ಬಾಗೇಪಲ್ಲಿ: ಕುಟುಂಬಸ್ಥರ ಹೆಸರಿನಲ್ಲಿ ಅಕ್ರಮವಾಗಿ ಖಾತೆ ತೆರೆದು ರೈತರ ಹಾಗೂ ಸ್ತ್ರೀಶಕ್ತಿ ಗುಂಪುಗಳ ₹30 ಲಕ್ಷ ಲೂಟಿ ಮಾಡಿದ ಆರೋಪದ ಮೇಲೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬಾಗೇಪಲ್ಲಿ ಶಾಖೆಯ ವ್ಯವಸ್ಥಾಪಕ ಚೇತನ್ ವಿರುದ್ಧ ತಳಗವಾರ ಟಿ.ಎಸ್.ಪ್ರತಾಪ್‍ಕುಮಾರ್ ಎಂಬವರು ದೂರು ನೀಡಿದ್ದಾರೆ.
ಇದರ ತನಿಖೆಗೆ ಬೆಂಗಳೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರನ್ನು ನೇಮಕ ಮಾಡಿದ್ದಾರೆ.
ಬಾಗೇಪಲ್ಲಿ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ಚೇತನ್ ತಮ್ಮ ತಾಯಿ ಕೌಸಲ್ಯ ಹಾಗೂ ಭಾವಬೈದುನ ವಿಕಾಸ್ ಹೆಸರಿನಲ್ಲಿ ಅಕ್ರಮವಾಗಿ ಖಾತೆ ತೆರೆದಿದ್ದಾರೆ. ಶಾಖೆಯಲ್ಲಿ ಬೋಗಸ್ ವೋಚರ್ ಸೃಷ್ಠಿಸಿ ₹30 ಲಕ್ಷ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ರೈತರ ಹಾಗೂ ಮಹಿಳಾ ಸಂಘಗಳ ಸಾಲದ ಬಡ್ಡಿ ರಿಯಾಯಿತಿಯ ₹30 ಲಕ್ಷ ಜಮಾ ಮಾಡಿದ್ದಾರೆ. ಮಾರ್ಗಾನುಕುಂಟೆ ಮತ್ತು ಸೋಮನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘದ ಸಿಬ್ಬಂದಿ ನವೀನ್ ಹಾಗೂ ಪಿ.ವೆಂಕಟರವಣಪ್ಪ ಹೆಸರಿನಲ್ಲಿ ಖಾತೆ ತೆರೆದು ಲಕ್ಷಾಂತರ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಸಹಕಾರ ಸಂಘಗಳ ಜಂಟಿ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.