ADVERTISEMENT

ಸಂಘರ್ಷ ಮಾಡಿಕೊಂಡರೆ ನಾವು ಎಲ್ಲದಕ್ಕೂ ಸಿದ್ಧ: ಡಾ.ಎಂ.ಸಿ.ಸುಧಾಕರ್

ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಹರಿಹಾಯ್ದ ಸಚಿವ ಡಾ.ಎಂ.ಸಿ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 12:49 IST
Last Updated 10 ಜುಲೈ 2024, 12:49 IST
<div class="paragraphs"><p>ಡಾ.ಎಂ.ಸಿ.ಸುಧಾಕರ್</p></div>

ಡಾ.ಎಂ.ಸಿ.ಸುಧಾಕರ್

   

ಚಿಕ್ಕಬಳ್ಳಾಪುರ: ಅಭಿವೃದ್ಧಿ ವಿಚಾರವಾಗಿ ಸಂಸದರಾಗಿ ಅವರ ಸಹಕಾರ ಅಗತ್ಯ. ಆದರೆ ಅವರು ಸಂಘರ್ಷ ಮಾಡಿಕೊಂಡರೆ ನಾವೂ ಎಲ್ಲದಕ್ಕೂ ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌, ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಹರಿಹಾಯ್ದರು. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವರಿಗೆ ಮತಿಭ್ರಮಣೆ ಆಗಿದೆ. ನಡವಳಿಕೆ ಮತ್ತು ಹೇಳಿಕೆಗಳನ್ನು ನೋಡಿದರೆ ಮೆದುಳಿನ ಮೇಲೆ ಪರಿಣಾಮ ಬೀರಿದಂತೆ ಕಾಣುತ್ತದೆ. ಅವರ ಆಡಳಿತದ ಅವಧಿಯಲ್ಲಿ ಏನಾಗಿದೆ ಎನ್ನುವುದು ಗೊತ್ತು. ನೀವು ಏನು ಸಾಧನೆ ಮಾಡಿದ್ದೀರಿ, ನಾವು ಒಂದು ವರ್ಷದಲ್ಲಿ ಏನು ಮಾಡಿದ್ದೇವೆ ಎನ್ನುವುದನ್ನು ಜನರ ಮುಂದಿಡಲು ಸಿದ್ಧ ಎಂದು ಸವಾಲು ಹಾಕಿದರು.

ADVERTISEMENT

ಎಲ್ಲರಿಗೂ ಉಪವಾಸ, ಹೋರಾಟ ಮಾಡಲು ಸ್ವಾತಂತ್ರ್ಯವಿದೆ. ವಿರೋಧ ಪಕ್ಷವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ನಿತ್ಯ ಕೋಚಿಮುಲ್‌ನಲ್ಲಿ 8 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈಗ 12.10 ಲಕ್ಷಕ್ಕೆ ಹೆಚ್ಚಿದೆ. ನಿತ್ಯ ಎರಡು ಲಕ್ಷ ಲೀಟರ್ ಹಾಲು ಉಳಿಯುತ್ತಿದೆ. ಒಂದು ಕೆ.ಜಿ ಹಾಲಿನ ಪೌಡರ್ ತಯಾರಿಸಲು ₹ 330 ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕೆ.ಜಿ ಪೌಡರ್ ಬೆಲೆ ₹ 210 ಇದೆ. ಈ ಎಲ್ಲ ಕಾರಣದಿಂದ  ಒಕ್ಕೂಟಕ್ಕೆ ನಿತ್ಯ ₹ 20 ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ ಎಂದರು.

ಬೇರೆ ಒಕ್ಕೂಟಗಳಿಗೆ ಹೋಲಿಸಿದರೆ ಕೋಚಿಮುಲ್ ರೈತರಿಗೆ ಹೆಚ್ಚಿನ ದರ ಕೊಡುತ್ತಿತ್ತು. ಆದರೆ ಉತ್ಪಾದನೆ ಹೆಚ್ಚಳದಿಂದ ದರ ತಾತ್ಕಾಲಿಕವಾಗಿ ಇಳಿಕೆ ಆಗಿದೆ. ಒಂದೊಂದು ಸಂದರ್ಭದಲ್ಲಿ ಸಂಸ್ಥೆಗಳು ಉಳಿಯಬೇಕಾದಾಗ ಇಳಿಕೆ ಅನಿವಾರ್ಯ ಎಂದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಅವೈಜ್ಞಾನಿಕವಾಗಿ ಕೋಚಿಮುಲ್ ವಿಭಜಿಸಿದರು. ಅವರ ಹಿಂಬಾಲಕರೊಬ್ಬರಿಗೆ ಅಧಿಕಾರ ಕೊಡಿಸಬೇಕು ಎನ್ನುವುದಷ್ಟೇ  ಉದ್ದೇಶವಾಗಿತ್ತು. ಚಿಕ್ಕಬಳ್ಳಾಪುರದ ನಿರ್ದೇಶಕರು ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ದರ್ಪ ತೋರಿದರು. ಅವರ ತೆವಲಿಗೆ ಮಾತ್ರ ಕೋಚಿಮುಲ್ ವಿಭಜಿಸಿದರು ಎಂದು ಆರೋಪಿಸಿದರು.

ನಮ್ಮ ಕುಟುಂಬ ಎಷ್ಟು ವರ್ಷ ರಾಜಕೀಯ ಮಾಡಿದೆ, ನಮ್ಮ ಆಸ್ತಿಗಳು ಎಷ್ಟು ಎನ್ನುವುದನ್ನು ಬಹಿರಂಗಪಡಿಸಲು ಸಿದ್ಧ. ಆದರೆ ಸಂಸದರು ಎಲ್ಲಿ ಮನೆ ಕಟ್ಟಿದ್ದಾರೆ. ಯಾವ ವ್ಯವಹಾರ ಮಾಡಿದ್ದಾರೆ. ಅವರ ಆದಾಯದ ಮೂಲವೇನು ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಡಾ.ಎಂ.ಸಿ.ಸುಧಾಕರ್ ಸವಾಲು ಹಾಕಿದರು.

ನಾನು ಸರ್ಕಾರಿ ಜಮೀನು ಹೊಡೆದುಕೊಂಡಿದ್ದರೆ ಕಾನೂನು ಪ್ರಕಾರ ಕ್ರಮವಾಗುತ್ತದೆ. ಆದರೆ ಯಾವುದೂ ಇತ್ಯರ್ಥವಾಗಿಲ್ಲ. ಇವರು ಸರ್ಕಾರಿ ವ್ಯವಸ್ಥೆಯನ್ನೇ ಲೂಟಿ ಹೊಡೆದವರು ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.