ. 

ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲಿನಲ್ಲಿ ಬಿಸಿಲಿನ ಕಾರಣಕ್ಕೆ ಮಾವಿನ ಹೀಚುಗಳು ಉದುರಿರುವುದು 

ಆರಂಭದಲ್ಲಿ ಮಾವಿನ ಹೂಗಳ ತುಂಬ ಚೆನ್ನಾಗಿದ್ದವು. ಆದರೆ, ಬಿಸಿಲ ತಾಪ ಹೆಚ್ಚಾಗಿದ್ದರಿಂದ ಶೇ 90ರಷ್ಟು ಹೂ ಉದುರಿದೆ. ಕಾಯಿ ಕಟ್ಟುವ ಪ್ರಮಾಣ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಮಾವು ಬೆಳೆಗಾರ ತಾಲ್ಲೂಕಿನ ಅನೂಡಿ ಗ್ರಾಮದ ಅಜಿತ್ ರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.