ಚಿಕ್ಕಬಳ್ಳಾಪುರ: ಜಿಲ್ಲೆಯ ಆರೂ ತಾಲ್ಲೂಕುಗಳನ್ನು ಸರ್ಕಾರ ತೀವ್ರ ಬರ ಪೀಡಿತ ಎಂದು ಘೋಷಿಸಿದೆ. ಬರದ ಕಾರಣದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೇಸಿಗೆ ರಜೆ ಅವಧಿಯಲ್ಲಿಯೂ ಬಿಸಿಯೂಟ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈ ಬರಗಾಲದ ಬಿಸಿಯೂಟ ಸೇವನೆಗೆ ನೋಂದಾಯಿತ ಮಕ್ಕಳ ಪೈಕಿ ಶೇ 40ರಷ್ಟು ಮಂದಿ ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ.
ಬೇಸಿಗೆಯ ರಜೆಯ ದಿನಗಳಲ್ಲಿಯೂ ಬಿಸಿಯೂಟಕ್ಕೆ ಬರುತ್ತೇವೆ ಎಂದು ಹೇಳಿದ ಮಕ್ಕಳು ಹಳ್ಳಿಗಳಲ್ಲಿ ಜಾತ್ರೆಗಳು, ನೆಂಟರು, ಅಜ್ಜಿ ಮನೆಗಳಿಗೆ ಹೋಗಿರುವುದು, ಪ್ರವಾಸ, ಸಂಬಂಧಿಗಳ ಊರಿಗೆ ಹೋಗಿರುವುದು ಹೀಗೆ... ಬೇರೆ ಬೇರೆ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ಬಿಸಿಯೂಟ ಸೇವಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡುವರು.
ಬರಪೀಡಿತ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಎದುರಾಗಬಾರದು ಎಂದು ಪ್ರಧಾನಮಂತ್ರಿ ಪೋಷಣ್ ಶಕ್ತಿ-ನಿರ್ಮಾಣ ಯೋಜನೆಯಡಿ ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆಯಲ್ಲಿ ಬಿಸಿಯೂಟ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 59,961 ಮಕ್ಕಳು ಬಿಸಿಯೂಟ ಸೇವಿಸುವುದಾಗಿ ಒಪ್ಪಿಗೆ ಕೊಟ್ಟಿದ್ದಾರೆ. ಆದರೆ, ಒಪ್ಪಿಗೆ ಕೊಟ್ಟವರಲ್ಲಿ ಶೇ 40ರಷ್ಟು ಮಕ್ಕಳಷ್ಟೇ ಬಿಸಿಯೂಟ ಸೇವಿಸುತ್ತಿದ್ದಾರೆ.
ಬಿಸಿಯೂಟ ಮೇಲ್ವಿಚಾರಣೆಗೆ ನೋಡಲ್ ಶಿಕ್ಷಕರನ್ನು ಸಹ ನೇಮಿಸಲಾಗಿದೆ. ಆ ಪ್ರಕಾರ ಬಾಗೇಪಲ್ಲಿ ತಾಲ್ಲೂಕಿನಲ್ಲಿ 6, ಚಿಕ್ಕಬಳ್ಳಾಪುರ 5, ಚಿಂತಾಮಣಿ 14, ಗೌರಿಬಿದನೂರು ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ತಲಾ ಒಬ್ಬರನ್ನು ನೋಡಲ್ ಶಿಕ್ಷಕರನ್ನು ನೇಮಿಸಲಾಗಿದೆ.
ಸಾಮಾನ್ಯ ದಿನಗಳಲ್ಲಿ ಜಿಲ್ಲೆಯಲ್ಲಿ 85 ಸಾವಿರಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸೇವಿಸುವರು. ಈಗ ಒಪ್ಪಿಗೆ ಸೂಚಿಸಿದವರಿಗಷ್ಟೇ ಬಿಸಿಯೂಟ ಕೊಡಲಾಗುತ್ತಿದೆ.
ಬೇಸಿಗೆ ರಜಾ ಅವಧಿಯ ಬಿಸಿಯೂಟ ನೀಡಲು ಜಿಲ್ಲೆಯಲ್ಲಿ 1,309 ಕೇಂದ್ರಗಳನ್ನು ಆರಂಭದಲ್ಲಿಯೇ ಗುರುತಿಸಲಾಗಿದೆ. ಬಿಸಿಯೂಟಕ್ಕೆ 1,989 ಸಿಬ್ಬಂದಿ ಸಹ ಕೆಲಸ ಮಾಡುತ್ತಿದ್ದಾರೆ. ಬೇರೊಂದು ಗ್ರಾಮದ ಬೇರೆ ಸರ್ಕಾರಿ ಅಥವಾ ಅನುದಾನಿತ ಶಾಲೆಗಳ ಮಕ್ಕಳು ರಜೆ ಅವಧಿಯಲ್ಲಿ ಬೇರೊಂದು ಕಡೆ ಇದ್ದರೆ ಅವರು ಅಲ್ಲಿಯೇ ಬಿಸಿಯೂಟ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.