ADVERTISEMENT

ಚಿಂತಾಮಣಿ | ಬರಪೀಡಿತ ಪ್ರದೇಶದಲ್ಲಿ ಹಾಲಿನ ಹೊಳೆ

ದಿನನಿತ್ಯ 1.32 ಲಕ್ಷ ಲೀಟರ್ ಕ್ಷೀರ ಸಂಗ್ರಹ

ಎಂ.ರಾಮಕೃಷ್ಣಪ್ಪ
Published 25 ಜುಲೈ 2024, 6:32 IST
Last Updated 25 ಜುಲೈ 2024, 6:32 IST
ಚಿಂತಾಮಣಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದವೊಂದರಲ್ಲಿ ಹಾಲಿನ ಶೇಖರಣೆ ಮಾಡುತ್ತಿರುವುದು
ಚಿಂತಾಮಣಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದವೊಂದರಲ್ಲಿ ಹಾಲಿನ ಶೇಖರಣೆ ಮಾಡುತ್ತಿರುವುದು   

ಚಿಂತಾಮಣಿ: ಸರ್ಕಾರ ತಾಲ್ಲೂಕನ್ನು ಕಳೆದ ವರ್ಷ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿತ್ತು. ಈ ವರ್ಷವೂ ಸಮರ್ಪಕವಾಗಿ ಮಳೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲೂ ತಾಲ್ಲೂಕಿನಲ್ಲಿ ಹಾಲಿನ ಸಮೃದ್ಧಿ ಕಂಡುಬಂದಿದೆ. ಸರಾಸರಿ ದಿನನಿತ್ಯ 1.32 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ.

ಕಳೆದ ವರ್ಷ ಬರ ಆವರಿಸಿದರೂ ಹೈನೋದ್ಯಮದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಖಾಸಗಿ ಸಂಸ್ಥೆಗಳ ಪೈಪೋಟಿ ನಡುವೆಯೂ ಪ್ರಸಕ್ತ ಸಾಲಿನಲ್ಲಿ ಹಾಲಿನ ಉತ್ಪಾದನೆ ಅಧಿಕಗೊಂಡಿದೆ. ಕಳೆದ ವರ್ಷ ಈ ತಿಂಗಳಲ್ಲಿ ಒಂದು ಲಕ್ಷ ಲೀಟರ್ ಉತ್ಪಾದನೆ ಆಗುತ್ತಿತ್ತು. ಕೋಚಿಮುಲ್ ಮಾಹಿತಿಯ ಪ್ರಕಾರ ತಾಲ್ಲೂಕಿನಲ್ಲಿ 235 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅದರಲ್ಲಿ 22 ಮಹಿಳಾ ಸಂಘಗಳಿವೆ.

ಜುಲೈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 1.32 ಲಕ್ಷ ಲೀಟರ್ ಹಾಲಿನ ಸಂಗ್ರಹಣೆ ಆಗುತ್ತಿದೆ. ಒಕ್ಕೂಟವು ಹೈನೋದ್ಯಮಕ್ಕೆ ನೀಡಿದ ಉತ್ತೇಜನ ಮತ್ತು ವಿವಿಧ ರೀತಿಯ ಪ್ರೋತ್ಸಾಹ, ಹಾಲು ಉತ್ಪಾದಕರ ಸಹಕಾರ ಸಂಘಗಳ ಬಲವರ್ಧನೆಯಿಂದ ಬರಪೀಡಿತ ತಾಲ್ಲೂಕಿನಲ್ಲೂ ಹಾಲಿನ ಹೊಳೆ ಹರಿಯುತ್ತಿದೆ.

ADVERTISEMENT

ಅವಿಭಜಿತ ಕೋಲಾರ ಜಿಲ್ಲೆ ‘ಸಿಲ್ಕ್, ಮಿಲ್ಕ್, ಗೋಲ್ಡ್’ ಎಂದು ಪ್ರಸಿದ್ಧಿಯಾಗಿತ್ತು. ಕೆಜಿಎಫ್ ಚಿನ್ನದ ಗಣಿ ಸ್ಥಗಿತಗೊಂಡು ದಶಕಗಳೇ ಕಳೆದಿವೆ. ಬೆಲೆ ಕುಸಿತ ಮತ್ತು ವಿವಿಧ ರೋಗಗಳಿಂದ ರೇಷ್ಮೆ ಉದ್ಯಮವೂ ಕುಸಿದಿದೆ. ಬಹುತೇಕ ರೇಷ್ಮೆ ಬೆಳೆಗಾರರು ತರಕಾರಿ ಬೆಳೆ ಕಡೆ ಆಸಕ್ತಿ ತೋರುತ್ತಿದ್ದಾರೆ.

