ADVERTISEMENT

ರೈತರ ಹಿತಾಸಕ್ತಿಗಾಗಿ ಹಾಲಿನ ಖರೀದಿ ದರ ಇಳಿಕೆ: ಡಾ.ಎಂ.ಸಿ. ಸುಧಾಕರ್

ಕ್ಷೀರ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:59 IST
Last Updated 11 ಜುಲೈ 2024, 15:59 IST
ಚಿಂತಾಮಣಿಯಲ್ಲಿ ಕೋಚಿಮುಲ್ ಹಮ್ಮಿಕೊಂಡಿದ್ದ ಕ್ಷೀರ ಮಹೋತ್ಸವ 2024 ನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು.
ಚಿಂತಾಮಣಿಯಲ್ಲಿ ಕೋಚಿಮುಲ್ ಹಮ್ಮಿಕೊಂಡಿದ್ದ ಕ್ಷೀರ ಮಹೋತ್ಸವ 2024 ನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು.   

ಚಿಂತಾಮಣಿ: ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೋಚಿಮುಲ್ ತಾತ್ಕಾಲಿಕವಾಗಿ ಹಾಲಿನ ಬೆಲೆಯನ್ನು ಲೀಟರ್‌ಗೆ ₹ 2 ಕಡಿತ ಮಾಡಿದೆ. ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದು ಸಲ್ಲದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಚಿಂತಾಮಣಿ ಉಪ ವಿಭಾಗ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಶ್ರಯದಲ್ಲಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ಕ್ಷೀರ ಮಹೋತ್ಸವ 2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರ ಉಳಿಯಬೇಕಾದರೆ ಸಂದರ್ಭಕ್ಕೆ ತಕ್ಕಂತೆ ಬೆಲೆ ಏರಿಕೆ ಮತ್ತು ಇಳಿಕೆಯ ನಿರ್ಧಾರವನ್ನು ಜವಾಬ್ದಾರಿಯುತ ಆಡಳಿತ ಮಂಡಳಿ ಕೈಗೊಳ್ಳಬೇಕಾಗುತ್ತದೆ. ತಾಲ್ಲೂಕಿನಲ್ಲಿ 1.35 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಒಕ್ಕೂಟದ ಹಾಲು ಉತ್ಪಾದನೆ ಒಮ್ಮಲೇ ಏಕಾಏಕಿ 8 ಲಕ್ಷದಿಂದ 12.56 ಲಕ್ಷಕ್ಕೆ ಏರಿಕೆಯಾಗಿದೆ. ರೈತರಿಂದ ಹಾಲು ತಿರಸ್ಕರಿಸಬಾರದು, ಒಕ್ಕೂಟಕ್ಕೂ ನಷ್ಟವಾಗಬಾರದು ಎನ್ನುವ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ADVERTISEMENT

10 ಲಕ್ಷ ಲೀಟರ್‌ಗೆ ಮಾರುಕಟ್ಟೆ ಇದೆ. ಉಳಿದ 2 ಲಕ್ಷ ಲೀಟರ್ ಉಳಿತಾಯವಾಗುತ್ತಿದೆ. ಹಾಲಿನ ಪೌಡರ್ ಮಾಡಿ ಮಾರಾಟ ಮಾಡಿದರೆ ನಷ್ಟವಾಗುತ್ತದೆ. ಹಾಲಿನ ಪುಡಿ ತಯಾರಿಸಲು ₹ 330 ಖರ್ಚಾಗುತ್ತದೆ. ₹ 210 ಮಾರಾಟ ಬೆಲೆ ಇದೆ. ಹಿಂದೆ ಹೆಚ್ಚಿನ ಹಾಲು ಉತ್ಪಾದನೆ ಆಗುವ ಸಂದರ್ಭಗಳಲ್ಲಿ ವಾರಕ್ಕೆ ಒಂದು ದಿನ ಹಾಲು ರಜೆಯನ್ನು ನೀಡುತ್ತಿದ್ದರು. ಅದರಿಂದ ರೈತರಿಗೆ ನಷ್ಟವಾಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಒಕ್ಕೂಟದ ಮೇಲಿದೆ. ಎಲ್ಲ ಆಯಾಮಗಳಿಂದ ಚಿಂತನೆ ನಡೆಸಿ, ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳುವವರೆಗೂ ದರ ಇಳಿಕೆ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಉತ್ಪಾದಕರು ರಾಜಕೀಯ ಮಾತುಗಳಿಗೆ ಮರುಳಾಗದೇ ವಾಸ್ತವಾಂಶ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಪ್ರಭಾವಿ ಮುಖಂಡರು ಸತ್ಯ ಮತ್ತು ವಾಸ್ತವಾಂಶವನ್ನು ಮರೆಮಾಚಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಕೋಚಿಮುಲ್ ವಿಭಜನೆಯ ಕುರಿತು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.‌

