ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆಯ ಸಸ್ಯ ಕ್ಷೇತ್ರಗಳಿಂದ ರೈತರು ಮಾವಿನ ಸಸಿಗಳನ್ನು ಹೆಚ್ಚು ಖರೀದಿಸಿ ನಾಟಿ ಮಾಡುತ್ತಿದ್ದಾರೆ. ಅದರಲ್ಲಿಯೂ ಹೈಬ್ರಿಡ್ ತಳಿಯ ‘ಮಲ್ಲಿಕಾ’ ಮಾವಿನ ಸಸಿಗೆ ದಾಖಲೆಯ ಬೇಡಿಕೆ ಬಂದಿದೆ.ಸಸ್ಯ ಕ್ಷೇತ್ರದ ಅಧಿಕಾರಿಗಳ ನಿರೀಕ್ಷೆಗೂ ಮೀರಿ ‘ಮಲ್ಲಿಕಾ’ ಸಸಿಗಳು ಮಾರಾಟವಾಗಿವೆ.
ಖಾಸಗಿ ನರ್ಸರಿಗಳಲ್ಲಿನ ಮಾರಾಟವನ್ನು ಗಣನೆಗೆ ತೆಗೆದುಕೊಂಡರೆ ‘ಮಲ್ಲಿಕಾ’ಗೆ ಬೇಡಿಕೆ ಮತ್ತಷ್ಟು ಹೆಚ್ಚುತ್ತದೆ.
ಪ್ರಸಕ್ತ ವರ್ಷ ಜಿಲ್ಲೆಯ ಸಸ್ಯ ಕ್ಷೇತ್ರಗಳಿಂದ 20 ಸಾವಿರಕ್ಕೂ ಹೆಚ್ಚು ‘ಮಲ್ಲಿಕಾ’ ಹೈಬ್ರಿಡ್ ತಳಿಯ ಮಾವಿನ ಸಸಿಗಳು ಈಗಾಗಲೇ ಮಾರಾಟವಾಗಿವೆ. ಈಗ ಸಸ್ಯ ಕ್ಷೇತ್ರದಲ್ಲಿ 5 ಸಾವಿರದಷ್ಟು ಸಸಿಗಳು ಮಾತ್ರ ಉಳಿದಿವೆ. ಮಾವು ಹೊರತು ಪಡಿಸಿ ತೆಂಗಿಗೂ ಬೇಡಿಕೆ ಇದೆ.
ಸಾಮಾನ್ಯವಾಗಿ ಬಯಲು ಸೀಮೆಯ ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ ತೆಂಗಿನ ನಾಟಿ ಕಡಿಮೆ ಆದರೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಬೆಂಗಳೂರಿಗರು ಎನಿಸಿದ್ದ ಜಿಲ್ಲೆಯ ರೈತರು ತೆಂಗಿನ ಸಸಿಗಳನ್ನು ನಾಟಿ ಮಾಡಲು ಮನಸ್ಸು ಮಾಡಿದ್ದರು. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ತೆಂಗಿನ ಸಸಿಗಳ ನಾಟಿ ಕಡಿಮೆ ಇದೆ. ಆದರೂ ಕಲ್ಪವೃಕ್ಷ ಬೆಳೆಸಲು ಜಿಲ್ಲೆಯ ರೈತರು ಮನಸ್ಸು ಮಾಡಿದ್ದಾರೆ.
ಈ ಬಾರಿ ಮಲ್ಲಿಕಾ ಮಾವಿಗೆ ಹೆಚ್ಚು ಬೆಲೆ ದೊರೆತಿದೆ. ಶ್ರೀನಿವಾಸಪುರ ಮಾವು ಮಾರುಕಟ್ಟೆಯಲ್ಲಿ ಒಂದು ಟನ್ ಮಲ್ಲಿಕಾ ಮಾವು ₹ 60 ಸಾವಿರದವರೆ ಮಾರಾಟವಾಗಿದೆ. ಮಾವಿನ ಹಣ್ಣಿಗೆ ಪ್ರತಿ ವರ್ಷ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ಜಿಲ್ಲೆಯ ರೈತರು ಮಲ್ಲಿಕಾ ಮಾವಿಗೆ ಮನಸೋತಿದ್ದಾರೆ.
ಕಳೆದ ವರ್ಷವೂ ಉತ್ತಮ ಆದಾಯ:ಕಳೆದ ವರ್ಷವೂ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿತ್ತು. ಕೊರೊನಾ ಸಂದರ್ಭದಲ್ಲಿ ನಗರಗಳಿಂದ ಹಳ್ಳಿಗಳಿಗೆ ಬಂದ ಜನರು ತೋಟಗಾರಿಕಾ ಬೆಳೆಗಳತ್ತ ಗಮನವಹಿಸಿದ್ದರು. ಈ ಕಾರಣದಿಂದ ಜನರು ತೋಟಗಾರಿಕಾ ಕ್ಷೇತ್ರಗಳಿಂದ ಸಸಿಗಳನ್ನು ಖರೀದಿಸಿ ನಾಟಿ ಮಾಡಿದ್ದರು.
