ಬಾಗೇಪಲ್ಲಿ: ತಾಲ್ಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ಸೋಮವಾರ ಗರುಡಾದ್ರಿ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಕೋವಿಡ್ ಮುನ್ನಚ್ಚರಿಕೆ ಕ್ರಮಗಳ ನಡುವೆ ಸರಳವಾಗಿ ನಡೆಯಿತು.
ಕೋವಿಡ್-19 ವೈರಸ್ ಸೋಂಕು ಹರಡದಂತೆ ಸರ್ಕಾರ 500 ಮಂದಿಗೆ ಹೆಚ್ಚು ಜನ ಸೇರದಂತೆ ಜಾತ್ರೆಗಳಿಗೆ ನಿರ್ಬಂಧ ಹೇರಲಾಗಿದೆ. ತಹಶೀಲ್ದಾರ್ ಡಿ.ಎ.ದಿವಾಕರ್ ಜಾತ್ರೆ ರದ್ದುಗೊಳಿಸಿ ಆದೇಶ ಮಾಡಿದ್ದರು. ಆದರೆ ದೇವಾಲಯದಲ್ಲಿ ಹಾಗೂ ರಥೋತ್ಸವದ ಬಳಿ ಅರ್ಚಕರು ವಿವಿಧ ಪೂಜಾ ಕೈಂಕಾರ್ಯಗಳು ಮಾಡಿದರು.
ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಮುಖ್ಯದ್ವಾರದಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರಿಗೆ ಹಾಗೂ ಒಳ-ಹೊರಾಂಗಣದಲ್ಲಿ ವಿಶೇಷ ಹೂವಿನ ಹಾಗೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶ ಇರಲಿಲ್ಲ. ದೇವಾಲಯದ ಮುಂದೆ ಇರುವ ದೇವರ ವಿಗ್ರಹಗಳಿಗೆ ನೈವೇದ್ಯ ಸಮರ್ಪಿಸಿ, ಪೂಜೆ ಮಾಡುತ್ತಿದ್ದರು.
ಬ್ರಹ್ಮರಥೋತ್ಸವದ ಮುಂದೆ ಸಂಪ್ರದಾಯದಂತೆ ಹೋಮ-ಹವನಗಳು, ಪೂಜಾ ಕೈಂಕಾರ್ಯಗಳು ನಡೆಯಿತು. ತಹಶೀಲ್ದಾರ್ ಡಿ.ಎ.ದಿವಾಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯರವರು ವಿಶೇಷ ಪೂಜೆ ಸಲ್ಲಿಸಿದರು.
ಬಾರದ ಗರುಡ ಪಕ್ಷಿ: ತಾಲ್ಲೂಕಿನ ಮೇರುವಪಲ್ಲಿ ಗ್ರಾಮದ ಆಂಜನೇಯಸ್ವಾಮಿ ದೇವರ ಮೆರವಣಿಗೆ ಮಿಟ್ಟೇಮರಿಗೆ ಬಂದ ನಂತರ ಗರುಡಾದ್ರಿ ಲಕ್ಷ್ಮೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ ಆರಂಭವಾಗುತ್ತಿತ್ತು. ಈ ಬಾರಿ ದೇವರ ಮೆರವಣಿಗೆ ಆಗಲಿಲ್ಲ. ಸರಳವಾದ ಬ್ರಹ್ಮರಥೋತ್ಸವದ ಸುತ್ತಲೂ ಗರುಡಪಕ್ಷಿ ಪ್ರದಕ್ಷಿಣೆ ಹಾಕಿಲ್ಲ. ಇದರಿಂದ ಭಕ್ತರಲ್ಲಿ ನಿರಾಶೆ ಮೂಡಿಸಿತು.
ತಹಶೀಲ್ದಾರ್ ಡಿ.ಎ.ದಿವಾಕರ್ ಮಾತನಾಡಿ, ‘ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಪ್ರದಾಯವಾಗಿ ಬ್ರಹ್ಮರಥೋತ್ಸವ ಆಚರಣೆ ಮಾಡಲಾಗಿದೆ. ದೇವಾಲಯದ ಒಳಗೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದೆ. ದೇವಾಲಯದ ಅರ್ಚಕರ ನೇತೃತ್ವದಲ್ಲಿ ಹೂವಿನ ಅಲಂಕಾರ, ಅಭಿಷೇಕ, ಹೋಮ-ಹವನಗಳನ್ನು ಪೂಜಾ ವಿಧಿ-ವಿಧಾನಗಳನ್ನು ಮಾಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.