ಚಿಂತಾಮಣಿ: ಕೈವಾರ ಹೋಬಳಿ ಮುತ್ತುಕದಹಳ್ಳಿ ಅಶೋಕರೆಡ್ಡಿ ಕುಟುಂಬ ಅರಣ್ಯ ಕೃಷಿ, ಮಿಶ್ರ ಬೇಸಾಯ ಪದ್ಧತಿ ಹಾಗೂ ಸಮಗ್ರ ಕೃಷಿಯಲ್ಲಿ ಉತ್ತಮ ಲಾಭ ಗಳಿಸುತ್ತಿದೆ. ಇದರಲ್ಲೇ ಉತ್ತಮ ಬದುಕು ರೂಪಿಸಿಕೊಂಡಿದೆ.
ಅಶೋಕರೆಡ್ಡಿ ಪದವೀಧರ. ಮಳೆ-ಬೆಳೆ ಇಲ್ಲ ಎಂದು ಉದ್ಯೋಗ ಅರಿಸಿ ಬೆಂಗಳೂರಿಗೆ ತೆರಳಿದ್ದರು. ಕೋವಿಡ್ ಸಂದರ್ಭದಲ್ಲಿ ಗ್ರಾಮಕ್ಕೆ ವಾಪಸ್ ಬಂದವರು ಮತ್ತೆ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಹೋಗದೆ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಕಡಿಮೆ ನೀರಾವರಿ ಬಳಕೆ ಮಾಡುವ ಅರಣ್ಯ ಕೃಷಿಗೆ ಆದ್ಯತೆ ನೀಡಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ 800 ಶ್ರೀಗಂಧದ ಮರ ಬೆಳೆಸಿದ್ದಾರೆ.
ಶ್ರೀಗಂಧ ಪರಾವಲಂಬಿ ಆಗಿರುವುದರಿಂದ ಅದರಲ್ಲಿ 100 ಹೆಬ್ಬೇವು, 50 ನಲ್ಲಿ, ನುಗ್ಗೆ, 50 ಮಹಾಗಣಿ, 20 ತೇಗದ ಮರ ಬೆಳೆಸಿದ್ದಾರೆ. ಶ್ರೀಗಂಧ ದೀರ್ಘಾವಧಿ ಬೆಳೆ ಆಗಿರುವುದರಿಂದ ಇತರ ಮರಗಳಿಂದ ಆದಾಯ ಪಡೆಯುತ್ತಾರೆ. ಮಿಶ್ರ ಬೆಳೆಯಾಗಿ ಮೇವು ಬೆಳೆಯುತ್ತಾರೆ. ಅಧಿಕ ಇಳುವರಿ ಕೊಡುವ ಜೋಳ, 3-4 ತಳಿ ಸೀಮೆಹುಲ್ಲು ಬೆಳೆದಿದ್ದಾರೆ. ಮೇವು ಮಾರಾಟದಿಂದ ಆದಾಯ ಗಳಿಸುತ್ತಾರೆ.
ಎರಡು ಎಕರೆ ಪ್ರದೇಶದಲ್ಲಿ ರೇಷ್ಮೆ ಹುಳುಗಳಿಗೆ ಆಹಾರವಾದ ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಿದ್ದಾರೆ. ಮೂರು ಎಕರೆ ಹೊಲದಲ್ಲಿ ರಾಗಿ, ನೆಲಗಡಲೆ, ತೊಗರಿ, ಹುರುಳಿ ಬೆಳೆಯುತ್ತಾರೆ. ಮನೆಗೆ ಅಗತ್ಯವಾದ ಆಹಾರ ಪದಾರ್ಥ, ಸೊಪ್ಪು ಮೊದಲಾದ ತರಕಾರಿ ಬೆಳೆದುಕೊಳ್ಳುತ್ತಾರೆ. ಟೊಮೆಟೊ, ಕೊತ್ತುಂಬರಿ ಸೊಪ್ಪು, ಕ್ಯಾರೆಟ್, ಕಲ್ಲಂಗಡಿ, ಬೀಟ್ ರೂಟ್, ಕುಂಬಳಕಾಯಿ, ಎಲೆಕೋಸು ಮತ್ತಿತರ ತರಕಾರಿ ಬೆಳೆ ಬೆಳೆಯುತ್ತಾರೆ. ಹೀಗೆ ನಾಲ್ಕಾರು ಬೆಳೆ ಬೆಳೆಯುವ ಮೂಲಕ ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಹುದು ಎನ್ನುತ್ತಾರೆ ಅಶೋಕರೆಡ್ಡಿ.
ಸಮಗ್ರ ಕೃಷಿಗೆ ಪೂರಕವಾಗಿ ಹುಣಸೆ, ಮಹಾಗಣಿ ಮರ ಬೆಳೆಸಿದ್ದಾರೆ. ಮೇಕೆ, ನಾಟಿ ಕೋಳಿ, ಮಲೆನಾಡ ಗಿಡ್ಡ ಹಸು ಸಾಕಾಣಿಕೆ ಮಾಡಿದ್ದಾರೆ. ತಮ್ಮ ತೋಟದಲ್ಲಿ ಸಿಗುವ ಹೆಬ್ಬೇವು ಸೊಪ್ಪ ಅನ್ನು ಮೇಕೆಗಳಿಗೆ ಆಹಾರವಾಗಿ ಬಳಸುತ್ತಾರೆ. ಸೀಮೆಹುಲ್ಲು ಹಸುಗಳಿಗೆ ಬಳಸುತ್ತಾರೆ. ಜೇನು ಕೃಷಿ ಸಹ ಕೈಗೊಂಡಿದ್ದಾರೆ.