ತಾಲ್ಲೂಕಿನ ಸಹಕಾರ ಸಂಘಗಳ ಹಾಲನ್ನು ನಗರದ ಶೀಥಲ ಕೇಂದ್ರಕ್ಕೆ ಸಾಗಣೆ ಮಾಡಿ ಅಲ್ಲಿಂದ ಕೋಲಾರ ಮತ್ತು ಬೆಂಗಳೂರಿನ ಮದರ್ ಡೇರಿಗೆ ಸಾಗಿಸಲಾಗುತ್ತಿತ್ತು.
ಶೇಖರಿಸಿದ ಹಾಲನ್ನು ತ್ವರಿತಗತಿಯಲ್ಲಿ ಮುಖ್ಯ ಡೇರಿಗೆ ಕಳುಹಿಸುವ ಉದ್ದೇಶದಿಂದ ಒಕ್ಕೂಟವು ಹಾಲು ಶೀಥಲೀಕರಣ ಕೇಂದ್ರವನ್ನು ವಿಕೇಂದ್ರೀಕರಣಗೊಳಿಸಿ ತಾಲ್ಲೂಕಿನಲ್ಲಿ 40 ಬಲ್ಕ್ ಮಿಲ್ಕ್ ಸೆಂಟರ್ ಸ್ಥಾಪಿಸಿದೆ.

ಡೇರಿಗಳಿಗೆ ಸಮೀಪದಲ್ಲೇ ಬಿಎಂಸಿ ಸ್ಥಾಪಿಸಿರುವುದರಿಂದ ಹಾಲಿನ ತಾಜಾತನ ರಕ್ಷಿಸಿ ಗುಣಮಟ್ಟ ಕಾಪಾಡಲಾಗುತ್ತಿದೆ. ಉತ್ಪಾದಕರಿಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಒಕ್ಕೂಟದ ಮೇಲ್ವಿಚಾರಕ ಎಂ.ಎಸ್.ನಾರಾಯಣಸ್ವಾಮಿ ಹೇಳಿದರು.

ನವೆಂಬರ್-ಡಿಸೆಂಬರ್‌ನಲ್ಲಿ ಹಾಲು ಉತ್ಪಾದಕರಿಗೆ ಉಚಿತವಾಗಿ ಜೋಳದ ಬೀಜ ಒಕ್ಕೂಟದಿಂದ ವಿತರಿಸಲಾಗಿತ್ತು. ಮೇವು ಬೆಳೆಸಲು ಎಕರೆಗೆ ₹3 ಸಾವಿರ ಪ್ರೋತ್ಸಾಹ ಧನ ನೀಡಲಾಗಿತ್ತು.

ತಾಲ್ಲೂಕಿನಲ್ಲಿ 22 ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘಗಳಿವೆ. ಅವುಗಳಲ್ಲಿ ಮಹಿಳೆಯರದ್ದೇ ಕಾರುಬಾರು. ಎಲ್ಲ ಸಿಬ್ಬಂದಿ ಮಹಿಳೆಯರೇ ಇರುತ್ತಾರೆ. ಹಸುಗಳನ್ನು ಖರೀದಿಸಲು ಸದಸ್ಯೆಯರಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ.

ಚಿಂತಾಮಣಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದವೊಂದರಲ್ಲಿ ಹಾಲಿನ ಶೇಖರಣೆ ಮಾಡುತ್ತಿರುವುದು
ಉತ್ಪಾದಕರಿಗೆ ಪ್ರೋತ್ಸಾಹಧನ ಬಾಕಿ ಉಳಿಸಿಕೊಳ್ಳದೆ ಪ್ರತಿ ತಿಂಗಳು ನೀಡಬೇಕು. ಹಸುಗಳಿಗೆ ಬರುವ ಸಣ್ಣಪುಟ್ಟ ಕಾಯಿಲೆಗೆ ಔಷಧಿ ನೀಡಿ ಆರೈಕೆ ಮಾಡಲು ರೈತರಿಗೆ ತರಬೇತಿ ನೀಡಬೇಕು. ಪ್ರಥಮ ಚಿಕಿತ್ಸಾ ಕಿಟ್ ನೀಡಬೇಕು
ವಿಶ್ವನಾಥ್ ಹಾಲು ಉತ್ಪಾದಕ
ಸೌಲಭ್ಯ ನೀಡಿದ್ದರಿಂದ ಹಾಲಿನ ಉತ್ಪಾದನೆ ಹೆಚ್ಚಳ
ಕಳೆದ ವರ್ಷಕ್ಕಿಂತ ಲೀಟರ್‌ಗೆ ₹5 ಹೆಚ್ಚಾಗಿದೆ. ಬೇಸಿಗೆಯಲ್ಲೇ ಜೋಳದ ಬೀಜ ವಿತರಿಸಿದ್ದರಿಂದ ಹಸಿರುಮೇವು ಹೆಚ್ಚಿ ಉತ್ಪಾದನೆ ಆಯಿತು. ಒಕ್ಕೂಟದಿಂದ ಉತ್ಪಾದಕರಿಗೆ ಹಾಲು ಕರೆಯುವ ಯಂತ್ರ ಮೇವು ಕಟಾವು ಯಂತ್ರ ಹಸು ಮತ್ತು ಉತ್ಪಾದಕರಿಗೂ ಶೇ 50ರಷ್ಟು ಸಬ್ಸಿಡಿಯಲ್ಲಿ ವಿಮೆ ಮತ್ತಿತರ ಸೌಲಭ್ಯ ನೀಡಿದ್ದರಿಂದ ಹಾಲಿನ ಉತ್ಪಾದನೆ ಹೆಚ್ಚಳ ಸಾಧ್ಯವಾಗಿದೆ ಎಂದು ಚಿಂತಾಮಣಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಿ.ಎಂ.ಮಹೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.