ಚಿಕ್ಕಬಳ್ಳಾಪುರ: ‘ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ಇವತ್ತು ನನ್ನನ್ನು ಸೋಲಿಸಲು ಮಹಾಘಟಬಂಧನ್ ಮಾಡಿಕೊಂಡಿದ್ದಾರೆ. ಅವರ ಆಸೆ ಕೈಗೂಡುವುದಿಲ್ಲ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಮೂಲೆ ಮೂಲೆಗೆ ಹೋಗಿ ಮತದಾರರ ಅಪ್ಪಣೆ ಪಡೆಯುವೆ. ಅವರ ತೀರ್ಮಾನವೇ ನನ್ನ ತೀರ್ಮಾನ. ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಅನರ್ಹಗೊಂಡಿರುವ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿಗೆ ಸಹಕಾರ ಸಿಗಲಿಲ್ಲ. ಆತ್ಮವಂಚನೆ ಮಾಡಿಕೊಂಡು ಕಾಟಾಚಾರಕ್ಕೆ ಶಾಸಕನಾಗಿರಲು ಸಾಧ್ಯವಿಲ್ಲ. ಶಾಸಕ ಸ್ಥಾನದ ಜವಾಬ್ದಾರಿ ಅರಿತು ನೋವಿನಿಂದ ರಾಜೀನಾಮೆ ಕೊಟ್ಟಿರುವೆ. ಮುಂಬರುವ ದಿನಗಳಲ್ಲಿ ಪ್ರತಿ ಪಂಚಾಯಿತಿ, ವಾರ್ಡ್‌ಗೆ ಹೋಗಿ ಜನಾಭಿಪ್ರಾಯ ಕೇಳುವೆ. ಮತದಾರರು ಹೇಳುವಂತೆ ಮುಂದುವರಿಯುವೆ’ ಎಂದು ತಿಳಿಸಿದರು.
‘ಮೈತ್ರಿ ಸರ್ಕಾರದಲ್ಲಿ ಎತ್ತಿನಹೊಳೆ ಯೋಜನೆಗೆ ಒಂದೇ ಒಂದು ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿಲ್ಲ. ವೇದಿಕೆ ಮೇಲೆ ನಾವು ಎಷ್ಟು ಬಾರಿ ಸುಳ್ಳಿನ ಭಾಷಣ ಮಾಡಲು ಸಾಧ್ಯ? ವೈದ್ಯಕೀಯ ಕಾಲೇಜಿಗೆ ಕನಿಷ್ಠ ₹50 ಕೋಟಿ ಅನುದಾನ ಕೇಳಿದರೂ ಕುಮಾರಸ್ವಾಮಿ ಇಲ್ಲ ಎಂದರು. ಇದು ನನಗೆ ಬಹಳ ನೋವಾಗಿದೆ. ಎರಡ್ಮೂರು ತಿಂಗಳಲ್ಲಿ ಎಚ್.ಎನ್.ವ್ಯಾಲಿ ಯೋಜನೆಯಲ್ಲಿ ಕಂದವಾರ ಕೆರೆಗೆ ನೀರು ಬರಲಿದೆ’ ಎಂದರು.
‘ನಾವು ಟ್ರಸ್ಟ್ ಮಾಡಿ 15 ಸಾವಿರ ವಿದ್ಯಾರ್ಥಿಗಳ ವಿದ್ಯಾದಾನಕ್ಕೆ ಅನುಕೂಲ ಮಾಡಿದ್ದೇವೆ. ಇದು ಸಮಾಜಮುಖಿ ಕಾರ್ಯವೇ, ಸಮಾಜಘಾತುಕ ಕೆಲಸವೇ? ನಾವೇನು ಬೇರೆಯವಂತೆ ಬಾರ್, ವೈನ್ ತೆರೆದಿಲ್ಲ. ಅಕ್ರಮ ಜಮೀನಿನಲ್ಲಿ ಕಾಂಪ್ಲೆಕ್ಸ್ ಕಟ್ಟಿಲ್ಲ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡದ ಜಿ.ಎಚ್.ನಾಗರಾಜ್, ನವೀನ್ ಕಿರಣ್ ಅವರ ಬಳಿ ನಾನು ನಿಷ್ಠೆ, ನೈತಿಕತೆ ಪಾಠ ಕಲಿಯಬೇಕಿಲ್ಲ’ ಎಂದು ಹೇಳಿದರು.
