ADVERTISEMENT

ಗೌರಿಬಿದನೂರು: ಬಿರುಕು ಬಿಟ್ಟ ಗೋಡೆ, ಕಿತ್ತು ಬರುವ ಸಿಮೆಂಟ್

ಗೌರಿಬಿದನೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಶಾಲಾ ಕೊಠಡಿಗಳು ದುರಸ್ತಿಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 6:17 IST
Last Updated 25 ಜೂನ್ 2024, 6:17 IST
ಗೌರಿಬಿದನೂರಿನ ಹಿರೇಬಿದನೂರು ಸರ್ಕಾರಿ ಶಾಲೆಯ ಗೋಡೆಯಲ್ಲಿ ಬಿರುಕು
ಗೌರಿಬಿದನೂರಿನ ಹಿರೇಬಿದನೂರು ಸರ್ಕಾರಿ ಶಾಲೆಯ ಗೋಡೆಯಲ್ಲಿ ಬಿರುಕು   

ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಶಾಲಾ ಕೊಠಡಿಗಳು ದುರಸ್ತಿಗೆ ಬಂದಿವೆ ಎನ್ನುವ ಕುಖ್ಯಾತಿ ಗೌರಿಬಿದನೂರು ತಾಲ್ಲೂಕಿನದ್ದು. ತಾಲ್ಲೂಕಿನ 149 ಶಾಲೆಗಳಲ್ಲಿ 832 ಕೊಠಡಿಗಳು ಇವೆ. ಈ ಪೈಕಿ 262 ಕೊಠಡಿಗಳು ಶಿಥಿಲವಾಗಿವೆ. ಈ ಕೊಠಡಿಗಳು ಶಿಥಿಲವಾಗಿರುವ ಕಾರಣ ಮಕ್ಕಳು ಭಯದಿಂದ ಪಾಠ ಕೇಳುವಂತೆ ಆಗಿದೆ.

ಕೆಲವು ಶಾಲೆಗಳಲ್ಲಿ ಚಾವಣೆಯ ಸಿಮೆಂಟ್ ಕಿತ್ತು ಬರುತ್ತಿದ್ದರೆ ಕೆಲವು ಕಡೆಗಳಲ್ಲಿ ನೆಲ ಹಾಸು ಕಿತ್ತಿದೆ. ಕಟ್ಟಡಗಳು, ಕೊಠಡಿಗಳು ಸುಣ್ಣ ಬಣ್ಣ ಕಂಡು ಎಷ್ಟೊ ವರ್ಷಗಳೇ ಆಗಿವೆ. ಹೀಗೆ ಸಣ್ಣ ಮಟ್ಟದ ದುರಸ್ತಿಯಿಂದ ಹಿಡಿದು ದೊಟ್ಟ ಮಟ್ಟದ ದುರಸ್ತಿಗಳನ್ನೂ ಶಾಲೆಗಳಲ್ಲಿ ಮಾಡಿಸಬೇಕಾಗಿದೆ. 

ನಗರ ಹೊರವಲಯದ ಹಿರೇಬಿದನೂರು ಸರ್ಕಾರಿ ಶಾಲೆಯಲ್ಲಿ 180ಕ್ಕೂ ಹೆಚ್ಚು ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅಲ್ಲಿ ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯಗಳು ಇಲ್ಲವೇ ಇಲ್ಲ. 

ADVERTISEMENT

ಕಟ್ಟಡದ ಗೋಡೆಗಳು ಕುಸಿಯುವ ಹಂತದಲ್ಲಿವೆ. ಶಾಲೆಯ ಪ್ರತಿ ಕೊಠಡಿಯಲ್ಲೂ ಬಿರುಕು ಎದ್ದು ಕಾಣುತ್ತದೆ. ಗೋಡೆಗಳು ಹಪ್ಪಳದಂತೆ ಕಿತ್ತು ಬರುತ್ತಿವೆ. ಬಣ್ಣವೇ ಇಲ್ಲ. ಶಾಲೆಯ ಬಳಿಯಲ್ಲಿರುವ ಓವರ್ ಹೆಡ್ ಟ್ಯಾಂಕ್ ಶಿಥಿಲವಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಎನ್ನುವ ಆತಂಕ ಪೋಷಕರದ್ದು.

