ADVERTISEMENT

ಮೋದಿ ನೇತೃತ್ವದಲ್ಲಿ ಸ್ವಾವಲಂಬಿ ಭಾರತ: ಟಿ.ರಾಮಲಿಂಗಪ್ಪ

ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷ ಪೂರ್ಣ: ಬಿಜೆಪಿಯಿಂದ ಮನೆ ಮನೆ ಪ್ರಚಾರ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 11:58 IST
Last Updated 13 ಜೂನ್ 2020, 11:58 IST
ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಾಮಲಿಂಗಪ್ಪ ಅವರು ಮನೆ ಮನೆ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು. 
ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಾಮಲಿಂಗಪ್ಪ ಅವರು ಮನೆ ಮನೆ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು.    

ಚಿಕ್ಕಬಳ್ಳಾಪುರ: ‘ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಸ್ವಾವಲಂಬಿ, ಸದೃಢ, ಸಶಕ್ತ ದೇಶವಾಗಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಾಮಲಿಂಗಪ್ಪ ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಯ ಮೊದಲ ವರ್ಷ ಪೂರ್ಣಗೊಳಿಸಿದ ಪ್ರಯುಕ್ತ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮನೆಮನೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ತಲುಪಿಸುವ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದ ಮಹಾ ಮಾರಿ ಕೋವಿಡ್‌ ಒಡ್ಡಿದ ಪ್ರಬಲ ಸವಾಲನ್ನು ಮೋದಿ ಅವರು ಉತ್ತಮ ರೀತಿಯಲ್ಲಿ ನಿರ್ವಹಿಸು ಜತೆಗೆ ದೇಶದ ಜನರಿಗೆ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುವ ಮೂಲಕ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದ ದೇಶವನ್ನು ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಜನರ ಸಂಕಷ್ಟಗಳ ನಿವಾರಣೆಗೆ ಜಾರಿಗೆ ತಂದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ, ದೂರದರ್ಶಿತ್ವದೊಂದಿಗೆ ಬಿತ್ತಿರುವ ಆತ್ಮ ನಿರ್ಭರ ಭಾರತದ ಚಿಂತನೆಗಳು ದೇಶವನ್ನು ಸಂಕಷ್ಟದಿಂದ ಪಾರು ಮಾಡಬಲ್ಲದೆಂಬ ವಿಶ್ವಾಸ ಮೂಡಿಸಿವೆ’ ಎಂದರು.

‘ಈವರೆಗೆ ಕೇಂದ್ರ ಸರ್ಕಾರ ವಿವಿಧ ಹಂತಗಳಲ್ಲಿ ₹52 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಯಾರು ಕೂಡ ಆಹಾರವಿಲ್ಲದೆ ನರಳಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರಿಗೂ ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿವೆ. ವಲಸೆ ಕಾರ್ಮಿಕರಿಗೆ ಊರು ಸೇರಲು ಶ್ರಮಿಕ್ ರೈಲು, ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ಈಗಾಗಲೇ ಕೇಂದ್ರ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್ ಯೋಜನೆ ಅಡಿ 8.09 ಕೋಟಿ ರೈತರ ಖಾತೆಗೆ ತಲಾ ₹2,000 ಜಮೆ ಮಾಡಿದೆ. ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆ ಅಡಿ 8.30 ಕೋಟಿ ಕುಟುಂಬಗಳಿಗೆ ಉಚಿತವಾಗಿ ಮೂರು ತಿಂಗಳಿಗೆ ಎಲ್‌ಪಿಜಿ ಅಡುಗೆ ಸಿಲಿಂಡರ್‌ ವಿತರಿಸಲಾಗಿದೆ’ ಎಂದು ತಿಳಿಸಿದರು.

‘ಪ್ರಧಾನಮಂತ್ರಿ ಜನಧನ್ ಬ್ಯಾಂಕ್ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮೂರು ತಿಂಗಳ ವರೆಗೆ ಪ್ರತಿ ತಿಂಗಳಿಗೆ ₹500 ರಂತೆ ನೆರವು ನೀಡಲಾಗುತ್ತಿದೆ. ಕಟ್ಟಡ ಮತ್ತು ಇತರೆ ಕ್ಷೇತ್ರದಲ್ಲಿ ದುಡಿಯುವ 3.50 ಕೋಟಿ ನೋಂದಾಯಿತ ಕಾರ್ಮಿಕರಿಗೆ ₹31,000 ಕೋಟಿ ಆರ್ಥಿಕ ಸಹಾಯ ಮೀಸಲಾಗಿಡಲಾಗಿದೆ’ ಎಂದು ಹೇಳಿದರು.

‘ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಶಕ್ತಿ ತುಂಬಲು, ವಲಸೆ ಕಾರ್ಮಿಕರಿಗೆ ಕೆಲಸ ಒದಗಿಸುವ ಉದ್ದೇಶದಿಂದ ₹70 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ದೇಶದಲ್ಲಿರುವ 63 ಲಕ್ಷ ಸ್ವಸಹಾಯ ಸಂಘಗಳಲ್ಲಿ 7 ಕೋಟಿ ಕುಟುಂಬಗಳು ತೊಡಗಿಸಿಕೊಂಡಿವೆ. ಈ ಸಂಘಗಳ ಸಾಲದ ಮೀತಿಯನ್ನು ₹20 ಲಕ್ಷಕ್ಕೆ ಏರಿಸಲಾಗಿದೆ’ ಎಂದರು.

ಮುಖಂಡರಾದ ಡಾ.ಜಿ.ವಿ‌.ಮಂಜುನಾಥ್, ಕೆ.ವಿ.ನಾಗರಾಜ್, ಲಕ್ಷ್ಮೀನಾರಾಯಣ ಗುಪ್ತಾ, ಶಶಿಶೇಖರ್, ಬಿ.ಎಲ್.ಕೇಶವ ಕುಮಾರ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಅವಲಗುರ್ಕಿ ಶ್ರೀನಿವಾಸ್ ರೆಡ್ಡಿ ಮತ್ತು ಮರಳಕುಂಟೆ ಕೃಷ್ಣ ಮೂರ್ತಿ, ಕಾರ್ಯದರ್ಶಿ ಅಶೋಕ್, ಸಂಪರ್ಕ ಅಭಿಯಾನದ ಜಿಲ್ಲಾ ಸಂಯೋಜಕ ನಾಗಭೂಷಣ್, ನಗರ ಮಂಡಲ ಅಧ್ಯಕ್ಷ ಶ್ರೀನಿವಾಸ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೃಷ್ಣಾರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.