ಅವರ ತೋಟದಲ್ಲಿ ಮೂರು ಕೊಳವೆ ಬಾವಿ, ಎರಡು ಕೃಷಿ ಹೊಂಡ ಇವೆ. ಅವರು ಯಾವುದೇ ಒಂದು ಬೆಳೆಗೆ ಜೋತು ಬೀಳದೆ ವಿವಿಧ ಬೆಳೆ ಬೆಳೆಯುತ್ತಾರೆ. ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಕೈಹಿಡಿಯುತ್ತದೆ.
ಕೃಷಿಯನ್ನು ಶ್ರದ್ಧೆಯಿಂದ ಹಾಗೂ ವೈಜ್ಞಾನಿಕವಾಗಿ ಮಾಡಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಆದರೆ, ಕೃಷಿಕರದು ಕಷ್ಟಕರವಾದ ಕೆಲಸ. ಹಗಲು-ರಾತ್ರಿ, ಮಳೆ-ಬಿಸಿಲು ಎನ್ನದೆ ದುಡಿಯಬೇಕಾಗುತ್ತದೆ. ಅನಾವೃಷ್ಟಿಯಿಂದ ಬೆಳೆ ನಷ್ಟ, ಜತೆಗೆ ಬೆಲೆ ಕುಸಿತದ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಕೃಷಿಯಿಂದ ವಿಮುಖರಾಗಿ ಬೇರೆ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುತ್ತಿದ್ದಾರೆ ಎನ್ನುತ್ತಾರೆ ಅಶೋಕರೆಡ್ಡಿ.
ರೈತರು ಪೂರ್ವಿಕರ ಕೃಷಿ ಪದ್ಧತಿಗೆ ಮರುಳಬೇಕು. ಹಿಂದಿನ ಕಾಲದಲ್ಲಿ ಮನೆಗೆ ಅಗತ್ಯವಾದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ, ಸೊಪ್ಪು ಸೇರಿದಂತೆ ಅಗತ್ಯವಾದ ಎಲ್ಲ ತರಕಾರಿ ಬೆಳೆಯುತ್ತಿದ್ದರು. ಮಳೆಯಾಶ್ರಿತ ಕೃಷಿ ಮಾಡುತ್ತಿದ್ದರು. ಆಧುನಿಕ ಯುಗದಲ್ಲಿ ರೈತರು ಹೆಚ್ಚಿನ ಲಾಭದ ಆಸೆಯಿಂದ ಹಿಂದೆ ಬೆಳೆಯುತ್ತಿದ್ದ ಎಲ್ಲ ಬೆಳೆಗಳಿಗೂ ತಿಲಾಂಜಲಿ ನೀಡಿ ಅಧಿಕ ಲಾಭದ ಆಸೆಯಿಂದ ಟೊಮೆಟೊ ಮತ್ತಿತರ ಒಂದೇ ಬೆಳೆಗೆ ಜೋತು ಬೀಳುತ್ತಿದ್ದಾರೆ. ಅಕಸ್ಮಾತ್ ಬೆಳೆ ಹಾಳಾದರೆ ಅಥವಾ ಬೆಲೆ ಕುಸಿತವಾದರೆ ರೈತ ಸಂಪೂರ್ಣವಾಗಿ ನೆಲಕಚ್ಚುತ್ತಾನೆ. ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡರೆ ಒಂದಲ್ಲ ಒಂದು ಬೆಳೆ ಕೈಹಿಡಿಯುತ್ತದೆ ಎನ್ನುವುದು ಅಶೋಕರೆಡ್ಡಿ ಅಭಿಪ್ರಾಯ.
ಸರ್ಕಾರ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಆದರೆ, ಬಹುತೇಕ ರೈತರು ನಿರಾಸಕ್ತಿ ತೋರುತ್ತಾರೆ. ಅವರು ಆಯೋಜಿಸುವ ಕೃಷಿ ಮೇಳ, ತರಬೇತಿಗಳಲ್ಲಿ ಭಾಗವಹಿಸುವುದಿಲ್ಲ. ಆಧುನಿಕ ತಾಂತ್ರಿಕ ಯುಗದಲ್ಲಿ ಆಯಾ ಕಾಲದ ಋತುಮಾನ, ಅವಲೋಕನ ಮಾಡಿ ಬೆಳೆ ಬೆಳೆಯಬೇಕು ಎನ್ನುತ್ತಾರೆ ಅಶೋಕರೆಡ್ಡಿ.
ಸರ್ಕಾರ ಶ್ರೀಗಂಧ ಬೆಳೆಯುವ ಅವಕಾಶ ರೈತರಿಗೆ ನೀಡಿದೆ. ಆದರೆ, ಅನೇಕ ಗೊಂದಲಗಳಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವುದರಿಂದ ಕೊಯ್ಲಿಗೆ ಅನುಮತಿ ಪಡೆಯಬೇಕು. ತೃಪ್ತಿಕರವಾದ ದರ ನೀಡುವುದಿಲ್ಲ. ಕಳ್ಳತನ ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಿಲ್ಲ. ರೈತರಿಗೆ ಬೆಳೆಯಲು ಅವಕಾಶ ನೀಡುವಾಗ ಅದನ್ನು ತೋಟದ ಬೆಳೆಯಾಗಿ ತೋಟಗಾರಿಕೆ ಇಲಾಖೆಗೆ ವಹಿಸಬೇಕು ಎಂದು ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.