ಶಾಲೆಯ 4 ಕಡೆ ಹಳೆಯ ಮತ್ತು ಹೊಸದಾಗಿ ನಿರ್ಮಿಸಿದ ಹಾಗೂ ಅತ್ಯಾಧುನಿಕ ಶೌಚಾಲಯಗಳಿವೆ. ಆದರೆ ಬಳಕೆಗೆ ಬಾರದಂತೆ ಎಲ್ಲಾ ಕಡೆಯೂ ಬೀಗ ಹಾಕಲಾಗಿದೆ. ಕಾರಣ ಕೇಳಿದರೆ ಬೀಗ ಮಕ್ಕಳಿಗೆ ನೀಡಿದ್ದೇವೆ ಎನ್ನುವ ಉತ್ತರ ದೊರೆಯುತ್ತದೆ.

ಕಳ್ಳರ ಕಾಟ: ಶಾಲೆಯ ಕಿಟಕಿಗಳು, ಬಾಗಿಲುಗಳು ನೀರಿನ ಪೈಪ್‌ಗಳು ಕಳ್ಳತನವಾಗಿವೆ. ಒಂದೆರಡು ಬಾರಿ ಪೊಲೀಸರಿಗೆ ದೂರು ಸಹ ನೀಡಿದ್ದೇವೆ. ಪರಿಶೀಲನೆ ನಡೆಸಿದ್ದಾರೆ. ಆದರೆ ಇತ್ತೀಚೆಗೆ ನೀರಿನ ಪೈಪ್ ಸಹ ಕದ್ದಿದ್ದಾರೆ. ಹೊಸದಾಗಿ ನಿರ್ಮಿಸಿರುವ ಒಂದು ಕಟ್ಟಡದ ಮುಂಭಾಗದಲ್ಲಿ ಅಳವಡಿಸಿರುವ ಟೈಲ್ಸ್  ಸಹ ಕಿತ್ತು ಹಾಕಿದ್ದಾರೆ. ರಾತ್ರಿ ಕುಡುಕರ ಅಡ್ಡೆಯಾಗುತ್ತದೆ ಎನ್ನುತ್ತಾರೆ ಹಿರೇಬಿದನೂರು ಗ್ರಾಮಸ್ಥರು.

ಹಿರೇಬಿದನೂರು ಶಾಲೆಯಲ್ಲಿ ಗೋಡೆಗಳು ಕಿತ್ತಿರುವುದು

ನಗರದ ಹಿರೇಬಿದನೂರು ಶಾಲೆಯ ಗತಿಯೇ ಹೀಗಾದರೆ ತಾಲ್ಲೂಕಿನ ಗ್ರಾಮೀಣ ಶಾಲೆಗಳ ಸ್ಥಿತಿ ಮತ್ತಷ್ಟು ಅಧ್ವಾನ. ಅಲ್ಲೊಂದು ಇಲ್ಲೊಂದು ಶಾಲೆಗಳು ಮಾತ್ರ ಅತ್ಯುತ್ತಮ ಎನ್ನುವ ಸ್ಥಿತಿಯಲ್ಲಿ ಇವೆ. 

ಚೀಕಟಗೆರೆ, ನೆಹರೂ ಜಿ ಕಾಲೊನಿ, ಇಡಗೂರು,ಹುಣಸೇನಹಳ್ಳಿ, ಸಬ್ಬನಹಳ್ಳಿ, ವೀರ್ಲಗೊಲ್ಲಹಳ್ಳಿ, ಚನ್ನೇನಹಳ್ಳಿ, ಕೆ.ಟಿ ಹಳ್ಳಿ, ಕುಡುಮಲಕುಂಟೆ, ಸಿದ್ದೇನಹಳ್ಳಿ, ಗೆದರೆ, ವಾಟದಹೊಸಹಳ್ಳಿ, ಕುಂಟ ಚಿಕ್ಕನಹಳ್ಳಿ, ಮೇಳ್ಯ, ಕಡಬೂರು ಹೀಗೆ ಹಲವು ಗ್ರಾಮಗಳ ಶಾಲೆಗಳಲ್ಲಿ ಕೊಠಡಿಗಳ ದುರಸ್ತಿ ಕಾರ್ಯ ನಡೆಯಬೇಕಿದೆ

ನೆಹರೂ ಕಾಲೊನಿ ಶಾಲೆಯ ಚಾವಣಿಯ ಸ್ಥಿತಿ

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಾಲೆಗಳ ಪಾತ್ರವೇ ಹಿರಿದು. ಆದರೆ ಗೌರಿಬಿದನೂರಿನ ಕೆಲವು ಶಾಲೆಗಳ ಸ್ಥಿತಿ ನೀಡಿದರೆ ಕನಿಷ್ಠ ಸೌಲಭ್ಯಗಳೂ ಇಲ್ಲ. ಗ್ರಾಮೀಣ ಭಾಗದ ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ. ಇದ್ದರೂ  ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿವೆ. 