ಉತ್ತಮ ಮಳೆ ಹಿನ್ನೆಲೆಯಲ್ಲಿ ಸಸ್ಯಕ್ಷೇತ್ರದಲ್ಲಿ ಸಸಿಗಳು ಹೆಚ್ಚು ಮಾರಾಟವಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಆದಾಯವೂ ಹೆಚ್ಚುತ್ತಿದೆ. 2018–19ನೇ ಸಾಲಿನಲ್ಲಿ ₹ 12.96 ಲಕ್ಷ, 2019–20ನೇ ಸಾಲಿನಲ್ಲಿ ₹ 11.96 ಲಕ್ಷ,2020–21ರಲ್ಲಿ ₹ 13 ಲಕ್ಷ ಆದಾಯ ಮಾರಾಟದಿಂದ ಇಲಾಖೆಗೆ ದೊರೆತಿದೆ.
ತೋಟಗಾರಿಕಾ ಇಲಾಖೆಯ ಸಸ್ಯಕ್ಷೇತ್ರ, ಸೊಪ್ಪಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ, ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಮತ್ತು ಗುಡಿಬಂಡೆ ತಾಲ್ಲೂಕಿನ ಪಸುಪಲೋಡು ಸಸ್ಯ ಕ್ಷೇತ್ರಗಳಲ್ಲಿ ಇಲಾಖೆ ಪ್ರಮುಖವಾಗಿ ಸಸಿಗಳನ್ನು ಬೆಳೆಸುತ್ತಿದೆ.
‘ಒಂದು ಎಕರೆಯಲ್ಲಿ ಮಲ್ಲಿಕಾ ಮಾವಿನ ತಳಿಗಳನ್ನು ನಾಟಿ ಮಾಡಿದರೆ ಅವು ಮೂರು ವರ್ಷಕ್ಕೆ ಫಲ ಬಿಡುತ್ತದೆ. ಆಗ ವರ್ಷಕ್ಕೆ ಸರಾಸರಿ ₹ 1 ಲಕ್ಷ ಆದಾಯ ಪಡೆಯಬಹುದು. ನಂತರದ ಮೂರ್ನಾಲ್ಕು ವರ್ಷಗಳಲ್ಲಿ ಆದಾಯ ಹೆಚ್ಚುತ್ತದೆ. ಈ ಕಾರಣದಿಂದ ಜಿಲ್ಲೆಯಲ್ಲಿ ಪ್ರಮುಖವಾಗಿ ಮಲ್ಲಿಕಾ ಮಾವಿನ ತಳಿಗಳ ನಾಟಿ ಹೆಚ್ಚಿದೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುವರು. 15 ಸಾವಿರ ತೆಂಗಿನ ಸಸಿಗಳು, 20 ಸಾವಿರ ನೇರಳೆ, ಐದು ಸಾವಿರ ಕರಿಬೇವು, ಐದು ಸಾವಿರ ನಿಂಬೆ ಸಸಿಗಳುಸದ್ಯ ಸಸ್ಯ ಕ್ಷೇತ್ರಗಳಲ್ಲಿ ಇವೆ.
ಮಲ್ಲಿಕಾ ಮಾವಿನ ಸಸಿಗೆ ಹೊರ ಜಿಲ್ಲೆಗಳಿಂದಲೂ ಬೇಡಿಕೆ ಇದೆ. ಮಂಡ್ಯ ಜಿಲ್ಲೆಯವರು 3 ಸಾವಿರ ಸಸಿಗಳನ್ನು ಖರೀದಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಸಸ್ಯಕ್ಷೇತ್ರದ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳೆದ ವರ್ಷ ಮತ್ತು ಈ ವರ್ಷ ಮಳೆ ಉತ್ತಮವಾಯಿತು. ಕೋವಿಡ್ ಕಾರಣದಿಂದ ಜನರು ಹಳ್ಳಿಗಳಿಗೆ ಮರಳಿದರು. ತೋಟಗಾರಿಕೆಯ ಬೆಳೆಗಳತ್ತ ಒಲವು ತೋರಿದರು. ಮಾವು ಅಥವಾ ಬೇರೆ ತೋಟಗಾರಿಕಾ ಸಸಿಗಳನ್ನು ಆರೇಳು ತಿಂಗಳು ಆರೈಕೆ ಮಾಡಿದರೆ ವರ್ಷದಲ್ಲಿ ಒಂದಿಷ್ಟು ಆದಾಯ ದೊರೆಯುತ್ತದೆ ಎನ್ನುವುದು ಜನರಿಗೆ ತಿಳಿದಿದೆ. ಈ ಕಾರಣದಿಂದ ಸಸಿಗಳ ನಾಟಿ ಹೆಚ್ಚಿದೆ ಎಂದರು.
ಮಳೆಗಾಲದಲ್ಲಿ ತಂಪಾದ ವಾತಾವರಣ ಇರುತ್ತದೆ. ಆ ಸಂದರ್ಭದಲ್ಲಿ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ.ಕೆಲವು ರೈತರು ಖಾಸಗಿ ನರ್ಸರಿಗಳಿಂದ ದಾಳಿಂಬೆ, ಡ್ರ್ಯಾಗನ್ ಪ್ರೋಟ್, ಬಟರ್ ಪ್ರೋಟ್ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.