ಕೋಚಿಮುಲ್ ಅಧ್ಯಕ್ಷ ನಂಜೇಗೌಡ ಮಾತನಾಡಿ, ಕಾಲಕಾಲಕ್ಕೆ ತಕ್ಕಂತೆ ಹಾಲಿನ ಬೆಲೆ ಏರಿಕೆ ಮತ್ತು ಇಳಿಕೆ ಹಿಂದಿನಿಂದಲೂ ಎಲ್ಲ ಕಾಲದಲ್ಲೂ ಇತ್ತು. ಹಾಲನ್ನು ಮಾರಾಟ ಮಾಡಿಯೇ ಉತ್ಪಾದಕರಿಗೆ ಬಟವಾಡೆ ಮಾಡಬೇಕಾಗುತ್ತದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಒಕ್ಕೂಟವು 50 ಎಕರೆ ಜಾಗದಲ್ಲಿ ₹ 65 ಕೋಟಿ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗುತ್ತಿದೆ. ಇದರಿಂದ ಒಕ್ಕೂಟಕ್ಕೆ ತಿಂಗಳಿಗೆ ₹ 2 ಕೋಟಿ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ ಎಂದರು.

ಹಾಲಿನ ಬೆಲೆ ಇಳಿಕೆ ತಾತ್ಕಾಲಿಕವಾಗಿದೆ. ಹೊಸ ಮಾರುಕಟ್ಟೆ ಹುಡುಕಿಕೊಂಡು ಮತ್ತೆ ಹಾಲಿನ ದರವನ್ನು ಏರಿಕೆ ಮಾಡಲಾಗುವುದು. ರಾಜ್ಯದ ಎಲ್ಲ ಒಕ್ಕೂಟಗಳಿಗಿಂತ ಹೆಚ್ಚಿನ ದರವನ್ನು ನೀಡಲಾಗುವುದು. ಕೋಚಿಮುಲ್ ವಿಭಜನೆಗೆ ಯಾವುದೇ ಅಡ್ಡಿ ಇಲ್ಲ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕರುಗಳ ಪ್ರದರ್ಶನ, ಪಶು ಆಹಾರ ಬಳಕೆ, ಹುಲ್ಲಿನ ಬೀಜಗಳು ಹಾಗೂ ಮೇವಿನ ಬೆಳೆಗಳ ಕ್ಷೇತ್ರೋತ್ಸವ, ಶ್ವಾನ, ಕುರಿ, ಮೇಕೆಗಳ ಪ್ರದರ್ಶನ ಆಯೋಜಿಸಲಾತ್ತು. ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ, ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು, ಕೃಷಿಕ ಸಮಾಜದ ಅಧ್ಯಕ್ಷ ಎಂ.ಗೋವಿಂದಪ್ಪ, ನಗರಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀನಾಥ ಬಾಬು, ಒಕ್ಕೂಟದ ಅಧಿಕಾರಿಗಳು, ಹಾಲಿನ ಉತ್ಪಾದಕರು, ರೈತರು ಭಾಗವಹಿಸಿದ್ದರು

ಚಿಂತಾಮಣಿಯಲ್ಲಿ ಗುರುವಾರ ನಡೆದ ಕ್ಷೀರ ಮಹೋತ್ಸವದಲ್ಲಿ ನಡೆದ ಕರುಗಳ ಪ್ರದರ್ಶನ
ಚಿಂತಾಮಣಿಯಲ್ಲಿ ಗುರುವಾರ ನಡೆದ ಕ್ಷೀರ ಮಹೋತ್ಸವದಲ್ಲಿ ನಡೆದ ಕರುಗಳ ಪ್ರದರ್ಶನ

‘ಕೋಚಿಮುಲ್ ವಿಭಜನಗೆ ವಿರೋಧವಿಲ್ಲ’

ಕೋಚಿಮುಲ್ ವಿಭಜನೆಗೆ ಖಂಡಿತ ನಮ್ಮ ವಿರೋಧವಿಲ್ಲ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ಹಾಲು ಪ್ಯಾಕಿಂಗ್ ಘಟಕವಿಲ್ಲ. ಒಮ್ಮೆಲೆ ವಿಭಜೆಯಾದರೆ ಹೇಗೆ ಪ್ಯಾಕಿಂಗ್ ಮಾಡುವುದು? ಎಲ್ಲ ಸೌಲಭ್ಯಗಳನ್ನು ಒದಗಿಸಿ ವೈಜ್ಞಾನಿಕವಾಗಿ ವಿಭಜನೆ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದರು. ₹ 125 ಕೋಟಿ ವೆಚ್ಚದಲ್ಲಿ ಪ್ಯಾಕಿಂಗ್ ಘಟಕ ಸ್ಥಾಪನೆ ಆಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ 10 ಎಕರೆ ಜಾಗವನ್ನು ಒಕ್ಕೂಟಕ್ಕೆ ಹಸ್ತಾಂತರಿಸಲು ಮಂಜೂರಾತಿ ದೊರೆತಿದೆ. ಎಲ್ಲ ಪೂರ್ವಭಾವಿ ತಯಾರಿಗಳನ್ನು ಕೈಗೊಂಡು ಈಗ ವಿಭಜನೆ ಮಾಡುತ್ತಿದ್ದೇವೆ. ಜುಲೈ23 ರಂದು ಬಾಗೇಪಲ್ಲಿಯಲ್ಲಿ ಸರ್ವಸದಸ್ಯರ ಸಭೆ ನಡೆಯಲಿದ್ದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.