ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ರಚನೆಯಾಗಿ ಒಂದೂವರೆ ವರ್ಷ ಕಳೆದಿದೆ. ಆದರೆ ಸಚಿವ ಸಂಪುಟದ ಅರ್ಧದಷ್ಟೂ ಸಚಿವರು ಜಿಲ್ಲೆಗೆ ಇಂದಿಗೂ ಭೇಟಿ ನೀಡಿಲ್ಲ. ಭೇಟಿ ನೀಡಿದ್ದವರಲ್ಲಿ ಬೆರಳೆಣಿಕೆಯಷ್ಟು ಸಚಿವರು ಮಾತ್ರ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ!
ನೀರಾವರಿ, ತೋಟಗಾರಿಕೆ, ಕೈಗಾರಿಕೆ, ಗಣಿಗಾರಿಕೆ ಸೇರಿದಂತೆ ಸಾಲು ಸಾಲು ಸಮಸ್ಯೆಗಳು ಜಿಲ್ಲೆಯನ್ನು ಬಾಧಿಸುತ್ತಿವೆ. ಈ ಸಮಸ್ಯೆಗಳ ಬಗ್ಗೆ ತಿಳಿದು ಅವುಗಳಿಗೆ ಪರಿಹಾರ ಸೂಚಿಸಬೇಕಾದ ಸಚಿವರು ಮಾತ್ರ ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲಿಟ್ಟಿಲ್ಲ. ಜಿಲ್ಲೆಯಲ್ಲಿ ತಮ್ಮ ಇಲಾಖೆಯಲ್ಲಿ ಯಾವ ಕಾರ್ಯಗಳು ನಡೆದಿವೆ. ಯಾವೆಲ್ಲ ಕಾರ್ಯಗಳು ನಡೆಯಬೇಕಿದೆ. ಇಲಾಖೆಯ ಆಗುಹೋಗುಗಳೇನು ಎಂದು ಖುದ್ದು ತಿಳಿಯುವ ಮನಸ್ಸು ಮಾಡಿಲ್ಲ.
ಪ್ರಮುಖ ಖಾತೆಗಳ ಸಚಿವರೇ ಒಂದೂವರೆ ವರ್ಷವಾರೂ ಜಿಲ್ಲೆಗೆ ಬರುವ ಮನಸ್ಸು ಮಾಡಿಲ್ಲ. ಜಿಲ್ಲೆಗೆ ವಿವಿಧ ಇಲಾಖೆಗಳ ಸಚಿವರು ಭೇಟಿ ನೀಡಿದ್ದರೆ ಅವರಿಗೆ ಸಮಸ್ಯೆಗಳ ವಸ್ತುಸ್ಥಿತಿ ಅರಿವಾಗುತ್ತಿತ್ತು. ಅಭಿವೃದ್ಧಿಯ ವಿಚಾರವಾಗಿಯೂ ಅನುಕೂಲವಾಗುತ್ತಿತ್ತು. ರಾಜಧಾನಿ ಬೆಂಗಳೂರಿಗೆ ಚಿಕ್ಕಬಳ್ಳಾಪುರ ದೂರವೇನೂ ಇಲ್ಲ. ಆದರೆ ಸಚಿವರಿಗೆ ಮಾತ್ರ ದೂರ ಎನ್ನುವಂತಿದೆ.
ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊರತುಪಡಿಸಿ ಇಲ್ಲಿಯವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ವಿವಿಧ ಇಲಾಖೆಗಳ ಎಂಟರಿಂದ ಹತ್ತು ಸಚಿವರು ಮಾತ್ರ ಭೇಟಿ ನೀಡಿದ್ದಾರೆ. ಇವರಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ್ದು ಕೆಲವರು! ಕೆಲವರು ಖಾಸಗಿ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದಾರೆ.
ಕಂದಾಯ ಸಚಿವ ಕೃಷ್ಣಬೈರೇಗೌಡ, ಪೌರಾಡಳಿತ ಸಚಿವ ರಹೀಂ ಖಾನ್, ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಜಿಲ್ಲಾಡಳಿತ ಭವನದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ಸಣ್ಣ ನೀರಾವರಿ ಸಚಿವ ಬೋಸರಾಜು ಅವರು ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಯ ಪರಿಶೀಲನೆ ಹಿನ್ನೆಲೆಯಲ್ಲಿ ಕಂದವಾರ ಕೆರೆಗೆ ಭೇಟಿ ನೀಡಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶಗಳು ಇವೆ. ಆದರೆ ಪ್ರವಾಸೋದ್ಯಮ ಸಚಿವರು ಮಾತ್ರ ಜಿಲ್ಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ.
ನಂದಿ ವೈದ್ಯಕೀಯ ಕಾಲೇಜಿನ ಕಾಮಗಾರಿ ವಿಳಂಬ ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾದ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಕಾಲೇಜಿನ ತರಗತಿಗಳು ನಡೆಯುತ್ತಿದ್ದ ಮುದ್ದೇನಹಳ್ಳಿಯ ವಿಟಿಯು ಕ್ಯಾಂಪಸ್ ಹಾಗೂ ನೂತನ ವೈದ್ಯಕೀಯ ಕಾಲೇಜಿಗೆ ಎರಡು ಬಾರಿ ಭೇಟಿ ನೀಡಿದ್ದಾರೆ.
ರೇಷ್ಮೆ ಸಚಿವ ಕೆ.ವೆಂಕಟೇಶ್, ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಸ್ಥಳ ಪರಿಶೀಲನೆಗೆ ಭೇಟಿ ನೀಡಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಖಾಸಗಿ ಕಾರ್ಯಕ್ರಮದ ಭಾಗವಾಗಿ ಸತ್ಯಸಾಯಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಜಿಲ್ಲೆಯ ಶಾಸಕರು ವಿವಿಧ ಇಲಾಖೆಗಳ ಸಚಿವರಿಗೆ ಮನವಿ ನೀಡಬೇಕು. ಜಿಲ್ಲೆಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದರೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಬೇಕು ಎನ್ನುವ ಸ್ಥಿತಿ ಇದೆ.
ತೀವ್ರ ಬರ, ನೀರಾವರಿ ವಿಚಾರದಲ್ಲಿ ನಿರ್ಲಕ್ಷ್ಯ, ಕೈಗಾರಿಕೀಕರಣದಿಂದ ಬಹುದೂರ... ಹೀಗೆ ಸಾಲು ಸಾಲು ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಿವೆ. ಆದರೆ ಸಂಬಂಧಿಸಿದ ಇಲಾಖೆಗಳ ಸಚಿವರು ಮಾತ್ರ ಜಿಲ್ಲೆಯಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಬೇಕು. ಕಾರ್ಯಕ್ರಮಗಳಿಗೆ ವೇಗ ನೀಡಬೇಕು ಎನ್ನುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.