ನಂಜುಂಡಪ್ಪ ವರದಿ; ವಿಶೇಷ ಅನುದಾನ

ನಂಜುಂಡಪ್ಪ ವರದಿಯ ಪ್ರಕಾರ ಬಾಗೇಪಲ್ಲಿ ಮತ್ತು ಗೌರಿಬಿದನೂರು ಅತಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿವೆ. ಈ ಕಾರಣದಿಂದ ಈ ಎರಡೂ ತಾಲ್ಲೂಕುಗಳ 44 ಶಾಲೆಗಳ 47 ಕೊಠಡಿಗಳ ದುರಸ್ತಿಗೆ ಸರ್ಕಾರದಿಂದ ವಿಶೇಷ ಅನುದಾನ ದೊರೆತಿದೆ. ‌ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 34 ಶಾಲೆಗಳಲ್ಲಿನ ಕೊಠಡಿಗಳ ದುರಸ್ತಿಗೆ ತಲಾ ₹ 10 ಲಕ್ಷ ಸಹ ಮಂಜೂರಾಗಿದೆ ಎನ್ನುತ್ತದೆ ಶಿಕ್ಷಣ ಇಲಾಖೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಶಾಲಾ ಕೊಠಡಿಗಳ ದುರಸ್ತಿಗಾಗಿ ಎಸ್‌ಸಿಪಿ ಟಿಎಸ್‌ಪಿ ಅನುದಾನದ ಅಡಿಯಲ್ಲಿ ₹ 54.24 ಲಕ್ಷ ಹಣ ಮಂಜೂರಾಗಿದೆ. ಆ ಹಣ ಗೌರಿಬಿದನೂರು ಕ್ಷೇತ್ರಕ್ಕೂ ಬಿಡುಗಡೆಯಾಗಿದ್ದು ಶಾಲೆಗಳ ಕೊಠಡಿ ದುರಸ್ತಿಗೆ ಕ್ರಮವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸುವರು. 

ಶೀಘ್ರ ದುರಸ್ತಿ ಕೆಲಸ

ಶಾಲಾ ಕೊಠಡಿಗಳ ದುರಸ್ತಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ. ಎಲ್ಲಿ ಎಲ್ಲಿ ಕೊಠಡಿಗಳು ದುರಸ್ತಿಗೆ ಬಂದಿವೆ ಎನ್ನುವುದನ್ನು ಈಗಾಗಲೇ ಗುರುತಿಸಲಾಗಿದೆ. ದುರಸ್ತಿಗೆ ಯೋಜನೆಗಳು ಸಹ ಸಿದ್ಧವಾಗುತ್ತಿವೆ. ಸಮಸ್ಯೆ ಇದ್ದ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ‍ಪಾಠಗಳಿಗೆ ತೊಂದರೆಯಿಲ್ಲ. ಶೀಘ್ರದಲ್ಲಿಯೇ ದುರಸ್ತಿಗೆ ಬಂದಿರುವ ಕೊಠಡಿಗಳನ್ನು ಸರಿಪಡಿಸಲಾಗುವುದು.

ಶ್ರೀನಿವಾಸಮೂರ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಗೌರಿಬಿದನೂರು

ದುರಸ್ತಿಗೆ ಗಮನವಿಲ್ಲ

20 ವರ್ಷಗಳ ಮೇಲ್ಪಟ್ಟ ಕೊಠಡಿಗಳು ಸುಸ್ಥಿತಿಯಲ್ಲಿ ಇವೆಯೇ ಇಲ್ಲವೆ ಎನ್ನುವ ಬಗ್ಗೆ ಅಧಿಕಾರಿಗಳು ಗಮನವಹಿಸಬೇಕು. ಆದರೆ ಆ ಕೆಲಸ ಮಾಡುತ್ತಿಲ್ಲ. ಅವರಿಗೆ ಹತ್ತಿರವಿರುವ ಮತ್ತು ಅವರಿಗೆ ಬೇಕಾದ ಶಾಲೆಗಳ ಕೊಠಡಿಗಳ ದುರಸ್ತಿಗೆ ಮೊದಲ ಆದ್ಯತೆ ನೀಡುತ್ತಾರೆ. ಉಳಿದ ಶಾಲೆಗಳ ಕೊಠಡಿಗಳ ದುರಸ್ತಿ ಯಾವ ಕಾಲಕ್ಕೆ ಆಗುತ್ತದೆಯೊ ಗೊತ್ತಿಲ್ಲ.

ಅಶೋಕ್ ಎಸ್‌ಡಿಎಂಸಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕರೇಕಲ್ಲಹಳ್ಳಿ ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.