‘ಇವತ್ತು ಜಿಲ್ಲೆಯಲ್ಲಿ ಎಲ್ಲವೂ ಗೌರಿಬಿದನೂರು ಕೇಂದ್ರೀಕೃತವಾಗುತ್ತಿದೆ. ಜಿಲ್ಲಾ ಪಂಚಾಯಿತಿ, ಕಾಂಗ್ರೆಸ್ ಜಿಲ್ಲಾ ಘಟಕ, ಮಹಿಳಾ ಘಟಕ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರ ಸ್ಥಾನಗಳೆಲ್ಲವೂ ಗೌರಿಬಿದನೂರಿನವರಿಗೆ ಸೇರಿವೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಒಪ್ಪಂದವಾಗಿತ್ತು. ಆದರೆ ರಾಜೀನಾಮೆ ಕೊಟ್ಟವರು ಕೊನೆ ಗಳಿಗೆಯಲ್ಲಿ ವಾಪಸ್ ಪಡೆದುಕೊಂಡರು’ ಎಂದು ತಿಳಿಸಿದರು.
‘ಮಂಚೇನಹಳ್ಳಿ ತಾಲ್ಲೂಕು ಕೇಂದ್ರ ಮಾಡಲು ನಿರಂತರ ಪ್ರಯತ್ನ ಮಾಡುತ್ತಿರುವೆ. ಆ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಸರ್ಕಾರಕ್ಕೆ ವರದಿ ಕಳುಹಿಸುವಂತೆ ಹೇಳಿದ್ದೆ. ಖುದ್ದು ಕಂದಾಯ ಸಚಿವರೇ ವರದಿ ಕೇಳಿದ್ದರು. ಆದರೆ ಶಿವಶಂಕರರೆಡ್ಡಿ ಅವರ ಮಾತು ಕೇಳಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಕಳುಹಿಸಲಿಲ್ಲ. ನಾನು ಮಂಚೇನಹಳ್ಳಿ ತಾಲ್ಲೂಕು ಕೇಂದ್ರ ಮಾಡಲು ಶಪಥ ಮಾಡಿರುವೆ. ಒಂದು ತಿಂಗಳಲ್ಲಿ ವೈದ್ಯಕೀಯ ಕಾಲೇಜಿಗೆ ಭೂಮಿಪೂಜೆ ನೆರವೇರಲಿದೆ. ಕ್ಷೇತ್ರಕ್ಕೆ ನೀರು, ಕೈಗಾರಿಕೆ ತರುವುದು ನನ್ನ ಗುರಿ’ ಎಂದರು.
ಮುಖಂಡ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ‘ನಮ್ಮ ನಾಯಕರಾದ ಸುಧಾಕರ್ ಅವರು ಸಮ್ಮಿಶ್ರ ಸರ್ಕಾರದ ಧೋರಣೆಯನ್ನು ಆರಂಭದಿಂದಲೇ ವಿರೋಧಿಸುತ್ತ ಬಂದಿದ್ದರು. ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆ ನಂತರ ಎಚ್.ಎನ್.ವ್ಯಾಲಿ ಯೋಜನೆ ಅಡಿ ಕ್ಷೇತ್ರಕ್ಕೆ ನೀರು ಹರಿಸುವ ಭರವಸೆ ನೀಡಿದ್ದರು. ಅದನ್ನು ಈಡೇರಿಸಲಿಲ್ಲ. ಅಭಿವೃದ್ಧಿಗೆ ಸಹಕರಿಸಲಿಲ್ಲ. ಇದರಿಂದ ಬೇಸತ್ತು ಸುಧಾಕರ್ ಅವರು ರಾಜೀನಾಮೆ ನೀಡಿದ್ದಾರೆ ವಿನಾ ಅಧಿಕಾರದ ಆಸೆಗಲ್ಲ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಎನ್.ಕೇಶವರೆಡ್ಡಿ, ಪ್ರಕಾಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಅಪ್ಪಾಲು ಮಂಜು, ಲೀಲಾವತಿ ಶ್ರೀನಿವಾಸ್, ಮೋಹನ್, ಪುಷ್ಪಾವತಮ್ಮ, ಕೃಷ್ಣಮೂರ್ತಿ,ತಿರುಮಳಪ್ಪ, ನಾರಾಯಣಪ್ಪ, ಬಾಲಕೃಷ್ಣ, ಮೋಹನ್ ರೆಡ್ಡಿ, ದ್ಯಾವಣ್ಣ, ರಿಯಾಜ಼್, ಸುಬ್ಬಾರೆಡ್ಡಿ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಮ್ಮೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.